ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ನಾಗರಿಕ ಸೇವಾ ಪರೀಕ್ಷೆಯನ್ನು ನಡೆಸುವ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸ್ಥಾಪನೆಯಾಗಿ ಇಂದಿಗೆ (ಅಕ್ಟೋಬರ್ 1) 100 ವರ್ಷ. 1926ರಲ್ಲಿ ಆರಂಭವಾದ ಲೋಕಸೇವಾ ಆಯೋಗವು ಸ್ವಾತಂತ್ರ್ಯಪೂರ್ವದಲ್ಲಿ ಸಲಹಾ ಸಂಸ್ಥೆಯಾಗಿತ್ತು. ದೇಶ ಸ್ವತಂತ್ರವಾದ ಬಳಿಕ ಸಾಂವಿಧಾನಿಕ ಸಂಸ್ಥೆಯಾಗಿ ರೂಪಾಂತರಗೊಂಡಿತು. ಐಎಎಸ್, ಐಪಿಎಸ್ ಸೇರಿದಂತೆ ಹಲವು ಕೇಂದ್ರ ಸೇವೆಗಳಿಗೆ ಅರ್ಹರನ್ನು ನೇಮಕ ಮಾಡುವ ಗುರುತರ ಹೊಣೆಗಾರಿಕೆಯನ್ನು ಅದು ಈಗ ನಿಭಾಯಿಸುತ್ತಿದೆ. ಪರೀಕ್ಷಾ ಪದ್ಧತಿ, ಭಾಷೆ, ಪಠ್ಯಕ್ರಮ, ಮೀಸಲಾತಿ, ತಂತ್ರಜ್ಞಾನ ಮತ್ತು ಅಭ್ಯರ್ಥಿಗಳ ಸಾಮಾಜಿಕ ಹಿನ್ನೆಲೆಗಳಲ್ಲಿ ಕಳೆದ ಶತಮಾನದಲ್ಲಿ ದೊಡ್ಡ ಬದಲಾವಣೆಗಳಾಗಿದ್ದು, ಯುಪಿಎಸ್ಸಿ ಈಗ ಲಕ್ಷಾಂತರ ಯುವಕರ ಕನಸಿನ ಕೇಂದ್ರವಾಗಿದೆ.
ಒಂದು ಕಾಲದಲ್ಲಿ ಬ್ರಿಟಿಷ್ ಆಡಳಿತಕ್ಕೆ ಅಗತ್ಯವಿದ್ದ ಅಧಿಕಾರಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯ ಭಾಗವಾಗಿದ್ದ ಸಂಸ್ಥೆಯೊಂದು, ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭವಾಗಿ ರೂಪುಗೊಂಡಿರುವುದು ಯುಪಿಎಸ್ಸಿಯ ಶತಮಾನದ ಪಯಣದ ವಿಶೇಷತೆ. 1926ರ ಅಕ್ಟೋಬರ್ 1ರಂದು ಭಾರತದಲ್ಲಿ ಮೊದಲ ಲೋಕಸೇವಾ ಆಯೋಗ ಸ್ಥಾಪನೆಯಾಯಿತು. 1924ರಲ್ಲಿ ಲೀ ಆಯೋಗ ನೀಡಿದ ಶಿಫಾರಸಿನ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ಕಾಯ್ದೆ-1919ರ ವ್ಯವಸ್ಥೆಯಡಿ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಸರ್ ರಾಸ್ ಬಾರ್ಕರ್ ಮೊದಲ ಅಧ್ಯಕ್ಷರಾಗಿದ್ದರು. ಆರಂಭದಲ್ಲಿ ಆಯೋಗದ ಅಧಿಕಾರಗಳು ಸೀಮಿತವಾಗಿದ್ದವು. ಬಳಿಕ 1935ರ ಭಾರತ ಸರ್ಕಾರ ಕಾಯ್ದೆಯಡಿ ಫೆಡರಲ್ ಲೋಕಸೇವಾ ಆಯೋಗ ರಚನೆಯಾಯಿತು. ಸ್ವಾತಂತ್ರಾ್ಯನಂತರ ಇದೇ ಸಂಸ್ಥೆ ಕೇಂದ್ರ ಲೋಕಸೇವಾ ಆಯೋಗವಾಗಿ ರೂಪುಗೊಂಡಿತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದ ಬಳಿಕ ಯುಪಿಎಸ್ಸಿಗೆ ಸಂವಿಧಾನಿಕ ಸ್ಥಾನಮಾನ ದೊರೆಯಿತು. ಇಂದು ಯುಪಿಎಸ್ಸಿ ಕೇವಲ ನಾಗರಿಕ ಸೇವಾ ಪರೀಕ್ಷೆ ನಡೆಸುವ ಸಂಸ್ಥೆಯಲ್ಲ. ಕೇಂದ್ರ ಸರ್ಕಾರದ ವಿವಿಧ ಸೇವೆಗಳಿಗೆ ಪರೀಕ್ಷೆ, ನೇರ ನೇಮಕಾತಿ, ಬಡ್ತಿ, ನಿಯಮ ರೂಪಣೆ ಹಾಗೂ ಕೆಲವು ಶಿಸ್ತು ಸಂಬಂಧಿತ ವಿಷಯಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡುವ ಜವಾಬ್ದಾರಿಯನ್ನೂ ಹೊಂದಿದೆ. ಸಂವಿಧಾನದ 315ರಿಂದ 323ರವರೆಗಿನ ವಿಧಿಗಳು ಲೋಕಸೇವಾ ಆಯೋಗಗಳಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ವಿವರಿಸುತ್ತವೆ. ವಿಧಿ 320ರಡಿ ಕೇಂದ್ರ ಸೇವೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸುವುದು ಆಯೋಗದ ಪ್ರಮುಖ ಕರ್ತವ್ಯವಾಗಿದೆ.
ಕಳೆದ ಶತಮಾನದಲ್ಲಿ ಯುಪಿಎಸ್ಸಿಯೊಂದಿಗೆ ಹೆಚ್ಚು ಗುರುತಿಸಿಕೊಂಡಿ ರುವುದು ನಾಗರಿಕ ಸೇವಾ ಪರೀಕ್ಷೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಹೊಣೆಗಾರಿಕೆ ವಹಿಸುವ ಅಧಿಕಾರಿಗಳ ಆಯ್ಕೆಗೆ ಹಲವು ಹಂತಗಳ ಪರೀಕ್ಷಾ ವ್ಯವಸ್ಥೆ ರೂಪುಗೊಂಡಿದೆ. ಪ್ರಸ್ತುತ ನಾಗರಿಕ ಸೇವಾ ಪರೀಕ್ಷೆಯು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಎಂಬ ಹಂತಗಳನ್ನು ಒಳಗೊಂಡಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಸಾಮಾನ್ಯ ಅಧ್ಯಯನ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ವಿವಿಧ ವಿಷಯಗಳ ಜ್ಞಾನ, ವಿಶ್ಲೇಷಣಾ ಸಾಮರ್ಥ್ಯ, ಬರವಣಿಗೆ ಹಾಗೂ ಅಭಿವ್ಯಕ್ತಿ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಅಂತಿಮ ಹಂತದಲ್ಲಿ ವ್ಯಕ್ತಿತ್ವ ಪರೀಕ್ಷೆ ನಡೆಯುತ್ತದೆ. ಈ ಹಂತಗಳ ಮೂಲಕ ಪಠ್ಯಜ್ಞಾನವಷ್ಟೇ ಅಲ್ಲದೆ ಆಡಳಿತಾತ್ಮಕ ಹೊಣೆಗಾರಿಕೆ ನಿಭಾಯಿಸಲು ಅಗತ್ಯವಾದ ವಿಶ್ಲೇಷಣೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ಅರಿವಿನಂತಹ ಅಂಶಗಳನ್ನು ಅಳೆಯುವ ಉದ್ದೇಶವಿದೆ. ಪರೀಕ್ಷೆಯ ಭಾಷಾ ವ್ಯಾಪ್ತಿಯೂ ವಿಸ್ತರಿಸಿದೆ. ಪ್ರಸ್ತುತ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆಗಳು ಮತ್ತು ಸಾಹಿತ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. 2025ರ ಮುಖ್ಯ ಪರೀಕ್ಷೆಗೆ ಕನ್ನಡ ಕಡ್ಡಾಯ ಭಾಷಾ ಪತ್ರಿಕೆ ಹಾಗೂ ಕನ್ನಡ ಸಾಹಿತ್ಯದ ಐಚ್ಛಿಕ ಪತ್ರಿಕೆಗಳ ಪ್ರಶ್ನೆಪತ್ರಿಕೆಗಳೂ ಪ್ರಕಟವಾಗಿವೆ.
