ತಂದೆ vs ಮಗಳು: ಪ್ರತಿಷ್ಠಿತ TVS ಗ್ರೂಪ್‌ನಲ್ಲಿ ಫ್ಯಾಮಿಲಿ ವಾರ್, ಬೋರ್ಡ್‌ರೂಮ್‌ನಲ್ಲಿ ಬಿಕ್ಕಟ್ಟಿನ ಕಿಡಿ ಸ್ಫೋಟ! TVS Family

ತಂದೆ vs ಮಗಳು: ಪ್ರತಿಷ್ಠಿತ TVS ಗ್ರೂಪ್‌ನಲ್ಲಿ ಫ್ಯಾಮಿಲಿ ವಾರ್, ಬೋರ್ಡ್‌ರೂಮ್‌ನಲ್ಲಿ ಬಿಕ್ಕಟ್ಟಿನ ಕಿಡಿ ಸ್ಫೋಟ! TVS Family
ತಂದೆ vs ಮಗಳು: ಪ್ರತಿಷ್ಠಿತ TVS ಗ್ರೂಪ್‌ನಲ್ಲಿ ಫ್ಯಾಮಿಲಿ ವಾರ್, ಬೋರ್ಡ್‌ರೂಮ್‌ನಲ್ಲಿ ಬಿಕ್ಕಟ್ಟಿನ ಕಿಡಿ ಸ್ಫೋಟ! TVS Family
Published on

ಪ್ರಮುಖ ಮುಖ್ಯಾಂಶಗಳು

  • ಟಿವಿಎಸ್ ಸಮೂಹದ ಉದ್ಯಮ ಕುಟುಂಬದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ ಬಯಲು
  • ಕಂಪನಿಯ ಆಡಳಿತ ಮಂಡಳಿಯ ಮಟ್ಟದಲ್ಲಿಯೂ ಟಿವಿಎಸ್​ ಕುಟುಂಬದ ಬಿಕ್ಕಟ್ಟು ಗೋಚರಿಸುತ್ತಿವೆ
  • ಕೌಟುಂಬಿಕ ಬಿಕ್ಕಟ್ಟು ಕಂಪನಿಯ ಆಡಳಿತಾತ್ಮಕ ಕಾರ್ಯವೈಖರಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ
TVS Family : ಟಿವಿಎಸ್ ಸಮೂಹದ ಉದ್ಯಮ ಕುಟುಂಬದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಕಂಪನಿಯ ಆಡಳಿತ ಮಂಡಳಿಯ ಮಟ್ಟದಲ್ಲಿಯೂ ಇದೀಗ ಗೋಚರಿಸುತ್ತಿವೆ. ಈ ಕೌಟುಂಬಿಕ ಬಿಕ್ಕಟ್ಟು ಕಂಪನಿಯ ಆಡಳಿತಾತ್ಮಕ ಕಾರ್ಯವೈಖರಿಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸಂಸ್ಥೆಯ ಮುಂದಿನ ಹಾದಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ದಿ ಎಕನಾಮಿಕ್ಸ್​ ಟೈಮ್ಸ್​ ವರದಿಯ ಪ್ರಕಾರ, ಕಂಪನಿಯ ಬೋರ್ಡ್​ ರೂಮ್​​ನಲ್ಲಿ ನಡೆದ ತ್ವರಿತ ಬೆಳವಣಿಗೆಗಳ ಬಳಿಕ ಟಿವಿಎಸ್​ ಸಮೂಹದ ಮುಖ್ಯಸ್ಥ ವೇಣು ಶ್ರೀನಿವಾಸನ್​ ಮತ್ತು ಅವರ ಮಗಳು ಹಾಗೂ ವ್ಯವಸ್ಥಾಪ ನಿರ್ದೇಶಕಿ ಲಕ್ಷ್ಮೀ ವೇಣು ನಡುವಿನ ಭಿನ್ನಾಭಿಪ್ರಾಯಗಳು ಬೆಳಕಿಗೆ ಬಂದಿವೆ.
ಕೇವಲ ಮೂರು ದಿನಗಳ ಅಂತರದಲ್ಲಿ ಎರಡು ಬಾರಿ ಸಭೆ ಸೇರಿದ ಕಂಪನಿಯ ಆಡಳಿತ ಮಂಡಳಿಯು, ಮೊದಲು ಕಂಪನಿ ಸೆಕ್ರೆಟರಿ ಪಿ.ಡಿ. ದೇವ್ ಕಿಶನ್ ಅವರ ರಾಜೀನಾಮೆಯನ್ನು ಅಂಗೀಕರಿಸಿ, ನಂತರದ ಸಭೆಯಲ್ಲಿ ಆ ನಿರ್ಧಾರವನ್ನು ಅನಿರೀಕ್ಷಿತವಾಗಿ ಹಿಂಪಡೆಯಿತು. 
ವರದಿಗಳ ಪ್ರಕಾರ, ದೇವ್ ಕಿಶನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಲಕ್ಷ್ಮಿ ವೇಣು ಅವರು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ದೇವ್ ಕಿಶನ್ ಅವರು ಸಮೂಹ ಮಟ್ಟದ ಸೇವೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಪನಿಯ ಆಂತರಿಕ ಕಾರ್ಯವಿಧಾನಕ್ಕೆ ಪೂರಕವಾಗಿಲ್ಲ ಎಂಬ ಕಾರಣ ನೀಡಿ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಪ್ರಯತ್ನಿಸಲಾಗಿತ್ತು. ಆದರೆ, ರಾಜೀನಾಮೆಯನ್ನು ಹಿಂಪಡೆಯಲಾಗಿದ್ದು, ಲಕ್ಷ್ಮೀ ವೇಣು ಪ್ರಯತ್ನ ವಿಫಲವಾಗಿದೆ.
ಉತ್ತರಾಧಿಕಾರಿಯ ನೇಮಕವೂ ಸೇರಿದಂತೆ ಪ್ರಮುಖ ಹುದ್ದೆಗಳ ಬದಲಾವಣೆಯು ಒಂದು ವ್ಯವಸ್ಥಿತ ಪ್ರಕ್ರಿಯೆಯ ಮೂಲಕ ನಡೆಯುತ್ತದೆ. ಆದರೆ, ಇಲ್ಲಿ ಆ ನಿಯಮಗಳನ್ನು ಗಾಳಿಗೆ ತೂರಿ ತರಾತುರಿಯಲ್ಲಿ ತೀರ್ಮಾನ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗಳಿಂದಾಗಿ ಟಿವಿಎಸ್ ಕಂಪನಿಯ ಸ್ವತಂತ್ರ ನಿರ್ದೇಶಕ ಆರ್‌. ಗೋಪಾಲನ್ ಅವರು ಇಕ್ಕಟ್ಟಿಗೆ ಸಿಲುಕಿದ್ದು, ಈಗಾಗಲೇ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ನಿರ್ಗಮನದ ನಂತರ, ಈಗ 'ಟಿವಿಎಸ್ ಹೋಲ್ಡಿಂಗ್ಸ್' ಎಂದು ಮರುನಾಮಕರಣಗೊಂಡಿರುವ ಟಿವಿಎಸ್​ ಕಂಪನಿಯು ಶ್ರೀನಿವಾಸನ್ ಅವರನ್ನು ಮತ್ತೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ. 
ಮತ್ತೊಂದೆಡೆ, ಮಾರುಕಟ್ಟೆ ನಿಯಂತ್ರಕ ಸಂಸ್ಥೆ 'ಸೆಬಿ' (SEBI) ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು, ಶ್ರೀನಿವಾಸನ್ ಆಪ್ತರು ಮಾತ್ರ ಇದೊಂದು ಸಣ್ಣ ವಿಷಯವೆಂದು ತಳ್ಳಿಹಾಕಿದ್ದಾರೆ.

