ರಷ್ಯಾ ತೈಲ ಖರೀದಿಗೆ ಅಮೆರಿಕಾ ಅನುಮತಿ ಹೇಳಿಕೆ; ಎಲ್ಲಾ ರಾಜಿ ಮಾಡಿಕೊಂಡ ವ್ಯಕ್ತಿ ಪರಿಣಾಮ ಎಂದು ಮೋದಿ ವಿರುದ್ಧ ರಾಹುಲ್ ವಾಗ್ದಾಳಿ | Rahul Gandhi

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Published on
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಉಲ್ಬಣಗೊಳ್ಳುವ ತೈಲ ಬಿಕ್ಕಟ್ಟನ್ನು ನಿವಾರಿಸಲು ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸಲು 30 ದಿನ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂಬ ಅಮೆರಿಕಾದ ಹೇಳಿಕೆ ಬೆನ್ನಲ್ಲೇ, ಭಾರತದ ವಿದೇಶಾಂಗ ನೀತಿ ‘ರಾಜಿ ಮಾಡಿಕೊಂಡ ವ್ಯಕ್ತಿಯ ಶೋಷಣೆಯಿಂದ’ ನಡೆಯುತ್ತದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಭಾರತದ ವಿದೇಶಾಂಗ ನೀತಿಯು ನಮ್ಮ ಜನರ ಸಾಮೂಹಿಕ ಇಚ್ಛಾಶಕ್ತಿಯಿಂದ ಹೊರಹೊಮ್ಮುತ್ತದೆ. ಅದು ನಮ್ಮ ಇತಿಹಾಸ, ನಮ್ಮ ಭೌಗೋಳಿಕತೆ, ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದ ನಮ್ಮ ಆಧ್ಯಾತ್ಮಿಕ ನೀತಿಯಲ್ಲಿ ಬೇರೂರಿರಬೇಕು. ಇಂದು ನಾವು ನೋಡುತ್ತಿರುವುದು ನೀತಿಯಲ್ಲ. ಇದು ರಾಜಿ ಮಾಡಿಕೊಂಡ ವ್ಯಕ್ತಿಯ ಶೋಷಣೆಯ ಪರಿಣಾಮವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಫೆ. 11ರಂದು ಲೋಕಸಭೆಯಲ್ಲಿ ಬಜೆಟ್ ಮೇಲೆ ಮಾತನಾಡಿರುವ ವಿಡಿಯೋವನ್ನು ಪೋಸ್ಟ್​​ನಲ್ಲಿ ಹಂಚಿಕೊಂಡಿರುವ ಅವರು, ನಾವು ಯಾರಿಂದ ತೈಲ ಖರೀದಿಸಬೇಕು ಅಥವಾ ಖರೀದಿಸಬಾರದು ಎಂಬುದನ್ನು ಅಮೆರಿಕ ನಮಗೆ ಹೇಳುತ್ತದೆ. ಅದು ರಷ್ಯಾ ಅಥವಾ ಇರಾನ್ ಆಗಿದ್ದರೆ, ಅಮೆರಿಕ ಅದನ್ನು ನಿರ್ಧರಿಸುತ್ತದೆ. ನಮ್ಮ ಪ್ರಧಾನಿ ನಿರ್ಧರಿಸುವುದಿಲ್ಲ ಎಂಬ ಮಾತು ನಿಜವಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ, ಎಪ್ಸ್ಟಿಯನ್ ಫೈಲ್ಸ್ ಮತ್ತು ಅದಾನಿ ಪ್ರಕರಣದಲ್ಲಿ ಪ್ರಧಾನಿ ಮೋದಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿರುವುದರಿಂದ ಭಾರತದ ಸ್ವಾಯತ್ತತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವು ತೀವ್ರ ಅಪಾಯದಲ್ಲಿದೆ ಎಂದು ಆರೋಪಿಸಿದ್ದಾರೆ.

ರಷ್ಯಾ ತೈಲ ಖರೀದಿ ಬಗ್ಗೆ ಅಮೆರಿಕಾ ಹೇಳಿದ್ದೇನು? 

ಪಶ್ಚಿಮ ಏಷ್ಯಾದಲ್ಲಿ ಇರಾನ್ ವಿರುದ್ಧ ಇಸ್ರೇಲ್-ಅಮೆರಿಕಾ ಯುದ್ಧದ ಭಾರತದಲ್ಲಿ ಉಲ್ಭಣಗೊಳ್ಳಬಹುದಾದ ತೈಲ ಬಿಕ್ಕಟ್ಟನ್ನು ನಿವಾರಿಸಲು ಭಾರತೀಯ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ಖರೀದಿಸಲು ಅವಕಾಶ ನೀಡಲು ತಾತ್ಕಾಲಿಕವಾಗಿ 30 ದಿನಗಳ ವಿನಾಯಿತಿ ನೀಡುತ್ತಿರುವುದಾಗಿ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಮ್ಮ ಎಕ್ಸ್​ ಖಾತೆಯಲ್ಲಿ ಹೇಳಿದ್ದಾರೆ. 
ಈ ಅಲ್ಪಾವಧಿಯ ಕ್ರಮ ರಷ್ಯಾ ಸರ್ಕಾರಕ್ಕೆ ಗಮನಾರ್ಹ ಆರ್ಥಿಕ ಪ್ರಯೋಜನವನ್ನು ನೀಡುವುದಿಲ್ಲ. ಏಕೆಂದರೆ ಇದು ಈಗಾಗಲೇ ಸಮುದ್ರದಲ್ಲಿ ಸಿಲುಕಿರುವ ತೈಲವನ್ನು ಒಳಗೊಂಡ ವಹಿವಾಟುಗಳನ್ನು ಮಾತ್ರ ಅಧಿಕೃತಗೊಳಿಸುತ್ತದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net