ಯುಪಿಎಸ್ಸಿಯ ಶತಮಾನೋತ್ಸವದ ಸಂದರ್ಭದಲ್ಲಿನ ಪ್ರಮುಖ ಚರ್ಚೆಗಳಲ್ಲಿ ತಂತ್ರಜ್ಞಾನವೂ ಒಂದು. ಅರ್ಜಿ ಸಲ್ಲಿಕೆಯಿಂದ ಪ್ರವೇಶಪತ್ರ, ಪ್ರಶ್ನೆಪತ್ರಿಕೆ, ಫಲಿತಾಂಶ ಮತ್ತು ಅಭ್ಯರ್ಥಿಗಳ ಅಂಕಗಳ ಪ್ರಕಟಣೆವರೆಗೆ ಹಲವು ಹಂತಗಳು ಈಗ ಡಿಜಿಟಲ್ ವ್ಯವಸ್ಥೆಯೊಂದಿಗೆ ಜೋಡಿಸಿಕೊಂಡಿವೆ. ಯುಪಿಎಸ್ಸಿ ತನ್ನ ಹೊಸ ಆನ್ಲೈನ್ ಅರ್ಜಿ ವ್ಯವಸ್ಥೆಯನ್ನೂ ಬಳಸುತ್ತಿದೆ. ಅಧಿಕೃತ ಜಾಲತಾಣದಲ್ಲಿ ಪರೀಕ್ಷಾ ವೇಳಾಪಟ್ಟಿ, ಅಧಿಸೂಚನೆ, ಪ್ರಶ್ನೆಪತ್ರಿಕೆ, ಫಲಿತಾಂಶ ಮತ್ತು ಇತರ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದೆ.
ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ವಿಸ್ತರಣೆಯ ಹಿನ್ನೆಲೆಯಲ್ಲಿ ಪರೀಕ್ಷಾ ಭದ್ರತೆ, ಪ್ರಶ್ನೆಪತ್ರಿಕೆಗಳ ಗೌಪ್ಯತೆ, ಮೌಲ್ಯಮಾಪನದ ನಿಖರತೆ ಮತ್ತು ಅಭ್ಯರ್ಥಿಗಳ ಮಾಹಿತಿಯ ಸುರಕ್ಷತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖ್ಯವಾಗಲಿವೆ. ಇದೇ ವೇಳೆ ತಂತ್ರಜ್ಞಾನವನ್ನು ಬಳಸಿಕೊಂಡು ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಸುಲಭ, ವೇಗ ಮತ್ತು ಪಾರದರ್ಶಕಗೊಳಿಸುವ ಅವಕಾಶವೂ ಇದೆ.
ಯುಪಿಎಸ್ಸಿ ಪರೀಕ್ಷೆ ಇಂದು ದೇಶದ ವಿವಿಧ ಭಾಗಗಳ ಯುವಜನರನ್ನು ಸೆಳೆಯುತ್ತಿದೆ. ಮಹಾನಗರಗಳಷ್ಟೇ ಅಲ್ಲದೆ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಿಂದಲೂ ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಆಡಳಿತ ಸೇವೆಗೆ ಸೇರುವ ಅವಕಾಶವು ಸಾಮಾಜಿಕ ಮತ್ತು ಭೌಗೋಳಿಕ ಹಿನ್ನೆಲೆಯ ಮಿತಿಗಳನ್ನು ದಾಟುವ ಒಂದು ಮಾರ್ಗವಾಗಿ ಕಾಣಿಸಿಕೊಂಡಿದೆ. ಇದರೊಂದಿಗೆ ಸ್ಪರ್ಧೆಯ ತೀವ್ರತೆಯೂ ಹೆಚ್ಚಿದೆ. ಪ್ರತಿವರ್ಷ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ; ಅಂತಿಮವಾಗಿ ಸೀಮಿತ ಸಂಖ್ಯೆಯ ಅಭ್ಯರ್ಥಿಗಳು ಮಾತ್ರ ವಿವಿಧ ಸೇವೆಗಳಿಗೆ ಶಿಫಾರಸಾಗುತ್ತಾರೆ. ಯುಪಿಎಸ್ಸಿ 2025ರ ನಾಗರಿಕ ಸೇವಾ ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶವನ್ನೂ 2026ರ ಮಾರ್ಚ್ನಲ್ಲಿ ಪ್ರಕಟಿಸಿದೆ.