ಏನಿದು ಕುಟುಂಬದ ಬಿಕ್ಕಟ್ಟು?

ಟಿವಿಎಸ್ ಸಮೂಹದ ಪ್ರವರ್ತಕ ಕುಟುಂಬದಲ್ಲಿ ವ್ಯವಹಾರದ ಹಂಚಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಮಹತ್ವದ ಬದಲಾವಣೆಗಳು ಕಂಡುಬಂದಿವೆ. 2024ರಲ್ಲಿ ನಡೆದ ಕೌಟುಂಬಿಕ ಒಪ್ಪಂದದಂತೆ, ಟಿವಿಎಸ್ ಸಾಮ್ರಾಜ್ಯವನ್ನು ವೇಣು ಶ್ರೀನಿವಾಸನ್ ಅವರ ಮಕ್ಕಳಾದ ಸುದರ್ಶನ್ ವೇಣು (ಟಿವಿಎಸ್ ಮೋಟಾರ್ಸ್) ಮತ್ತು ಲಕ್ಷ್ಮಿ ವೇಣು (ಟಿವಿಎಸ್ ಹೋಲ್ಡಿಂಗ್ಸ್/ಸುಂದರಂ ಕ್ಲೇಟನ್) ನಡುವೆ ವಿಭಜಿಸಲಾಗಿತ್ತು. ಆದರೆ, 2026ರ ಆರಂಭದಲ್ಲಿ ಸುಂದರಂ ಕ್ಲೇಟನ್ ಮಂಡಳಿಯಲ್ಲಿ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳು ತಲೆದೂರಿದ್ದು, ಮಗಳ ನಿರ್ಧಾರಗಳನ್ನು ಪ್ರಶ್ನಿಸಿ ತಂದೆ ವೇಣು ಶ್ರೀನಿವಾಸನ್ ಅವರೇ ಪುನಃ ಮಂಡಳಿಯ ಚುಕ್ಕಾಣಿ ಹಿಡಿದಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯು ದಶಕಗಳ ಕಾಲ ಒಗ್ಗಟ್ಟಿನಿಂದಿದ್ದ ಟಿವಿಎಸ್ ಕುಟುಂಬದ ವ್ಯವಹಾರ ನಿರ್ವಹಣೆಯಲ್ಲಿ ಸಣ್ಣಮಟ್ಟದ ಸಂಘರ್ಷಕ್ಕೆ ಕಾರಣವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net