ಅನಿವಾಸಿಗಳ ಅನನ್ಯ ದೇಶಪ್ರೇಮ

ಅನಿವಾಸಿಗಳ ಅನನ್ಯ ದೇಶಪ್ರೇಮ
ಅನಿವಾಸಿಗಳ ಅನನ್ಯ ದೇಶಪ್ರೇಮ
Published on

ಭಾರತದಿಂದ ವಿದೇಶಕ್ಕೆ ಉದ್ಯೋಗ, ಶಿಕ್ಷಣ ಅರಸಿ ಹೋಗುತ್ತಿದ್ದವರನ್ನು ಬೌದ್ಧಿಕ ಪಲಾಯನ (ಬ್ರೖೆನ್ ಡ್ರೖೆನ್) ಎನ್ನುವ ಕಾಲವೊಂದಿತ್ತು. ಇದು ಪಲಾಯನವಲ್ಲ, ಭಾರತದ ಸಂಸ್ಕೃತಿಯ ರಾಯಭಾರಿಗಳಿವರು, ದೇಶಕ್ಕೂ ಕೊಡುಗೆ ನೀಡಬಲ್ಲರು. ಅವರು ವಿದೇಶಗಳಲ್ಲಿರುವ ಭಾರತದ ಸೌಮ್ಯಶಕ್ತಿ (ಸಾಫ್ಟ್ ಪವರ್) ಎಂಬುದನ್ನು ಮೊದಲು ಗುರುತಿಸಿದ್ದು 2000ದಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು. ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಭೇಟಿಯ ವೇಳೆ ಅನಿವಾಸಿ ಭಾರತೀಯರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದು, ಭಾರತದೊಂದಿಗಿನ ಅವರ ನಂಟನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

| ಚಂದ್ರಶೇಖರ ಗಂಧನಹಳ್ಳಿ

ಇದು 1998ರ ಪ್ರಸಂಗ. ಭಾರತ ಪೋಖ್ರಾನ್-2 ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಸಂದರ್ಭ. ಭಾರತದ ಯಶಸ್ಸನ್ನು ಅರಗಿಸಿಕೊಳ್ಳಲಾಗದ ಮುಂದುವರಿದ ದೇಶಗಳು ಆರ್ಥಿಕ ದಿಗ್ಬಂಧನ ವಿಧಿಸಿದವು. ಪರಿಣಾಮವಾಗಿ ದೇಶ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ ಎದುರಾಯಿತು. ಆಗ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ. ಕೂಡಲೇ ಅವರು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ‘ರಿಸರ್ಜಂಟ್ ಇಂಡಿಯಾ ಬಾಂಡ್’ಗಳಲ್ಲಿ ಹಣ ಹೂಡುವಂತೆ ಕರೆ ನೀಡಿದರು. ಅವರ ಕರೆಗೆ ಅಭೂತಪೂರ್ವ ರೀತಿಯಲ್ಲಿ ಸ್ಪಂದಿಸಿದ ಅನಿವಾಸಿ ಭಾರತೀಯರು ಯಥೇಚ್ಛವಾಗಿ ಹೂಡಿಕೆ ಮಾಡಿದರು. 

ಇದರೊಂದಿಗೆ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳೂ ಸೇರಿಕೊಂಡು, ಕೆಲವೇ ವರ್ಷಗಳಲ್ಲಿ ಭಾರತ ತನ್ನ ಆರ್ಥಿಕ ಸಂಕಷ್ಟವನ್ನು ಮೆಟ್ಟಿನಿಂತು ಮತ್ತಷ್ಟು ಬಲಾಢ್ಯ ರಾಷ್ಟ್ರವಾಗಿ ಬೆಳೆಯಿತು. ಅನಿವಾಸಿ ಭಾರತೀಯರ ದೇಶಪ್ರೇಮಕ್ಕೆ ಇದು ಸಣ್ಣ ಉದಾಹರಣೆ ಅಷ್ಟೆ. ತಾಯ್ನಾಡಿನ ಬಗ್ಗೆ ಅವರಿಗಿರುವ ಹೆಮ್ಮೆಯ ಕುರಿತು ಇಂತಹ ನೂರಾರು ಉದಾಹರಣೆಗಳನ್ನು ನೀಡಬಹುದು. ವಿಜ್ಞಾನ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಂತೂ ವಿಶ್ವವೇ ತಿರುಗಿ ನೋಡುವಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸಿರುವ ಭಾರತ, ಇದೀಗ ಜಪಾನ್ ದೇಶವನ್ನೂ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. 

ಇದರಲ್ಲಿ ಅನಿವಾಸಿ ಭಾರತೀಯರ ಕೊಡುಗೆಯೂ ಬಹಳಷ್ಟಿದೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಕೆನಡಾ, ಸಿಂಗಾಪುರ್, ಜರ್ಮನಿ, ಜಪಾನ್... ಹೀಗೆ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ 36 ಕೋಟಿಗೂ ಹೆಚ್ಚು ಭಾರತೀಯರು ಒಂದಲ್ಲ ಒಂದು ರೀತಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಪೈಕಿ ಬಹುತೇಕ ಮಂದಿ ಆಯಾ ದೇಶಗಳ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಾಕಷ್ಟು ಮಂದಿ ಸ್ವಂತ ಉದ್ಯಮ ಕಟ್ಟಿ ಶ್ರೀಮಂತರ ಪಟ್ಟಿಯಲ್ಲಿ ಅಲ್ಲಿನ ಸ್ಥಳೀಯರಿಗೇ ಸೆಡ್ಡು ಹೊಡೆದಿದ್ದಾರೆ. ತಾವು ಆರ್ಥಿಕವಾಗಿ ಬೆಳೆಯುವುದರ ಜತೆಗೆ ತಾಯ್ನಾಡಿನ ಅಭಿವೃದ್ಧಿಗೂ ಸ್ಪಂದಿಸುತ್ತಿದ್ದಾರೆ. ಅನಿವಾಸಿ ಭಾರತೀಯರಿಂದ ಪ್ರತಿ ವರ್ಷ ಭಾರತಕ್ಕೆ ಸುಮಾರು 15 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಹರಿದು ಬರುತ್ತಿರುವುದೇ ಇದಕ್ಕೆ ಸಾಕ್ಷಿ. ವಿಶ್ವಬ್ಯಾಂಕ್ ಮತ್ತು ಆರ್​ಬಿಐ ಅಂಕಿಅಂಶಗಳ ಪ್ರಕಾರ, ಇದು ಭಾರತದ ಜಿಡಿಪಿಗೆ ಶೇ. 3.5ರಷ್ಟು ಕೊಡುಗೆ ನೀಡುತ್ತಿದೆ.

ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿ ಪ್ರಸರಣ

ಭಾರತದ ಬೆಳವಣಿಗೆಯ ಪಥವನ್ನು ರೂಪಿಸುವಲ್ಲಿ ಭೌಗೋಳಿಕ ಗಡಿಗಳನ್ನು ಮೀರಿ ವಿಸ್ತರಿಸಿರುವ ಅನಿವಾಸಿ ಭಾರತೀಯರು ಪ್ರಮುಖ ಪಾತ್ರ ವಹಿಸುತ್ತಾರೆ. ವಿದೇಶಿ ನೇರ ಹೂಡಿಕೆಗಳು, ಹಣ ರವಾನೆ ಮತ್ತು ವ್ಯಾಪಾರ ಉದ್ಯಮಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಅನಿವಾಸಿ ಭಾರತೀಯರು ದೇಶದ ಆರ್ಥಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತಾರೆ. ಅವರ ಹಣಕಾಸು ಹೂಡಿಕೆಗಳು ಮತ್ತು ಉದ್ಯಮಶೀಲತಾ ಪ್ರಯತ್ನಗಳು ನಮ್ಮಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ. ಇದಲ್ಲದೆ ಸಾಂಸ್ಕೃತಿಕ ರಂಗದಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅನನ್ಯ. ಕಲೆ, ಸಂಗೀತ, ಸಾಹಿತ್ಯ, ಸಂಪ್ರದಾಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸುವಲ್ಲಿ, ವಿಶ್ವಾದ್ಯಂತ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿಧ್ಯ ಪಸರಿಸುವಲ್ಲಿ ಅವರ ಪಾತ್ರ ಮಹತ್ವದ್ದು.

