ಉದಯನಿಧಿ ಬಂಧನ; ತಮಿಳುನಾಡಿನಲ್ಲಿ ಉದ್ವಿಗ್ನತೆ; ರಾಜ್ಯಸಭೆಯಲ್ಲಿ ಪ್ರಸ್ತಾಪ; ಟಿವಿಕೆಯನ್ನು ಫ್ಯಾಸಿಸ್ಟ್ ಎಂದು ಕರೆದ ಡಿಎಂಕೆ | DMK

ಉದಯನಿಧಿ ಸ್ಟಾಲಿನ್​
ಉದಯನಿಧಿ ಸ್ಟಾಲಿನ್​
Published on
ಚೆನ್ನೈ: ಸಿಎಂ ವಿಜಯ್ ಮತ್ತು ನಟಿ ತ್ರಿಷಾ ಅವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಹಾಗೂ ಅಸಭ್ಯ ಹೇಳಿಕೆ ನೀಡಿರುವ ಆರೋಪದ ಮೇಲೆ ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದು, ತಮಿಳುನಾಡಿನಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜ್ಯಾದ್ಯಂತ ಡಿಎಂಕೆ(DMK) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮದ್ರಾಸ್ ಹೈಕೋರ್ಟ್ ಹೊರಗೆ ಉದಯನಿಧಿ ಬಂಧನ ವಿರೋಧಿಸಿ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪೊಲೀಸರ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಕರೆದು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಅದೇ ರೀತಿ ತಂಜಾವೂರಿನಲ್ಲಿ ಪೊಲೀಸರ ಮೇಲೆ ಚಪ್ಪಲಿ ಎಸೆದು, ಪ್ರತಿಕೃತಿ ದಹನ ಮಾಡಿ ಡಿಎಂಕೆ ಕಾರ್ಯಕರ್ತರು ದಾಂಧಲೆ ಎಬ್ಬಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪ

ರಾಜ್ಯಸಭೆಯಲ್ಲಿ ಇಂದು ತಮಿಳುನಾಡಿನ ಡಿಎಂಕೆ ಸಂಸದ ತಿರುಚಿ ಶಿವ ಅವರು ಉದಯನಿಧಿ ಸ್ಟಾಲಿನ್ ಬಂಧನದ ವಿಷಯವನ್ನು ಪ್ರಸ್ತಾಪಿಸಿದರು. ಬಂಧನವನ್ನು ಖಂಡಿಸಿದರು. ಸದನವನ್ನು ಸ್ವಲ್ಪ ಸಮಯದ ನಂತರ ಮುಂದೂಡಲಾಯಿತು.

ಟಿವಿಕೆಯನ್ನು ಪ್ಯಾಸಿಸ್ಟ್ ಎಂದು ಕರೆದ ಡಿಎಂಕೆ

ತಮ್ಮ ನಾಯಕ ಉದಯನಿಧಿ ಬಂಧನವನ್ನು ಖಂಡಿಸಿದ ಡಿಎಂಕೆ, ಟಿವಿಕೆ ಸರ್ಕಾರವನ್ನು 'ಫ್ಯಾಸಿಸ್ಟ್' ಎಂದು ವಾಗ್ದಾಳಿ ನಡೆಸಿದ್ದು, ವಿಜಯ್ ಸರ್ಕಾರವು ರಾಜಕೀಯ ದ್ವೇಷ ಮತ್ತು ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದೆ.

ಕಾವೇರಿ ವಿಷಯದ ಕುರಿತು ಉದಯನಿಧಿ ಅವರ ಭಾಷಣದಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಮತ್ತು ಅವರು ಅಶ್ಲೀಲ ಭಾಷೆ ಅಥವಾ ದ್ವಿ-ಉದ್ದೇಶದ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಹೇಳಿಕೆಗಳಿಗೆ ಆಧಾರವೇನು ಎಂದು ಪ್ರಶ್ನಿಸಿದೆ.

ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಹಲವಾರು ನಾಯಕರು ಸಾರ್ವಜನಿಕವಾಗಿ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ ಆದರೆ ಈಗ ತಮ್ಮನ್ನು ಸಭ್ಯತೆಯ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆಡಳಿತ ಪಕ್ಷವು ಬೂಟಾಟಿಕೆಯಿಂದ ವರ್ತಿಸುತ್ತಿದೆ ಎಂದು ಡಿಎಂಕೆ ಎಂದು ಆಕ್ರೋಶ ವ್ಯಕ್ತಪಡಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net