4 ಪ್ರಯತ್ನ, ಸಾಲು ಸಾಲು ತ್ಯಾಗ, ಕೊನೆಗೆ ರದ್ದಿ ವ್ಯಾಪಾರಿಗೆ ಹೋದ ಪುಸ್ತಕಗಳು: ವೈರಲ್ ಆಯ್ತು ಯುಪಿಎಸ್‌ಸಿ ಆಕಾಂಕ್ಷಿಯ ಭಾವುಕ ಪೋಸ್ಟ್! UPSC Exam

 UPSC Exam ಸಾಂದರ್ಭಿಕ ಚಿತ್ರ
UPSC Exam ಸಾಂದರ್ಭಿಕ ಚಿತ್ರ
Published on

UPSC Exam:

ಯುಪಿಎಸ್‌ಸಿ (UPSC) ಪರೀಕ್ಷೆಯ ತಯಾರಿ ಎಂಬುದು ಕೋಟ್ಯಂತರ ಯುವಕರ ಪಾಲಿಗೆ ಕೇವಲ ಒಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲ, ಅದೊಂದು ಕನಸು, ಕಠಿಣ ತಪಸ್ಸು. ಆದರೆ, ವರ್ಷಗಳ ಕಾಲ ಶ್ರಮಿಸಿ, ಕೊನೆಗೆ ಗೆಲುವು ಸಿಗದೇ ಆ ಕನಸನ್ನು ಕೈಬಿಡುವಾಗ ಉಂಟಾಗುವ ವೇದನೆ ಅಸಾಮಾನ್ಯವಾದುದು. ಇಂತಹದ್ದೇ ಒಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಯುವಕನೊಬ್ಬನ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಗಾಲಿಗಳನ್ನು ಒದ್ದೆಮಾಡಿದೆ.

4 ಪ್ರಯತ್ನಗಳು, ಕೊನೆಗೆ 464 ರದ್ದಿ ಹಣ!

ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈ ಯುವಕ, 2023, 2024 ಮತ್ತು 2025 ರ ಪರೀಕ್ಷೆಗಳಲ್ಲಿ ಸತತವಾಗಿ 'ಮೇನ್ಸ್' (Mains) ಹಂತದವರೆಗೆ ತಲುಪಿದ್ದರು. ಆದರೆ, ಇತ್ತೀಚೆಗೆ ನಡೆದ ಪ್ರಿಲಿಮ್ಸ್​ ಪರೀಕ್ಷೆಯಲ್ಲಿ ವಿಫಲರಾಗುತ್ತಿದ್ದಂತೆ ತಮ್ಮ ಯುಪಿಎಸ್​ಸಿ ಪ್ರಯಾಣಕ್ಕೆ ಪೂರ್ಣವಿರಾಮ ಇಡಲು ನಿರ್ಧರಿಸಿದ್ದರು.
ಸುದೀರ್ಘ ವರ್ಷಗಳ ಕಾಲ ತಮ್ಮ ಸಂಗಾತಿಯಾಗಿದ್ದ ಎನ್‌ಸಿಇಆರ್‌ಟಿ (NCERT) ಪುಸ್ತಕಗಳು, ಲಕ್ಷ್ಮೀಕಾಂತ್ ರಾಜಕೀಯ ಶಾಸ್ತ್ರದ ಗ್ರಂಥಗಳು, ನೋಟ್ಸ್‌ಗಳು ಹಾಗೂ ಬೆಳಗ್ಗಿನ ಜಾವ 4 ಗಂಟೆಗೆ ಕುಳಿತು ಬರೆದಿದ್ದ ಸಾವಿರಾರು ಸರಣಿ ಪರೀಕ್ಷೆಯ (Mock Test) ಪೇಪರ್‌ಗಳನ್ನು ಕೊನೆಗೆ ರದ್ದಿ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ. ವರ್ಷಗಳ ಕಾಲ ಪಟ್ಟ ಶ್ರಮ, ತ್ಯಾಗ ಮತ್ತು ರಾತ್ರಿಪೂರ್ತಿ ನಿದ್ರೆಗೆಟ್ಟು ಬರೆದ ಓದಿನ ಹಾಳೆಗಳು ರದ್ದಿ ಅಂಗಡಿಯಲ್ಲಿ ತೂಕದ ಆಧಾರದ ಮೇಲೆ ಬರಿ 464 ರೂ. ನಿಂತಿತು.