ಕನ್ನಡಿಗರೂ ಹಿಂದೆ ಬಿದ್ದಿಲ್ಲ

ವಿದೇಶಗಳಲ್ಲಿ ತಮ್ಮ ಛಾಪು ಮೂಡಿಸಿರುವ ಭಾರತೀಯರು ನೂರಾರು ಜನರಿದ್ದಾರೆ. ಈ ವಿಷಯದಲ್ಲಿ ಕರ್ನಾಟಕದವರೂ ಹಿಂದೆ ಬಿದ್ದಿಲ್ಲ. ಮಂಡ್ಯ ಜಿಲ್ಲೆಯ ವಿವೇಕ್ ಹಲ್ಲೆಗೆರೆ ಮೂರ್ತಿ ಅವರು ಬರಾಕ್ ಒಬಾಮ ಆಡಳಿತದಲ್ಲಿ ಅಮೆರಿಕದ ಜನರಲ್ ಸರ್ಜನ್ ಆಗಿದ್ದರು. ಮೈಸೂರಿನ ಗೀತಾ ಗೋಪಿನಾಥ್ ಅಂತಾರಾಷ್ಟ್ರೀಯ ಆರ್ಥಿಕ ತಜ್ಞೆಯಾಗಿ ಮೆರೆಯುತ್ತಿರುವ ಹೆಮ್ಮೆಯ ಕನ್ನಡತಿ. ಅಮೆರಿಕದ ಪ್ರಜೆಯಾಗಿರುವ ಗೀತಾ 2019ರಲ್ಲಿ ಐಎಂಎಫ್​ನ ಮುಖ್ಯ ಆರ್ಥಿಕ ತಜ್ಞೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದು. ಮನು ರಾಜು ಹೆಸರು ಕೂಡ ಅಮೆರಿಕದ ರಾಜಕೀಯ ವಲಯದಲ್ಲಿ ಚಿರಪರಿಚಿತ. ಸಿಎನ್​ಎನ್ ವಾಹಿನಿಯಲ್ಲಿ ಹಿರಿಯ ಪತ್ರಕರ್ತ. ಅವರು ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ಮೊಮ್ಮಗ. 

ಕಲಬುರಗಿ ಮೂಲದ ಡಾ. ನೀರಜ್ ಪಾಟೀಲ್ ವೃತ್ತಿಯಲ್ಲಿ ವೈದ್ಯರಾಗಿದ್ದರೂ ಬ್ರಿಟನ್ ರಾಜಕಾರಣದಲ್ಲೂ ಸಕ್ರಿಯರು. ಲೇಬರ್ ಪಕ್ಷದ ಪಾಟೀಲ್ 2010ರಿಂದ 2011ರವರೆಗೆ ಲಂಡನ್​ನ ಲ್ಯಾಂಬೆಥ್ ನಗರದ ಮೇಯರ್ ಆಗಿದ್ದರು. ರಾಘವೇಂದ್ರ ಆರ್. ಬಾಳಿಗಾ ಅವರು ಅಮೆರಿಕದ ಓಹಿಯೋ ಸ್ಟೆಟ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್​ನಲ್ಲಿ ಪ್ರೊಫೆಸರ್. ಇವರು ಬೆಂಗಳೂರಿನವರು. ಉಡುಪಿ ಜಿಲ್ಲೆಯ ಕಾಪುವಿನ ಬಿ.ಆರ್. ಶೆಟ್ಟಿ ಯುಎಇ, ದುಬೈನಲ್ಲಿ ತಮ್ಮದೇ ಉದ್ಯಮ ಸಾಮ್ರಾಜ್ಯವನ್ನು ನಿರ್ವಿುಸಿದ ಸಾಹಸಿ.

ಸಾಧನೆಯ ಛಾಪು ಒತ್ತಿದ ಭಾರತೀಯರು

ಮುಂದುವರಿದ ರಾಷ್ಟ್ರಗಳಲ್ಲಿ ತಮ್ಮ ಪ್ರತಿಭೆಯಿಂದಲೇ ದೊಡ್ಡ ಹೆಸರು ಮಾಡಿರುವ ಭಾರತೀಯರ ಸಂಖ್ಯೆ ಸಣ್ಣದೇನಿಲ್ಲ. ಲಕ್ಷ್ಮೀ ಮಿತ್ತಲ್, ಸುಂದರ್ ಪಿಚಾಯ್, ವಿನೋದ್ ಖೋಸ್ಲಾ, ಸತ್ಯ ನಾದೆಳ್ಲ, ಇಂದ್ರಾ ನೂಯಿ... ಹೀಗೆ ಹೇಳುತ್ತ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಇವರ ಜ್ಞಾನವೇ ಆ ದೇಶಗಳ ಸಂಪತ್ತು ಎನ್ನುವಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ.

