ಜನರ ಬದುಕು ಬದಲಿಸಬಲ್ಲ ತಂತ್ರಜ್ಞಾನ ಅನಾವರಣ

 Unveiling technology that can change people's lives
Unveiling technology that can change people's lives
Published on

ಮಕ್ಕಳ ಸುರಕ್ಷತೆಗೆ ಸ್ಮಾರ್ಟ್ ಶೂ

ಎಐ ಎಕ್ಸ್​ಪೋದಲ್ಲಿ ಪ್ರದರ್ಶಿಸಲಾದ ಸ್ಮಾರ್ಟ್ ಶೂಗಳು ಪೋಷಕರ ಪಾಲಿಗೆ ವರದಾನವಾಗಲಿವೆ. ಈ ವಿಶೇಷ ಶೂಗಳಲ್ಲಿ ಲೊಕೇಶನ್ ಟ್ರಾ್ಯಕರ್ ಮತ್ತು ಎಐ ಸೆನ್ಸರ್​ಗಳನ್ನು ಅಳವಡಿಸಲಾಗಿದೆ. ಮಕ್ಕಳು ‘ಸುರಕ್ಷಿತ ವಲಯ’ದಿಂದ ಹೊರನಡೆದರೆ, ಈ ಶೂಗಳು ತಕ್ಷಣವೇ ಪೋಷಕರ ಸ್ಮಾರ್ಟ್​ಫೋನ್​ಗೆ ಅಲರ್ಟ್ ಕಳುಹಿಸುತ್ತವೆ. ಮಕ್ಕಳಷ್ಟೇ ಅಲ್ಲದೆ, ದಾರಿತಪ್ಪುವ ಸಾಧ್ಯತೆ ಇರುವ ಹಿರಿಯ ನಾಗರಿಕರಿಗೂ ಇದು ಸಹಕಾರಿ.

ಸ್ಮಾರ್ಟ್ ಸುರಕ್ಷಿತ ಬೈಕ್

ಈ ಬೈಕ್​ನಲ್ಲಿ ಅತ್ಯಾಧುನಿಕ ರೇಡಾರ್ ಮತ್ತು ಹೈ-ಡೆಫಿನಿಷನ್ ಕ್ಯಾಮೆರಾ ಅಳವಡಿಸಲಾಗಿದ್ದು, ಗುಡ್ಡಗಾಡು ಪ್ರದೇಶಗಳ ಕಡಿದಾದ ತಿರುವುಗಳಲ್ಲಿ ಅಥವಾ ಮಂಜು ಮುಸುಕಿದ ರಸ್ತೆಗಳಲ್ಲಿ ಎದುರುಗಡೆಯಿಂದ ಬರುತ್ತಿರುವ ವಾಹನಗಳ ಬಗ್ಗೆ ಈ ಬೈಕ್ ಮೊದಲೇ ಸವಾರನಿಗೆ ಎಚ್ಚರಿಕೆ ನೀಡುತ್ತದೆ. ಒಂದು ವೇಳೆ ಅಪಘಾತ ಸಂಭವಿಸಿದರೆ, ಬೈಕ್​ನಲ್ಲಿರುವ ಸೆನ್ಸರ್​ಗಳು ತಕ್ಷಣವೇ ಸವಾರನ ಮನೆಯವರಿಗೆ ಮತ್ತು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಸಂದೇಶ ರವಾನಿಸುತ್ತವೆ. ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ವೇಗದ ಮಿತಿ ಮೀರುವಿಕೆಯನ್ನೂ ಇದು ಪತ್ತೆಹಚ್ಚಿ ಸುರಕ್ಷಿತ ಚಾಲನೆಗೆ ಉತ್ತೇಜನ ನೀಡುತ್ತದೆ.

ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಆಸರೆ

ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿ ಈಗ ಕ್ರಾಂತಿಕಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವರದಾನ. ವಿಶೇಷ ವಿಆರ್ ಕನ್ನಡಕಗಳನ್ನು ಧರಿಸುವ ಮೂಲಕ ವಿದ್ಯಾರ್ಥಿಗಳು ಡಿಜಿಟಲ್ ಲೋಕದ ವರ್ಚುವಲ್ ರೋಗಿಗಳಿಗೆ ಚಿಕಿತ್ಸೆ ನೀಡುವ ಅನುಭವ ಪಡೆಯಬಹುದು. ಈ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ನಿಜವಾದ ಆಸ್ಪತ್ರೆಯಲ್ಲೇ ಇದ್ದೇವೆ ಎಂಬ ಅನುಭವ ನೀಡುತ್ತದೆ. ಸಂಕೀರ್ಣ ಶಸ್ತ್ರಚಿಕಿತ್ಸೆಗಳು, ತುರ್ತು ನಿಗಾ ಘಟಕದ ನಿರ್ವಹಣೆ ಮತ್ತು ರೋಗಿಗಳೊಂದಿಗೆ ಸಂವಹನ ನಡೆಸುವ ವಿಧಾನವನ್ನು ಯಾವುದೇ ತಪ್ಪುಗಳ ಭಯವಿಲ್ಲದೆ ಅಭ್ಯಾಸ ಮಾಡಲು ಇದು ವೇದಿಕೆ ಕಲ್ಪಿಸುತ್ತದೆ. ನೈಜ ರೋಗಿಗಳ ಮೇಲೆ ಪ್ರಯೋಗ ಮಾಡುವ ಮೊದಲು ಈ ಡಿಜಿಟಲ್ ತರಬೇತಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಸಂದರ್ಶನ ಮಾಡಲಿದೆ ರೋಬೋ

