6 ಕ್ಷೇತ್ರಗಳಿಗೆ ಶಾಸಕರೇ ಇಲ್ಲ... ತಮಿಳುನಾಡು ಸದನದಲ್ಲಿ ಪಳನಿಸ್ವಾಮಿ-ಸಚಿವ ಸೆಂಗೊಟ್ಟಯ್ಯನ್ ನಡುವೆ ಜಟಾಪಟಿ | Six AIADMK MLAs resign

ಎಐಎಡಿಎಂಕೆ ಶಾಸಕರ ರಾಜೀನಾಮೆಯಿಂದ ವಿಧಾನಸಭೆಯಲ್ಲಿ ಗದ್ದಲ
ಎಐಎಡಿಎಂಕೆ ಶಾಸಕರ ರಾಜೀನಾಮೆಯಿಂದ ವಿಧಾನಸಭೆಯಲ್ಲಿ ಗದ್ದಲ
Published on

ಪ್ರಮುಖ ಮುಖ್ಯಾಂಶಗಳು

  • 6 ಜನ ಎಐಎಡಿಎಂಕೆ ಶಾಸಕರ ರಾಜೀನಾಮೆಯಿಂದ ಸದನದಲ್ಲಿ ಗದ್ದಲ
  • ಜನರ ಸಮಸ್ಯೆ ಕೇಳುವವರಾರು?, ಎಡಪ್ಪಾಡಿ ಪಳನಿಸ್ವಾಮಿ ಪ್ರಶ್ನೆ
  • ಖಾಲಿ ಕ್ಷೇತ್ರಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ ಎಂದ ಸರ್ಕಾರ
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ರಾಜಕೀಯ ಕಾವು ಜೋರಾಗಿತ್ತು. ಆರು ಎಐಎಡಿಎಂಕೆ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳ ವಿಚಾರಕ್ಕೆ ಶಾಸಕ ಹಾಗೂ ಮಾಜಿ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಸಚಿವ ಸೆಂಗೊಟ್ಟಯ್ಯನ್ ನಡುವೆ ಮಾತಿನ ಚಕಮಕಿ ನಡೆಯಿತು.
ವಿಧಾನಸಭೆಯಲ್ಲಿ ಅನುದಾನ ಬೇಡಿಕೆಗಳ ಮೇಲಿನ ಚರ್ಚೆ ನಡೆಯುತ್ತಿದ್ದಾಗ ಈ ವಿಚಾರ ಪ್ರಸ್ತಾಪವಾಯಿತು. ಆರು ಕ್ಷೇತ್ರಗಳಿಗೆ ಶಾಸಕರೇ ಇಲ್ಲ, ಅಲ್ಲಿನ ಜನರ ಸಮಸ್ಯೆಗಳನ್ನು ಯಾರು ಆಲಿಸುತ್ತಾರೆ? ಅಭಿವೃದ್ಧಿ ಕೆಲಸಗಳ ಮೇಲ್ವಿಚಾರಣೆ ಯಾರು ಮಾಡುತ್ತಾರೆ? ಎಂದು ಪಳನಿಸ್ವಾಮಿ ಪ್ರಶ್ನಿಸಿದರು.

ಒಬ್ಬ ಸಚಿವ ಎಲ್ಲಾ ಕ್ಷೇತ್ರ ನೋಡಿಕೊಳ್ಳೋಕೆ ಸಾಧ್ಯನಾ?

ಖಾಲಿಯಾಗಿರುವ ಕ್ಷೇತ್ರಗಳಿಗೆ ಉಸ್ತುವಾರಿ ಸಚಿವರನ್ನು ಸರ್ಕಾರ ನೇಮಿಸಿದೆ. ಆದರೆ ಒಬ್ಬ ಸಚಿವ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಅಭಿವೃದ್ಧಿ ಕೆಲಸಗಳನ್ನು ನೋಡಿಕೊಳ್ಳುವುದು ಹೇಗೆ ಸಾಧ್ಯ ಎಂದು ಪಳನಿಸ್ವಾಮಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೆಂಗೊಟ್ಟಯ್ಯನ್, ಹೊಸ ಶಾಸಕರು ಆಯ್ಕೆಯಾಗುವವರೆಗೆ ಕ್ಷೇತ್ರಗಳ ಜವಾಬ್ದಾರಿ ನೋಡಿಕೊಳ್ಳಲು ಸಚಿವರನ್ನು ನೇಮಿಸಲಾಗಿದೆ ಎಂದು ಹೇಳಿದರು.