ದಿನಾಚರಣೆ ಹಿನ್ನೆಲೆ

ಪ್ರಪಂಚದ ವಿವಿಧೆಡೆ ಇರುವ ಭಾರತೀಯರು ತಾಯ್ನಾಡಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ, ಅವರಿಗೆ ಗೌರವ ಸಲ್ಲಿಸಲು ಜನವರಿ 9ರಂದು ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತಿದೆ. ಇದನ್ನು ಅನಿವಾಸಿ ಭಾರತೀಯರ (ಎನ್​ಆರ್​ಐ) ದಿನ ಎಂದೂ ಕರೆಯಲಾಗುತ್ತದೆ. 1915ರ ಜ. 9ರಂದು ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ ಆಗಿದ್ದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜ. 9ನ್ನು ಪ್ರವಾಸಿ ಭಾರತೀಯ ದಿವಸ್ ಆಗಿ ಆಚರಿಸಲು ನಿರ್ಧರಿಸಿತು.

ಅನಿವಾಸಿಗಳಿಗೆ ಆಸರೆ

ಅನಿವಾಸಿ ಭಾರತೀಯರು ಸಂಕಷ್ಟಕ್ಕೀಡಾದರೆ ತಕ್ಷಣ ಸ್ಪಂದಿಸಿ, ಪರಿಹಾರಕ್ಕಾಗಿ ಎಡೆಬಿಡದೆ ಕೆಲಸ ಮಾಡುವ ಮಾತೃಹೃದಯಿ ಡಾ. ಆರತಿ ಕೃಷ್ಣ. ಅಮೆರಿಕ ರಾಯಭಾರ ಕಚೇರಿಯಲ್ಲಿ ಸುಮಾರು 12 ವರ್ಷ ಸೇವೆ ಸಲ್ಲಿಸಿ, ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ 6 ವರ್ಷ ‘ಸಾಗರೋತ್ತರ ಸಚಿವಾಲಯ ಸಮುದಾಯ ಅಭಿವೃದ್ಧಿ ಅಧಿಕಾರಿ’ಯಾಗಿ ಕಾರ್ಯನಿರ್ವಹಿಸಿದರು. ಜಗತ್ತಿನ ಅನೇಕ ರಾಷ್ಟ್ರಗಳ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಆರತಿ ಮೂಲತಃ ಚಿಕ್ಕ ಮಗಳೂರು ಜಿಲ್ಲೆಯವರು. ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅವರು ವಿಧಾನಪರಿಷತ್ ಸದಸ್ಯರಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದಾರೆ.

ಶತಮಾನಗಳ ಹಿಂದೆಯೇ ವಲಸೆ

ವಿದೇಶಗಳಿಗೆ ಭಾರತದಿಂದ ವಲಸೆ ಹೋಗುವುದು ಈಗಿನ ವಿದ್ಯಮಾನವಲ್ಲ. ಇದು ಮೊದಲ ಶತಮಾನದಷ್ಟು ಹಿಂದೆಯೇ ಪ್ರಾರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಹಿಂದೂ ಮತ್ತು ಬೌದ್ಧ ವಿದ್ವಾಂಸರು ಮತ್ತು ವ್ಯಾಪಾರಿಗಳು ವೃತ್ತಿ, ವ್ಯವಹಾರಕ್ಕಾಗಿ ಆಗ್ನೇಯ ಏಷ್ಯಾ (ಆಗ ಶ್ರೀವಿಜಯ ಸಾಮ್ರಾಜ್ಯ), ಪೂರ್ವ ಆಫ್ರಿಕಾ ಮತ್ತು ಮಧ್ಯ ಏಷ್ಯಾಕ್ಕೆ ಹೋಗಿ ನೆಲೆಸಿದರು. ಭಾರತದಿಂದ ಮಸಾಲೆ ಮತ್ತು ಜವಳಿ ರಫ್ತನ್ನು ಉತ್ತೇಜಿಸಿದರು. ರೊಮಾನಿ ಎಂದು ಕರೆಯಲ್ಪಡುವ ಗಣನೀಯ ಸಂಖ್ಯೆಯ ಜಿಪ್ಸಿಗಳು 11ನೇ ಶತಮಾನದಲ್ಲಿ ಭಾರತದಿಂದ ಯುರೋಪಿಗೆ ವಲಸೆ ಬಂದರು. 

