ಕೇಂದ್ರ ಸಚಿವ ಜಯಂತ್ ಚೌಧರಿಗೆ ಕೊಲೆ ಬೆದರಿಕೆ; ರೈತರ ಪರವಾಗಿ ಮಾತಾಡಿದ್ದೇ ಈ ಘಟನೆಗೆ ಕಾರಣವಾಯ್ತಾ..? | Jayant Chaudhary

Jayant Chaudhary |  ಕೇಂದ್ರ ಸಚಿವ ಜಯಂತ್ ಚೌಧರಿ
Jayant Chaudhary | ಕೇಂದ್ರ ಸಚಿವ ಜಯಂತ್ ಚೌಧರಿ
Published on
ಲಖನೌ: ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಜಯಂತ್ ಚೌಧರಿ (Jayant Chaudhary) ಅವರಿಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದ್ದು, ಗುರುವಾರ ಸಂಜೆ ಈ ಘಟನೆ ನಡೆದಿದೆ, ಸಚಿವರ ಭದ್ರತೆಯ ದೃಷ್ಟಿಯಿಂದ ದೆಹಲಿ ಮತ್ತು ಉತ್ತರ ಪ್ರದೇಶದ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಇಸ್ಮಾಯಿಲ್ ಎನ್ನಲಾದ ವ್ಯಕ್ತಿ ಸಚಿವರ ಅಧಿಕೃತ ಪ್ರವಾಸ ಯೋಜನೆಯ ಪ್ರತಿಯನ್ನು ಹೊಂದಿದ್ದನೆಂದು ಆರೋಪಿಸಲಾಗಿದೆ. ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪಶ್ಚಿಮ ಬಂಗಾಳ ಪೊಲೀಸರು ಸಹ ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಜಯಂತ್ ಚೌಧರಿ ಅವರ ಮೊಬೈಲ್‌ಗೆ ಕರೆ ಮಾಡಿದ ಇಸ್ಮಾಯಿಲ್, ಸಚಿವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪ್ರಾಣ ತೆಗೆಯುವುದಾಗಿ ನೇರ ಬೆದರಿಕೆ ಹಾಕಿದ್ದಾನೆ. ಈ ಘಟನೆ ನಡೆದ ತಕ್ಷಣ ಸಚಿವರ ಕಚೇರಿಯು ಗೃಹ ಸಚಿವಾಲಯ ಮತ್ತು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ದೂರು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರ ವಿಶೇಷ ಘಟಕ ತನಿಖೆಯನ್ನು ಕೈಗೆತ್ತಿಕೊಂಡಿದೆ. ಕರೆ ಬಂದಿರುವ ಸಂಖ್ಯೆಯ ಟವರ್ ಲೋಕೇಶನ್ ಪತ್ತೆ ಹಚ್ಚಲಾಗುತ್ತಿದ್ದು, ಶಂಕಿತ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಜಯಂತ್ ಚೌಧರಿ ಪಶ್ಚಿಮ ಉತ್ತರ ಪ್ರದೇಶ ಭಾಗದ ಪ್ರಭಾವಿ ನಾಯಕರಾಗಿರುವುದರಿಂದ ಮತ್ತು ಸದ್ಯ ಕೇಂದ್ರ ಸಚಿವರಾಗಿರುವುದರಿಂದ ಅವರ ದೆಹಲಿಯ ನಿವಾಸ ಮತ್ತು ಲಖನೌ ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈತರನ್ನು ಬೆಂಬಲಿಸಿದ್ದೇ ತಪ್ಪಾಯ್ತಾ..?

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಚೌಧರಿ, ರೈತರು ಕೇವಲ ಬೆಳೆ ಬೆಳೆಯುವವರಾಗಿ ಉಳಿಯದೆ, ವ್ಯವಹಾರದ ಚತುರತೆಯನ್ನು ಬೆಳೆಸಿಕೊಂಡು ಆರ್ಥಿಕವಾಗಿ ಹೇಗೆ ಸಬಲರಾಗಬಹುದು ಎಂಬುದನ್ನು ಅವರು ಸವಿಸ್ತಾರವಾಗಿ ವಿವರಿಸಿದ್ದರು.
ರೈತರು ಆರ್ಥಿಕವಾಗಿ ಬಲಶಾಲಿಯಾಗಲು ಮೊದಲು ಸಂಘಟಿತ ರೀತಿಯಲ್ಲಿ ಕೆಲಸ ಮಾಡುವುದನ್ನು ಕಲಿಯಬೇಕು, ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಒಬ್ಬಂಟಿಯಾಗಿ ಹೋರಾಡುವ ಬದಲು, ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಒಂದಾಗಿ ಕೆಲಸ ಮಾಡುವುದು ಅತಿ ಅಗತ್ಯವಾಗಿದೆ. ಈ ಸಂಸ್ಥೆಗಳ ಮೂಲಕ ರೈತರು ನೇರವಾಗಿ ದೊಡ್ಡ ಮಾರುಕಟ್ಟೆಗಳನ್ನು ಪ್ರವೇಶಿಸಬಹುದು ಮತ್ತು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವ ಮೂಲಕ ವ್ಯವಹಾರವನ್ನು ವಿಸ್ತರಿಸಬಹುದು ಎಂಬುದು ಅವರ ಪ್ರಬಲವಾದ ವಾದವಾಗಿತ್ತು.
ತಮ್ಮ ಅಜ್ಜ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಮತ್ತು ತಂದೆ ಅಜಿತ್ ಸಿಂಗ್ ರೈತರಿಗಾಗಿ ಹಾಕಿಕೊಟ್ಟ ದಾರಿಯನ್ನು ಸ್ಮರಿಸಿದ ಜಯಂತ್ ಚೌಧರಿ, ಇಂದಿನ ಸರ್ಕಾರವು ಅದೇ ಸಿದ್ಧಾಂತಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಇಂದಿನ ಕಾಲಘಟ್ಟದಲ್ಲಿ ರೈತರು ಅಸಹಾಯಕರಲ್ಲ, ಬದಲಾಗಿ ಅವರು ದೇಶದ ಅತ್ಯಮೂಲ್ಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಹೆಮ್ಮೆಯ ಶಕ್ತಿಗಳಾಗಿದ್ದಾರೆ ಎಂದು ತಿಳಿಸಿದ್ದರು.
ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗನಾಗಿರುವ ಸಚಿವ ಜಯಂತ್, ರೈತ ಚಳವಳಿ ಮತ್ತು ಪಶ್ಚಿಮ ಯುಪಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ಅವರ ರಾಜಕೀಯ ನಿರ್ಧಾರಗಳು ಕೆಲವು ವಲಯಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬೆದರಿಕೆ ಕರೆಗೂ ಆ ಅಸಮಾಧಾನಕ್ಕೂ ಸಂಬಂಧವಿದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net