ಸಾಂಪ್ರದಾಯಿಕ ಉದ್ಯೋಗ ಸಂದರ್ಶನದ ಪದ್ಧತಿ ಈಗ ಬದಲಾಗುತ್ತಿದೆ. ಎಐ ಇಂಟರ್​ವ್ಯೂ ರೋಬೋ ತಂತ್ರಜ್ಞಾನ ನೇಮಕಾತಿ ಪ್ರಕ್ರಿಯೆಯಲ್ಲಿ ಹೊಸ ಕ್ರಾಂತಿ ತಂದಿದೆ. ಇನ್ನು ಮುಂದೆ ಅಭ್ಯರ್ಥಿಗಳು ಮನುಷ್ಯರ ಎದುರು ಕುಳಿತು ಉತ್ತರಿಸುವ ಬದಲಿಗೆ, ಕೃತಕ ಬುದ್ಧಿಮತ್ತೆ ಚಾಲಿತ ರೋಬೋಗಳ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಈ ಎಐ ರೋಬೋ, ಅಭ್ಯರ್ಥಿಯ ಉತ್ತರಗಳನ್ನಷ್ಟೇ ಅಲ್ಲದೆ, ಅವರ ಆತ್ಮವಿಶ್ವಾಸ, ಮಾತನಾಡುವ ಶೈಲಿ, ಹಾವಭಾವ ಮತ್ತು ತಾಂತ್ರಿಕ ಕೌಶಲಗಳನ್ನು ಅತ್ಯಂತ ನಿಖರವಾಗಿ ಅಳೆಯುತ್ತದೆ. ಯಾವುದೇ ರೀತಿಯ ಪಕ್ಷಪಾತಕ್ಕೆ ಅವಕಾಶವಿರುವುದಿಲ್ಲ, ಆದ್ದರಿಂದ ಪ್ರತಿಭಾನ್ವಿತರಿಗೆ ಸಮಾನ ಅವಕಾಶ ಸಿಗಲಿದೆ. ಕಂಪನಿಗಳಿಗೆ ಕಡಿಮೆ ಸಮಯದಲ್ಲಿ ಸಾವಿರಾರು ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮಾಡಲು ಸಹಕಾರಿ.

ನೇಕಾರರಿಗೆ ವರದಾನ ಸ್ಮಾರ್ಟ್ ಮಗ್ಗ

ಈ ಮೊದಲು ಒಂದು ಹೊಸ ಸೀರೆಯ ವಿನ್ಯಾಸವನ್ನು (ಡಿಸೈನ್) ಸಿದ್ಧಪಡಿಸಲು ನೇಕಾರರಿಗೆ ಕನಿಷ್ಠ 10 ದಿನ ಬೇಕಾಗುತ್ತಿತ್ತು. ಆದರೆ ಈ ಹೊಸ ಎಐ ಸಾಫ್ಟ್​ವೇರ್ ಮತ್ತು ಸ್ಮಾರ್ಟ್ ಮಗ್ಗದ ನೆರವಿನಿಂದ ಕೆಲವೇ ಗಂಟೆಗಳಲ್ಲಿ ಅತ್ಯಾಧುನಿಕ ವಿನ್ಯಾಸಗಳನ್ನು ಅಂತಿಮಗೊಳಿಸಿ ನೇಯ್ಗೆ ಮಾಡಬಹುದು. ಈ ತಂತ್ರಜ್ಞಾನ ವಿನ್ಯಾಸದಲ್ಲಿ ಆಗುವ ತಪ್ಪುಗಳನ್ನು ಮೊದಲೇ ಪತ್ತೆ ಹಚ್ಚುತ್ತದೆ. ನೂಲಿನ ಬಳಕೆಯನ್ನು ಮಿತಗೊಳಿಸಲು ಸಹಕರಿಸುತ್ತದೆ. ಇದರಿಂದ ನೇಕಾರರ ಸಮಯ ಉಳಿತಾಯವಾಗುವುದಲ್ಲದೆ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ವೇಗವಾಗಿ ಹೊಸ ಮಾದರಿಯ ಸೀರೆಗಳನ್ನು ತಯಾರಿಸಲು ಸಾಧ್ಯವಾಗುತ್ತದೆ.