ಉನ್ನತ ಉದ್ಯೋಗ, ಪ್ರೀತಿ ಎಲ್ಲವನ್ನೂ ಕಳೆದುಕೊಂಡಿದ್ದ ಯುವಕ

ಯುಪಿಎಸ್‌ಸಿ ಸಾಧಿಸುವ ಛಲದಿಂದ ಆತ 2022 ರಲ್ಲಿ ತಮಗೆ ಸಿಕ್ಕಿದ್ದ ಲಕ್ಷಾಂತರ ರೂಪಾಯಿ ಸಂಬಳದ ಉನ್ನತ ಉದ್ಯೋಗವನ್ನು ತಿರಸ್ಕರಿಸಿದ್ದರು. ಅಷ್ಟೇ ಅಲ್ಲದೆ, ಈ ಸುದೀರ್ಘ ಪರೀಕ್ಷಾ ಸಿದ್ಧತೆಯ ನಡುವೆ ತಮ್ಮ 4 ವರ್ಷಗಳ ಪ್ರೀತಿಯ ಸಂಬಂಧವೂ ಮುರಿದುಬಿದ್ದಿತ್ತು. ಪ್ರತಿ ಬಾರಿ ಸೋತಾಗಲೂ 'ಇನ್ನೊಂದೇ ಪ್ರಯತ್ನ' ಎಂದು ನನ್ನನ್ನು ನಾನೇ ಸಮಾಧಾನಪಡಿಸಿಕೊಳ್ಳುತ್ತಿದ್ದೆ. ಆದರೆ ಈ ಹಾಳೆಗಳು ತಕ್ಕಡಿಯ ಮೇಲೆ ಬೀಳುತ್ತಿದ್ದಂತೆಯೇ ನನ್ನೊಳಗಿನ ಜೀವವೇ ಹಾರಿ ಹೋದಂಗಾಯಿತು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ದೇವಾಲಯಕ್ಕೆ ಹೋದ ಆ ಹಣ

ರದ್ದಿ ಮಾರಿದಾಗ ಬಂದ 464 ರೂಪಾಯಿಗೆ ಇನ್ನೊಂದಷ್ಟು ಚೌಕಾಸಿ ಮಾಡಬಹುದಿತ್ತು ಎಂದು ಪಕ್ಕದಲ್ಲಿದ್ದವರು ಹೇಳಿದಾಗ, ನಾನು ಈ ಪುಸ್ತಕದಿಂದ ಏನು ನಿರೀಕ್ಷಿಸಿದ್ದೇನೋ ಅದು ನನಗೆ ಸಿಗಲಿಲ್ಲ. ಇನ್ನು ಹೆಚ್ಚುವರಿ 100-200 ರೂಪಾಯಿ ಬಂದರೂ ನನ್ನ ಸ್ಥಿತಿ ಬದಲಾಗುವುದಿಲ್ಲ, ಎಂದು ಯುವಕ ಭಾವಕರಾಗಿದ್ದಾರೆ.
ನಂತರ ಆ ಸಂಪೂರ್ಣ ಹಣವನ್ನು ದೇವಸ್ಥಾನದ ಕಾಣಿಕೆ ಪೆಟ್ಟಿಗೆಗೆ ಹಾಕಿ, ದೇವರೇ, ನಿನಗಿಂತ ದೊಡ್ಡ ಹೃದಯ ನನಗಿದೆ ಎಂಬುದನ್ನು ನಿನಗೆ ತಿಳಿಸಲು ಈ ಕಾಣಿಕೆ ನೀಡುತ್ತಿದ್ದೇನೆ, ಯಾವುದೇ ಪುಣ್ಯಕ್ಕಾಗಿಯಲ್ಲ ಎಂದು ಬರೆದುಕೊಂಡಿದ್ದಾರೆ.
ರೆಡ್ಡಿಟ್ (Reddit) ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಸೋತು ಹೊರಬಂದ ಲಕ್ಷಾಂತರ ಯುವಕರ ಮನ ಮುಟ್ಟಿದ್ದು, ಯುವಕನ ಮುಂದಿನ ಜೀವನಕ್ಕೆ ನೆಟ್ಟಿಗರು ಶುಭ ಹಾರೈಸುತ್ತಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net