SIR Discussion | ಸಂಸತ್ತಿನಲ್ಲಿ ಕೋಲಾಹಲ; ಡಿ.10 ರಂದು ಎಸ್​ಐಆರ್​ ಕುರಿತ ಚರ್ಚೆ ಸಾಧ್ಯತೆ

SIR Discussion | ಸಂಸತ್ತಿನ ಚಳಿಗಾಲದ ಅಧಿವೇಶನ
SIR Discussion | ಸಂಸತ್ತಿನ ಚಳಿಗಾಲದ ಅಧಿವೇಶನ
Published on
ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಸದ್ದು ಜೋರಾಗಿದ್ದು, ಈ ಕುರಿತು ವಿರೋಧ ಪಕ್ಷದ ಪ್ರತಿಭಟನೆಗಳ ಮಧ್ಯೆ, ಕೇಂದ್ರ ಸರ್ಕಾರ ಎಸ್​ಐಆರ್​ ಬಗ್ಗೆ ಚರ್ಚಿಸಲು ಸಿದ್ಧವಾಗಿದೆ ಎಂದು ಹೇಳಿದೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. 
ಸರ್ಕಾರದ ಈ ನಿರ್ಧಾರ ಅಧಿಕೃತವಾದರೆ ಕಳೆದ ಒಂದು ವಾರದಿಂದ ವಿಪಕ್ಷಗಳು ಇಟ್ಟಿದ್ದ ಬೇಡಿಕೆಗೆ ಸರ್ಕಾರ ಸ್ಪಂದಿಸಿದಂತಾಗುತ್ತದೆ. ಸರ್ಕಾರಿ ಮೂಲಗಳ ಪ್ರಕಾರ, ಕೇಂದ್ರವು ಡಿಸೆಂಬರ್ 10 ರಂದು ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
ನವೆಂಬರ್ 7 ರಂದು ವಂದೇ ಮಾತರಂನ 150 ನೇ ವಾರ್ಷಿಕೋತ್ಸವವು ನಡೆಯುವುದರಿಂದ, ಈ ಚರ್ಚೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸರ್ಕಾರ, ವಿರೋಧ ಪಕ್ಷದ ನಾಯಕರಿಗೆ ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿದ್ದು, ಪ್ರತಿಪಕ್ಷಗಳು ಮೊದಲು ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸಿ, ನಂತರ ವಂದೇ ಮಾತರಂನ 150 ವರ್ಷಗಳ ಚರ್ಚೆ ನಡೆಸಬೇಕೆಂದು ಬಯಸುತ್ತಿವೆ ಎನ್ನಲಾಗಿದೆ. ಅಧಿವೇಶನದ ಮೊದಲ ಎರಡು ದಿನಗಳು ಎಸ್‌ಐಆರ್ ಮತ್ತು ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ಹಲವಾರು ಬೂತ್​ ಮಟ್ಟದ ಅಧಿಕಾರಿಗಳ ಬಗ್ಗೆ ತಕ್ಷಣದ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದರಿಂದ ಎರಡು ಸದನಗಳು ಬಹುತೇಕ ಸ್ತಬ್ಧಗೊಂಡಂತಾಗಿವೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಚರ್ಚೆಗೆ ವಿಪಕ್ಷದ ಸದಸ್ಯರುಗಳು ಒತ್ತಾಯಿಸುತ್ತಿದ್ದಂತೆ, ಇತ್ತ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಈ ವಿಷಯದ ಬಗ್ಗೆ ನಿರ್ಧರಿಸಲು ವಿವಿಧ ಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಇದೇ ವಿಷಯವಾಗಿ ಮಾತನಾಡಿರುವ ರಿಜಿಜು, ದಯವಿಟ್ಟು ಯಾವುದಕ್ಕೂ ಸಮಯದ ಷರತ್ತುಗಳನ್ನು ವಿಧಿಸಬೇಡಿ ಎಂದು ನಿನ್ನೆಯೇ ನಾನು ಹೇಳಿದ್ದೇನೆ, ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಸಂವಾದ ಮತ್ತು ಚರ್ಚೆ ಇರಬೇಕು, ಆದರೆ ದೇಶದಲ್ಲಿ ಹಲವು ಸಮಸ್ಯೆಗಳಿವೆ. ನೀವು ಒಂದು ವಿಷಯವನ್ನು ದುರ್ಬಲಗೊಳಿಸಿ ಇನ್ನೊಂದು ವಿಷಯವನ್ನು ಎತ್ತಬಾರದು. ಎಲ್ಲಾ ವಿಷಯಗಳು ನಮಗೆ ಮುಖ್ಯ ಎಂದು ತಿಳಿಸಿದರು.
ಇಂಡಿಯಾ ಒಕ್ಕೂಟದ ಸಂಸದರು ಸದನದ ಬಾವಿಗಿಳಿದು ಎಸ್​ಐಆರ್​ ಕುರಿತು ಚರ್ಚೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ ಬಳಿಕ ಸಚಿವರಿಂದ ಈ ಹೇಳಿಕೆ ಹೊರಬಿದ್ದಿದೆ. ವಿರೋಧ ಪಕ್ಷದವರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಕಾರಣ, ತಮ್ಮ ಕೋಪವನ್ನು ಈ ರೀತಿಯಾಗಿ ಹೊರಹಾಕುತ್ತಿದ್ದಾರೆ. ನೀವು ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ, ಜನರು ನಿಮ್ಮನ್ನು ನಂಬುವುದಿಲ್ಲ, ಅದರ ಕೋಪವನ್ನು ನೀವು ಸದನದಲ್ಲಿ ಹೊರಹಾಕುತ್ತೀರಿ. ಇದು ಸರಿಯಾದ ಬೆಳವಣಿಗೆ ಅಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಜನರ ವೇದಿಕೆಯಾಗಿದೆ ಎಂದು ಹೇಳಿದರು.
ಇತ್ತ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ SIRನ ಕೆಲಸದ ಒತ್ತಡದಿಂದಾಗಿ 28 ಬೂತ್​ ಮಟ್ಟದ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಇದು ತುರ್ತು ವಿಷಯ. ಆದ್ದರಿಂದ ಚರ್ಚೆ ಈಗಲೇ ನಡೆಯಬೇಕೆಂದು ನಾವು ಬಯಸುತ್ತೇವೆ. ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ, ನಾಗರಿಕರ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ನೀವು ಎಸ್​ಐಆರ್​​ ಚರ್ಚೆಗೆ ಅವಕಾಶ ನೀಡಬೇಕು. ಈ ವಿಷಯವಾಗಿ ನಾವು ಖಂಡಿತ ಸಹಕರಿಸುತ್ತೇವೆ ಎಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net