‘ಹಾರ್ಸ್ ಟ್ರೇಡಿಂಗ್’ ಮಾತಿಗೆ ಪಳನಿಸ್ವಾಮಿ ಗರಂ

ಇಬ್ಬರ ನಡುವಿನ ಚರ್ಚೆ ಬಳಿಕ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ತಿರುಗಿತು. ಎಡಪ್ಪಾಡಿ ಕ್ಷೇತ್ರದ ಟಿವಿಕೆ ಅಭ್ಯರ್ಥಿ ಚುನಾವಣೆಯಿಂದ ಹಿಂದೆ ಸರಿದಿರುವುದನ್ನು ಉಲ್ಲೇಖಿಸಿದ ಸೆಂಗೊಟ್ಟಯ್ಯನ್, ಇದು ‘ಕುದುರೆ ವ್ಯಾಪಾರ’ಕ್ಕೆ ಸಂಬಂಧಿಸಿದ್ದೇ ಎಂದು ಪ್ರಶ್ನಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪಳನಿಸ್ವಾಮಿ, ಅಭ್ಯರ್ಥಿ ಹಿಂದೆ ಸರಿದಿಲ್ಲ, ಅವರ ನಾಮಪತ್ರವೇ ರಿಜೆಕ್ಟ್ ಆಗಿದೆ ಎಂದು ಉತ್ತಸಿದರು.

6 ಕ್ಷೇತ್ರದ ಜನ ಯಾರ ಬಳಿ ಹೋಗಬೇಕು?

ಡಿಎಂಕೆ ಶಾಸಕ ಆಸ್ಟಿನ್ ಕೂಡ ಚರ್ಚೆಗೆ ಎಂಟ್ರಿಯಾದರು. ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಆರು ಶಾಸಕರು ಒಂದೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಶಾಸಕರಿಲ್ಲದೆ ಆರು ಕ್ಷೇತ್ರಗಳ ಜನರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ ಎಂದರು. ಇದಕ್ಕೆ ಸ್ಪೀಕರ್, ಉಪಚುನಾವಣೆ ಯಾವಾಗ ನಡೆಸಬೇಕು ಎಂಬ ನಿರ್ಧಾರ ಸಂಪೂರ್ಣವಾಗಿ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ವಿಧಾನಸಭೆ ಸ್ವತಂತ್ರವಾಗಿ ಚುನಾವಣೆಯ ದಿನಾಂಕ ನಿಗದಿ ಮಾಡಲು ಸಾಧ್ಯವಿಲ್ಲ ಎಂದರು.

ಉಪಚುನಾವಣೆ ಯಾವಾಗ?

ಇದೀಗ ತಮಿಳುನಾಡಿನ ರಾಜಕೀಯದಲ್ಲಿ ಶಾಸಕರಿಲ್ಲದೆ ಖಾಲಿಯಾಗಿರುವ ಆರು ಕ್ಷೇತ್ರಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕ್ಷೇತ್ರ ಪ್ರತಿನಿಧಿಸುವವರ ಬಗ್ಗೆ ವಿರೋಧ ಪಕ್ಷ ಪ್ರಶ್ನೆ ಎತ್ತುತ್ತಿದ್ದರೆ, ಜನರ ಸಮಸ್ಯೆಗಳನ್ನು ನೋಡಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ.
ಆದರೆ, ಉಪಚುನಾವಣೆ ಯಾವಾಗ ನಡೆಯಬೇಕು ಎಂಬ ಅಂತಿಮ ನಿರ್ಧಾರ ಚುನಾವಣಾ ಆಯೋಗದ್ದೇ ಆಗಿದೆ. ಹಾಗಾಗಿ, ಆರು ಕ್ಷೇತ್ರಗಳ ಜನರು ಹೊಸ ಶಾಸಕರಿಗಾಗಿ ಇನ್ನಷ್ಟು ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net