18ನೇ ಶತಮಾನದ ವೇಳೆಗೆ ಮುಲ್ತಾನಿ ವ್ಯಾಪಾರಿಗಳು ರಷ್ಯಾ, ಪರ್ಷಿಯಾ ಮತ್ತು ಮಧ್ಯ ಏಷ್ಯಾದಲ್ಲಿ ತಮ್ಮ ಛಾಪು ಮೂಡಿಸಲು ಪ್ರಾರಂಭಿಸಿದರು. ಆದರೆ 1834ರಲ್ಲಿ ಬ್ರಿಟಿಷ್, ಫ್ರೆಂಚ್ ಮತ್ತು ಡಚ್ ವಸಾಹತುಗಳು ಲಕ್ಷಾಂತರ ಭಾರತೀಯ ಕಾರ್ವಿುಕರನ್ನು ಮಾರಿಷಸ್, ಕೆರಿಬಿಯನ್, ದಕ್ಷಿಣ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಗುಲಾಮರನ್ನಾಗಿ ಕೆಲಸ ಮಾಡಲು ಕಳಿಸಿಕೊಡಲು ಆರಂಭಿಸಿದ ನಂತರ ಆಫ್ರಿಕಾಕ್ಕೆ ಮೊದಲ ಪ್ರಮುಖ, ವ್ಯವಸ್ಥಿತ ವಲಸೆ ಪ್ರಾರಂಭವಾಯಿತು. ಕಳೆದ ಶತಮಾನದಲ್ಲಿ ಕೋಟ್ಯಂತರ ಶ್ರೀಮಂತ ವಿದ್ಯಾರ್ಥಿಗಳು ಮತ್ತು ಹೆಚ್ಚು ಕೌಶಲಪೂರ್ಣ ವೃತ್ತಿಪರ ಭಾರತೀಯರು ದೂರದ ದೇಶಗಳಲ್ಲಿ ನೆಲೆಸಿದ್ದಾರೆ. ಕಾರ್ಪೆರೇಟ್​ಗಳು, ವ್ಯವಹಾರಗಳು, ಸರ್ಕಾರಗಳ ಶ್ರೇಣಿಯಲ್ಲಿ ಮೇಲ್ಮಟ್ಟಕ್ಕೆ ಏರುತ್ತಿದ್ದಾರೆ. ಜಗತ್ತಿನಲ್ಲಿ ಭಾರತೀಯ ಬ್ರಾ್ಯಂಡ್ ಅನ್ನು ವೈಭವೀಕರಿಸುತ್ತಿದ್ದಾರೆ.

ಸವಾಲುಗಳು

ಅನಿವಾಸಿ ಭಾರತೀಯರೆಲ್ಲರೂ ಆರ್ಥಿಕವಾಗಿ ಸಬಲರಾಗಿಲ್ಲ. ಕೆಲಸ ಅರಸಿ ವಿದೇಶಗಳಿಗೆ ಹೋಗಿದ್ದರೂ ಅಲ್ಲಿನ ಸ್ಥಳೀಯ ಕಾನೂನುಗಳು, ಆಚರಣೆಗಳು, ವರ್ಣಭೇದ, ಜನಾಂಗೀಯ ನಿಂದನೆಗಳಿಂದ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿರುವ ನಿದರ್ಶನಗಳಿವೆ. ಅದರಲ್ಲೂ ಅಮೆರಿಕ, ಜರ್ಮನಿ, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ... ಹೀಗೆ ಅನೇಕ ದೇಶಗಳು ಅನಿವಾಸಿಗಳಿಗೆ ಇತ್ತೀಚೆಗೆ ಸಾಕಷ್ಟು ನಿರ್ಬಂಧ, ನಿಬಂಧನೆಗಳನ್ನು ವಿಧಿಸುತ್ತಿವೆ. ಇವುಗಳನ್ನು ಎದುರಿಸಿ, ಉತ್ತಮ ಜೀವನ ಕಟ್ಟಿಕೊಳ್ಳಲು ಹೆಣಗಾಡುವ ಪರಿಸ್ಥಿತಿಯೂ ಬಹಳಷ್ಟು ಅನಿವಾಸಿ ಭಾರತೀಯರಿಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net