ಯುಪಿಎಸ್ಸಿ ಎಂದರೆ ಸಾಮಾನ್ಯವಾಗಿ ಐಎಎಸ್ ಪರೀಕ್ಷೆ ಎಂಬ ಕಲ್ಪನೆ ಇದೆ. ವಾಸ್ತವದಲ್ಲಿ ಆಯೋಗ ನಡೆಸುವ ಪರೀಕ್ಷೆಗಳ ವ್ಯಾಪ್ತಿ ಅದಕ್ಕಿಂತ ಬಹಳ ದೊಡ್ಡದು. ನಾಗರಿಕ ಸೇವಾ ಪರೀಕ್ಷೆಯ ಮೂಲಕ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ, ಭಾರತೀಯ ವಿದೇಶಾಂಗ ಸೇವೆ ಸೇರಿದಂತೆ ಹಲವು ಕೇಂದ್ರ ಸೇವೆಗಳಿಗೆ ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗುತ್ತದೆ. ಇದರ ಜತೆಗೆ ಭಾರತೀಯ ಅರಣ್ಯ ಸೇವೆ, ಇಂಜಿನಿಯರಿಂಗ್ ಸೇವೆ, ಸಂಯುಕ್ತ ವೈದ್ಯಕೀಯ ಸೇವೆ, ರಕ್ಷಣಾ ಸೇವೆಗಳು, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೌಕಾ ಅಕಾಡೆಮಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಹಾಯಕ ಕಮಾಂಡೆಂಟ್ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳನ್ನು ಯುಪಿಎಸ್ಸಿ ನಡೆಸುತ್ತದೆ. ಅದರ ಹೊರತಾಗಿಯೂ ವಿವಿಧ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆಯೋಗ ಸಂದರ್ಶನ ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ನಡೆಸುತ್ತದೆ. 2026ರಲ್ಲಿಯೂ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಯುಪಿಎಸ್ಸಿ ಅಧಿಸೂಚನೆಗಳನ್ನು ಹೊರಡಿಸಿದೆ.
ಯುಪಿಎಸ್ಸಿಯ ಮುಂಬರುವ ವರ್ಷಗಳಲ್ಲಿ ಆಡಳಿತದ ಸ್ವರೂಪವೇ ಬದಲಾಗಲಿದೆ. ಕೃತಕ ಬುದ್ಧಿಮತ್ತೆ, ಹವಾಮಾನ ಬದಲಾವಣೆ, ಸೈಬರ್ ಭದ್ರತೆ, ನಗರೀಕರಣ, ಆರೋಗ್ಯ, ತಂತ್ರಜ್ಞಾನ, ಜಾಗತಿಕ ಆರ್ಥಿಕ ಬದಲಾವಣೆಗಳಂತಹ ಸಂಕೀರ್ಣ ವಿಷಯಗಳನ್ನು ನಿಭಾಯಿಸಬಲ್ಲ ಅಧಿಕಾರಿಗಳ ಅಗತ್ಯ ಹೆಚ್ಚುತ್ತಿದೆ. ಹೀಗಾಗಿ ಕೇವಲ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯಕ್ಕಿಂತ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ರೂಪಿಸುವ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ಸಿಗುವ ಸಾಧ್ಯತೆ ಇದೆ. ‘ಆಯೋಗದ ಶತಮಾನೋತ್ಸವದ ಸಂದರ್ಭದಲ್ಲಿ ಆಧುನೀಕರಣ, ಯುವಜನರೊಂದಿಗೆ ಹೆಚ್ಚಿನ ಸಂಪರ್ಕ ಮತ್ತು ಡಿಜಿಟಲ್ ಪರಿವರ್ತನೆಗೆ ಒತ್ತು ನೀಡಲಾಗುತ್ತಿದೆ’ ಎಂದು ಯುಪಿಎಸ್ಸಿ ಅಧ್ಯಕ್ಷ ಅಜಯ್ ಕುಮಾರ್ ಹೇಳಿದ್ದಾರೆ. ಯುಪಿಎಸ್ಸಿಗೆ ತನ್ನ ಮೂಲ ಉದ್ದೇಶವಾದ ಅರ್ಹತೆ ಆಧಾರಿತ ನೇಮಕಾತಿಯ ಜತೆಗೆ ಪಾರದರ್ಶಕತೆ, ಸಮಾನ ಅವಕಾಶ ಮತ್ತು ಬದಲಾಗುತ್ತಿರುವ ಆಡಳಿತದ ಅಗತ್ಯಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಮುಂದುವರಿಸುವ ಸವಾಲಿದೆ.