ಸಾವನ್ನು ಗೆದ್ದು ಬಂದನೇ ಶರಿಫ್​..? ಉತ್ತರ ಪ್ರದೇಶದ ವ್ಯಕ್ತಿಗೆ ಸಿಕ್ತು ಎಸ್​ಐಆರ್​ನಿಂದ ಪುನರ್ಜನ್ಮ..ಏನಿದು ಕಥೆ..? | UP Man Resurfaces

UP Man Resurface | 28 ವರ್ಷಗಳ ಬಳಿಕ ಊರಿಗೆ ಮರಳಿದ ವೃದ್ಧ ಶರೀಫ್
UP Man Resurface | 28 ವರ್ಷಗಳ ಬಳಿಕ ಊರಿಗೆ ಮರಳಿದ ವೃದ್ಧ ಶರೀಫ್
Published on
ಲಖನೌ: ಸುಮಾರು ಮೂರು ದಶಕಗಳ ಹಿಂದೆಯೇ ಸತ್ತಿದ್ದಾರೆಂದು ಭಾವಿಸಲಾದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಸಿನಿಮಯ ರೀತಿಯಲ್ಲಿ ಪ್ರತ್ಯಕ್ಷನಾಗಿ ಮನೆಗೆ ಮರಳಿದ್ದು, ಈ ಭಾವನಾತ್ಮಕ ಕ್ಷಣ ಉತ್ತರ ಪ್ರದೇಶದ ಮುಜಫರ್​ನಗರ ಜಿಲ್ಲೆಯಲ್ಲಿ ನಡೆದಿದೆ. 
ಖತೌಲಿ ಪಟ್ಟಣದ ಮೊಹಲ್ಲಾ ಬಲ್ಕಾರಾಂನ ವೃದ್ಧ ಶರೀಫ್, 28 ವರ್ಷಗಳ ಬಳಿಕ ತಮ್ಮ ಕುಟುಂಬಕ್ಕೆ ಮರಳಿದ್ದಾರೆ. ಇದು ಸಂಬಂಧಿಕರು ಮತ್ತು ಸ್ಥಳೀಯರನ್ನು ಭಾವುಕತೆಗೆ ದೂಡಿದ್ದು, ಎಸ್​ಐಆರ್​ ಪ್ರಕ್ರಿಯೆಗೆ ದಾಖಲೆಗಳನ್ನು ಸಲ್ಲಿಸಲು ಷರೀಫ್‌ ಅಣಿಯಾದಾಗ ಈ ಅನಿರೀಕ್ಷಿತ ಪುನರ್ಮಿಲನ ಸಂಭವಿಸಿದೆ.

ಏನಿದು ಘಟನೆ?

ಶರೀಫ್​ರ ಮೊದಲ ಪತ್ನಿ 1997 ರಲ್ಲಿ ನಿಧನರಾದರು. ಆಕೆಯ ಮರಣದ ಬಳಿಕ ಮರುಮದುವೆಯಾಗಿ ತಮ್ಮ ಎರಡನೇ ಪತ್ನಿಯೊಂದಿಗೆ ಪಶ್ಚಿಮ ಬಂಗಾಳಕ್ಕೆ ತೆರಳಿದರು. ಸ್ವಲ್ಪ ಸಮಯದವರೆಗೆ, ಕುಟುಂಬವು ದೂರವಾಣಿ ಸಂಭಾಷಣೆ ಮೂಲಕ ಸಂಪರ್ಕದಲ್ಲಿತ್ತು, ಆದರೆ ಕ್ರಮೇಣ ಸಂವಹನವು ಮುರಿದುಬಿದ್ದಿದೆ. 
ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಅವರು ತಿಳಿಸಿದ್ದ ವಿಳಾಸವನ್ನು ಪತ್ತೆಹಚ್ಚಲು ಕುಟುಂಬ ಸದಸ್ಯರು ಹಲವಾರು ಪ್ರಯತ್ನಗಳನ್ನು ಮಾಡಿದರೂ, ಯಾವುದೇ ಮಾಹಿತಿ ಸಿಗಲಿಲ್ಲ. ಅಂತಿಮವಾಗಿ ಆತ ಮೃತಪಟ್ಟಿದ್ದಾನೆ ಎಂದು ಭಾವಿಸಿ, ಧಾರ್ಮಿಕ ವಿಧಿವಿಧಾನಗಳನ್ನೂ ಸಹ ಪೂರೈಸಲಾಗಿತ್ತು. ಆದರೆ, ಈಗ ಆತ ದಿಢೀರನೆ ತನ್ನ ಗ್ರಾಮಕ್ಕೆ ಮರಳುವ ಮೂಲಕ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾನೆ.

 ಪುನರ್ಮಿಲನಕ್ಕೆ ಕಾರಣವಾಯ್ತು ಎಸ್​ಐಆರ್..

ಸದ್ಯ ಅನೇಕ ರಾಜ್ಯಗಳಲ್ಲಿ ನಡೆಯುತ್ತಿರುವಂತೆ ಉತ್ತರ ಪ್ರದೇಶದಲ್ಲೂ ಕೂಡ ಎಸ್​ಐಆರ್​ ಪ್ರಕ್ರಿಯೆಗೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ದಾಖಲೆಗಳನ್ನು ತರಲು ಎರಡು ದಿನಗಳ ಹಿಂದೆ ತಮ್ಮ ಮೂಲ ಊರಿಗೆ ಮರಳಿದರು. 28 ವರ್ಷಗಳ ಬಳಿಕ ಶರಿಪ್​ರ ಈ ಹಠಾತ್ ಪುನರಾಗಮನವು ಕುಟುಂಬ ಸದಸ್ಯರು, ನೆರೆಹೊರೆಯವರು ಮತ್ತು ಸಂಬಂಧಿಕರಲ್ಲಿ ಸಂತೋಷವನ್ನುಂಟು ಮಾಡಿದೆ.
ಶರಿಫ್​ರ ಈ ಆಗಮನವು ದೊಡ್ಡ ಸುದ್ದಿಯಾಗಿದ್ದು, ಜನರು ಅವರನ್ನು ಭೇಟಿಯಾಗಲು ಆಗಮಿಸುತ್ತಿದ್ದು, ದೂರದ ಸಂಬಂಧಿಕರು ವಿಡಿಯೋ ಕಾಲ್​ ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ. 1997 ರಲ್ಲಿ ತಮ್ಮ ಎರಡನೇ ವಿವಾಹದ ಸಮಯದಲ್ಲಿನ ಸಂವಹನ ಸೌಲಭ್ಯಗಳ ಕೊರತೆಯಿಂದಾಗಿ ತಮ್ಮ ಕುಟುಂಬದೊಂದಿಗೆ ಸಂಪರ್ಕವನ್ನು ಕಳೆದುಕೊಂಡರು ಎಂದು ಶರೀಫ್ ತಿಳಿಸಿದ್ದು, ಸರ್ಕಾರಿ ದಾಖಲೆಗಳ ಅಗತ್ಯವಿದ್ದ ಕಾರಣ ಮಾತ್ರ ಇಲ್ಲಿಗೆ ಹಿಂತಿರುಗಿದ್ದು, ಬಂದ ಕೆಲಸ ಪೂರ್ಣಗೊಂಡ ಬಳಿಕ ಮತ್ತೆ ಬಂಗಾಳಕ್ಕೆ ಹೋಗುವುದಾಗಿ ತಿಳಿಸಿದ್ದಾರೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net