ಚಿಪ್ಸ್ ಬದಲು ಒಳ ಉಡುಪು ಮಾರಾಟ! ಮೆಟ್ರೋ ನಿಲ್ದಾಣದ ವಿಚಿತ್ರ ಯಂತ್ರ ಕಂಡು ಜನ ಶಾಕ್; ವಿಡಿಯೋ ವೈರಲ್..Underwear

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳಲ್ಲಿ ತಿಂಡಿ ತಿನಿಸುಗಳ ಅಂಗಡಿಯನ್ನು ನೋಡುವುದು ಸರ್ವೇ ಸಾಮಾನ್ಯ. ಆದರೆ, ದೆಹಲಿಯ ಪೂರ್ವ ಮೆಟ್ರೋ ನಿಲ್ದಾಣದಲ್ಲಿ ತಿನ್ನುವ ಪದಾರ್ಥದ ಅಂಗಡಿ ಬದಲಿಗೆ, ಒಳ ಉಡುಪುಗಳನ್ನು (Underwear) ವಿತರಿಸುವ ವೆಂಡಿಂಗ್ ಮೆಷಿನ್ ಇರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ.

ವಿಡಿಯೋದಲ್ಲೇನಿದೆ?

ಮಹಿಳೆಯೊಬ್ಬಳು ಈ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಯಂತ್ರವು ಚಿಪ್ಸ್, ಬಿಸ್ಕತ್ತು ಅಥವಾ ತಂಪು ಪಾನೀಯಗಳ ಬದಲಿಗೆ ಒಳ ಉಡುಪುಗಳನ್ನು ಮಾರಾಟ ಮಾಡುತ್ತಿದೆˌ ಮೆಟ್ರೋದಲ್ಲಿ ಪ್ರಯಾಣಿಸುವಾಗ ಹಠಾತ್ ಆಗಿ ಹೊಸ ಒಳ ಉಡುಪು ಬೇಕು ಎಂದು ಯಾರಿಗೆ ಅರಿವಾಗುತ್ತದೆ? ಇದು ನಿಜಕ್ಕೂ ವಿಚಿತ್ರ ಮತ್ತು ತಮಾಷೆಯಾಗಿದೆ! ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, ಅನೇಕ ಬಳಕೆದಾರರು ಹಾಸ್ಯಾಸ್ಪದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲವು ಮಹಿಳಾ ಬಳಕೆದಾರರು ಇದನ್ನು ಬೆಂಬಲಿಸಿದ್ದು, ಮುಟ್ಟು (Periods) ಅಥವಾ ಲೀಕೇಜ್‌ನಂತಹ ತುರ್ತು ಸಂದರ್ಭಗಳಲ್ಲಿ ಒಳ ಉಡುಪುಗಳನ್ನು ಬದಲಾಯಿಸುವ ಅನಿವಾರ್ಯತೆ ಇರುತ್ತದೆ. ಇಂತಹ ಸಮಯಕ್ಕೆ ಈ ಯಂತ್ರ ಸಹಾಯಕವಾಗಿದೆ ಎಂದು ಬರೆದಿದ್ದಾರೆ. ಇನ್ನೂ ಕೆಲವೊಂದು ಬಳಕೆದಾರರು ನಾವು ಜಪಾನ್ ತಂತ್ರಜ್ಞಾನವನ್ನು ಕಾಪಿ ಮಾಡುತ್ತಿದ್ದೇವೆಯೇ? ಎಂದು ಕಾಮೆಂಟ್​ ಮಾಡಿದ್ದಾರೆ.
ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡುವ ವೆಂಡಿಂಗ್ ಮೆಷಿನ್‌ಗಳು ಸಾಮಾನ್ಯವಾಗಿರುವುದನ್ನು ನಾವು ನೋಡಬಹುದು. ಹಾಗೆಯೇ ಪ್ರಯಾಣಿಕರು ಸಾರಿಗೆ ಕೇಂದ್ರಗಳಲ್ಲಿ ನೈರ್ಮಲ್ಯ ಉತ್ಪನ್ನಗಳು, ಛತ್ರಿಗಳು, ಲೇಖನ ಸಾಮಗ್ರಿಗಳು ಮತ್ತು ಬಟ್ಟೆ ವಸ್ತುಗಳನ್ನು ಸಹ ಸುಲಭವಾಗಿ ಖರೀದಿಸುತ್ತಾರೆ. ಹಾಗೆಯೇ ಭಾರತದಲ್ಲಿ ಇದೇ ರೀತಿಯ ಪರಿಕಲ್ಪನೆಗಳ ಪರಿಚಯವು ಅನುಕೂಲತೆ ಮತ್ತು ಪ್ರಯಾಣಿಕರ ಸೌಕರ್ಯದ ಮೇಲೆ ಗಮನವನ್ನು ಹೆಚ್ಚಿಸುತ್ತಿದೆ.
ಭಾರತೀಯ ಮೆಟ್ರೋ ಕೇಂದ್ರಗಳು ಆಧುನೀಕರಣಗೊಂಡಂತೆ, ಪ್ರಯಾಣಿಕರ ದೈನಂದಿನ ಹಾಗೂ ತೀರಾ ವೈಯಕ್ತಿಕ ಅಗತ್ಯಗಳನ್ನು ಪೂರೈಸುವುದು ನಾಗರಿಕ ಸೌಲಭ್ಯಗಳ ಪ್ರಗತಿಪರ ಲಕ್ಷಣವೆಂದು ಪರಿಗಣಿಸಲಾಗುತ್ತಿದೆ. ಈಗ ಒಳ ಉಡುಪು ಮಾರಾಟ ಯಂತ್ರವು ಜನರಿಗೆ ಹಾಸ್ಯವಾಗಿ ಕಾಣಿಸಿಕೊಂಡರೂ, ಮುಂದಿನ ದಿನಗಳಲ್ಲಿ ಇವು ಪ್ರಯೋಜನಗಳನ್ನು ನೀಡುತ್ತವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net