ಗೂಗಲ್​ನಿಂದ ಬೃಹತ್ ಯೋಜನೆಗಳ ಘೊಷಣೆ

ಭಾರತದ ಎಐ ಸಾಮರ್ಥ್ಯವನ್ನು ಉತ್ತೇಜಿಸಲು ಗೂಗಲ್ ಸಿಇಒ ಸುಂದರ್ ಪಿಚೈ ಹಲವು ಮಹತ್ವದ ಯೋಜನೆಗಳನ್ನು ಘೊಷಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ಎಐ ಸಂಪರ್ಕ ಹೆಚ್ಚಿಸಲು ಹೊಸ ಸಾಗರದಾಳದ ಕೇಬಲ್ ಮಾರ್ಗಗಳನ್ನು ನಿರ್ವಿುಸುವುದರ ಜತೆಗೆ, 2 ಕೋಟಿ ಜನರು ಹಾಗೂ 1.1 ಕೋಟಿ ವಿದ್ಯಾರ್ಥಿಗಳಿಗೆ ಎಐ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ. ವಿಶಾಖಪಟ್ಟಣದ 15 ಬಿಲಿಯನ್ ಡಾಲರ್ ವೆಚ್ಚದ ಎಐ ಹಬ್ ಜಾಗತಿಕ ಮಟ್ಟದ ಕಂಪ್ಯೂಟಿಂಗ್ ಸೌಲಭ್ಯ ಒದಗಿಸಲಿದ್ದು, ಭಾರತದ ಭವಿಷ್ಯವನ್ನು ಬದಲಿಸಲಿದೆ ಎಂದು ಪಿಚೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಕ್ರೋಸಾಫ್ಟ್ 4.2 ಲಕ್ಷ ಕೋಟಿ ರೂ. ಹೂಡಿಕೆ

ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವಿನ ಎಐ ಅಂತರವನ್ನು ಹೋಗಲಾಡಿಸಲು ಮೈಕ್ರೋಸಾಫ್ಟ್ ಈ ದಶಕದ ಅಂತ್ಯದ ವೇಳೆಗೆ 50 ಬಿಲಿಯನ್ ಡಾಲರ್ (ಅಂದಾಜು ರೂ. 4.2 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಘೊಷಿಸಿದೆ. 2030ರ ವೇಳೆಗೆ ಭಾರತದ 2 ಕೋಟಿ ಜನರಿಗೆ ಎಐ ಕೌಶಲ ತರಬೇತಿ ನೀಡುವ ಗುರಿ ಹೊಂದಿದೆ. ಇದಲ್ಲದೆ, 20 ಲಕ್ಷ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲೂ ಕ್ರಾಂತಿ ಮಾಡಲು ಮೈಕ್ರೋಸಾಫ್ಟ್ ಮುಂದಾಗಿದೆ.

10 ವರ್ಷದಲ್ಲಿ ಅಮೆರಿಕಕ್ಕೆ ಭಾರತ ಟಕ್ಕರ್

ಮುಂದಿನ 10 ವರ್ಷಗಳಲ್ಲಿ ಅಮೆರಿಕಕ್ಕಿಂತ ಭಾರತ ವೇಗವಾಗಿ ಎಐ ಅಳವಡಿಸಿಕೊಳ್ಳಲಿದೆ ಎಂದು ಜೋಹೊ ಕಾರ್ಪೆರೇಶನ್ ಮುಖ್ಯಸ್ಥ ಶ್ರೀಧರ್ ವೆಂಬು ಭವಿಷ್ಯ ನುಡಿದಿದ್ದಾರೆ. ಯುಪಿಐ ಮಾದರಿಯಲ್ಲೇ ಎಐ ಕೂಡ ಭಾರತದಲ್ಲಿ ಜನಸಾಮಾನ್ಯರನ್ನು ಆವರಿಸಿಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿಯಿಂದ ಇಂದು ಉದ್ಘಾಟನೆ

ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಾಗತಿಕ ಎಐ ಶೃಂಗಸಭೆಯನ್ನು ಫೆ. 19ರಂದು ಬೆಳಗ್ಗೆ 9.40ಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಸೇರಿ ವಿವಿಧ ದೇಶಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಬಳಿಕ ಬೆಳಗ್ಗೆ 11ಕ್ಕೆ ವಿವಿಧ ದೇಶಗಳ ಪೆವಿಲಿಯನ್​ಗಳಿರುವ ಎಐ ಎಕ್ಸ್​ಪೋಗೆ ಭೇಟಿ ನೀಡಲಿರುವ ಪ್ರಧಾನಿ, ಮಧ್ಯಾಹ್ನ 12ಕ್ಕೆ ಉದ್ಯಮ ಪ್ರಮುಖರ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5.30ಕ್ಕೆ ಜಾಗತಿಕ ಟೆಕ್ ಕಂಪನಿಗಳ ಮುಖ್ಯಸ್ಥರೊಂದಿಗಿನ ರೌಂಡ್​ಟೇಬಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಫೆ.16ರಿಂದಲೇ ಎಕ್ಸ್​ಪೋ ಮತ್ತು ಉಪಸಮಿಟ್​ಗಳು ಆರಂಭವಾಗಿವೆ.

ಹೂಡಿಕೆದಾರರ ಭೀತಿ ಹಾಸ್ಯಾಸ್ಪದ

ನವದೆಹಲಿ: ಹೊಸ ಎಐ ವೇದಿಕೆಗಳಿಂದಾಗಿ ಐಟಿ ಕಂಪನಿಗಳ ಭವಿಷ್ಯದ ಬಗ್ಗೆ ಹೂಡಿಕೆದಾರರಲ್ಲಿ ಮೂಡಿರುವ ಆತಂಕವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ‘ಹಾಸ್ಯಾಸ್ಪದ’ ಎಂದು ಕರೆದಿದ್ದಾರೆ. ಎಐ ತಂತ್ರಜ್ಞಾನ ಅಭಿವೃದ್ಧಿ ಹೊಂದಲು ಮತ್ತು ಯಶಸ್ವಿಯಾಗಲು ಐಟಿ ಕಂಪನಿಗಳ ಅಗತ್ಯವಿದ್ದೇ ಇದೆ. ಸೈಬರ್ ಸೆಕ್ಯೂರಿಟಿ ಮತ್ತು ದತ್ತಾಂಶ ಸಂಸ್ಕರಣೆಯಲ್ಲಿ ಐಟಿ ಕಂಪನಿಗಳ ಪಾತ್ರ ನಿರ್ಣಾಯಕ ಎಂದು ಅವರು ಹೇಳಿದ್ದಾರೆ. 

ಗ್ರಿಡ್ ಸ್ಥಿರತೆಗೆ ಎಐ ಸಹಕಾರಿ

ದೇಶದ ಇಂಧನ ವಲಯದಲ್ಲಿ ಸೌರ ಮತ್ತು ಪವನ ಶಕ್ತಿಯ ಬಳಕೆ ಹೆಚ್ಚುತ್ತಿರುವುದರಿಂದ, ವಿದ್ಯುತ್ ಗ್ರಿಡ್​ನ ಸ್ಥಿರತೆಯನ್ನು ಕಾಪಾಡಲು ಎಐ ತಂತ್ರಜ್ಞಾನ ಪೂರಕವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಎಐ ಇಂಪ್ಯಾಕ್ಟ್ ಸಮ್ಮಿಟ್​ನಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾದಾಗ ಅಥವಾ ಸೂರ್ಯನ ಬೆಳಕು ಇಲ್ಲದ ಸಮಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗುತ್ತದೆ. ಇಂತಹ ಸಂದರ್ಭದಲ್ಲಿ ‘ಡಿಜಿಟಲ್ ಟ್ವಿನ್’ನಂತಹ ಎಐ ತಂತ್ರಜ್ಞಾನಗಳು ಉತ್ಪಾದನೆ ಮತ್ತು ಬೇಡಿಕೆಯನ್ನು ಸಮತೋಲನಗೊಳಿಸಿ ಗ್ರಿಡ್ ಕುಸಿಯದಂತೆ ನಿರ್ವಹಿಸಲು ಸಹಾಯ ಮಾಡಲಿವೆ ಎಂದು ಅವರು ವಿವರಿಸಿದರು.

ಗಿನ್ನೆಸ್ ದಾಖಲೆ ಬರೆದ ಶೃಂಗಸಭೆ

ಎಐ ಜವಾಬ್ದಾರಿಯುತ ಬಳಕೆಗಾಗಿ ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸುವ ಮೂಲಕ ಈ ಶೃಂಗಸಭೆಯಲ್ಲಿ ಗಿನ್ನೆಸ್ ದಾಖಲೆ ನಿರ್ವಿುಸಿದ್ದಾರೆ. ಕೇವಲ 24 ಗಂಟೆಗಳಲ್ಲಿ 2,50,946 ವಿದ್ಯಾರ್ಥಿಗಳು ಈ ಪ್ರತಿಜ್ಞೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net