

ನವದೆಹಲಿ: ಟಿವಿಎಸ್ ಕುಟುಂಬದ ಆಸ್ತಿ ಹಂಚಿಕೆ ವಿವಾದ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಖ್ಯಾತ ಕೈಗಾರಿಕೋದ್ಯಮಿ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು, ತಂದೆಯ ಕುಟುಂಬದ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಅಧಿಕೃತವಾಗಿ ವಿಭಜನಾ ನೋಟಿಸ್ ಜಾರಿಗೊಳಿಸಿದ್ದಾರೆ.
ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಪುತ್ರಿಯರಿಗೂ ಪುತ್ರರಷ್ಟೇ ಸಮಾನ ಹಕ್ಕಿದೆ ಎಂಬ ಕಾನೂನು ಅಂಶವನ್ನು ಮುಂದಿಟ್ಟಿರುವ ಲಕ್ಷ್ಮಿ, ದೇಶದ ಪ್ರಮುಖ ಉದ್ಯಮ ಕುಟುಂಬವೊಂದರ ಉತ್ತರಾಧಿಕಾರ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿರುವುದು ಸದ್ಯ ಸಾಕಷ್ಟು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
ತಂದೆಗೆ ಕಳುಹಿಸಿರುವ ನೋಟಿಸ್‌ನಲ್ಲಿ, ಕುಟುಂಬದ ಮುಖ್ಯಸ್ಥರಾಗಿರುವ ವೇಣು ಶ್ರೀನಿವಾಸನ್ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿ, ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ಆಸ್ತಿ ವಿಭಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ. ಹಿಂದೂ ಉತ್ತರಾಧಿಕಾರ ಕಾಯ್ದೆ 1956ರ 2005ರ ತಿದ್ದುಪಡಿಯ ಸೆಕ್ಷನ್ 6 ಅನ್ನು ಅವರು ಉಲ್ಲೇಖಿಸಿದ್ದಾರೆ. ಈ ತಿದ್ದುಪಡಿಯ ಪ್ರಕಾರ, ಹಿಂದೂ ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರಿಯರಿಗೂ ಪುತ್ರರಷ್ಟೇ ಸಮಾನ ಹಕ್ಕು ಮತ್ತು ಹೊಣೆಗಾರಿಕೆ ಇದೆ ಎಂಬುದನ್ನು ಒತ್ತಿ ಹೇಳಲಾಗಿದೆ.
ಲಕ್ಷ್ಮಿ ಅವರ ಬೇಡಿಕೆಗೆ ತಾಯಿ ಮಲ್ಲಿಕಾ ಶ್ರೀನಿವಾಸನ್ ಕೂಡ ಬೆಂಬಲ ವ್ಯಕ್ತಪಡಿಸಿರುವುದು ಆಶ್ಚರ್ಯಕರ. ಕುಟುಂಬದ ಆಸ್ತಿಯಲ್ಲಿ ಪುತ್ರಿಗೂ ಸಮಾನ ಪಾಲು ದೊರೆಯಬೇಕು ಎಂಬುದು ಅವರ ವಾದವೂ ಆಗಿದೆ. ಆದರೆ, ವೇಣು ಶ್ರೀನಿವಾಸನ್ ಮತ್ತು ಅವರ ಪುತ್ರ ಸುದರ್ಶನ್ ಈಗಾಗಲೇ ಆಸ್ತಿ ಸಂಬಂಧಿತ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ, ಲಕ್ಷ್ಮಿ ಮತ್ತು ಮಲ್ಲಿಕಾ ಕುಟುಂಬದ ಆರ್ಥಿಕ ಆಸ್ತಿಗಳ ಸಮಗ್ರ ವಿಭಜನೆ ಇನ್ನೂ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಹಿಂದಿನ ವ್ಯವಸ್ಥೆಗಳು ಉದ್ಯಮಗಳ ನಿರ್ವಹಣಾ ನಿಯಂತ್ರಣ ಮತ್ತು ಕುಟುಂಬದ ಟ್ರೇಡ್‌ಮಾರ್ಕ್‌ಗಳ ಬಳಕೆಗೆ ಸಂಬಂಧಿಸಿದ್ದವೇ ಹೊರತು ಮೂಲ ಆಸ್ತಿಗಳ ಮಾಲೀಕತ್ವ ಹಾಗೂ ಹಂಚಿಕೆಯನ್ನು ಅಂತಿಮಗೊಳಿಸಿಲ್ಲ ಎಂಬುದು ಲಕ್ಷ್ಮಿ ಅವರ ವಾದವಾಗಿದೆ. ಈ ವಿವಾದದಲ್ಲಿ ಟಿವಿಎಸ್ ಹೋಲ್ಡಿಂಗ್ಸ್, ಟಿವಿಎಸ್ ಮೋಟಾರ್ ಕಂಪನಿ, ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಮತ್ತು ಸುಂದರಂ-ಕ್ಲೇಟನ್ ಸೇರಿದಂತೆ ಹಲವು ಉದ್ಯಮಗಳಲ್ಲಿನ ಕುಟುಂಬದ ಆಸ್ತಿ ಹಾಗೂ ಹಿತಾಸಕ್ತಿಗಳು ಸೇರಿವೆ ಎನ್ನಲಾಗಿದೆ.
ಇವುಗಳಲ್ಲಿ ಕೆಲವು ಆಸ್ತಿಗಳು ಕುಟುಂಬದ ಟ್ರಸ್ಟ್‌ಗಳು ಮತ್ತು ಕಂಪನಿಗಳ ಮೂಲಕ ನಿರ್ವಹಿಸಲ್ಪಡುತ್ತಿವೆ. ಅವುಗಳಲ್ಲಿ ವಿಎಸ್ ಟ್ರಸ್ಟ್ ಕೂಡ ಒಂದಾಗಿದೆ. ಟಿವಿಎಸ್ ಹೋಲ್ಡಿಂಗ್ಸ್‌ನ ವಾರ್ಷಿಕ ವರದಿಯ ಪ್ರಕಾರ, ಕಂಪನಿಯಲ್ಲಿ ಕುಟುಂಬ ಮತ್ತು ಪ್ರವರ್ತಕ ಸಮೂಹದ ಒಟ್ಟು ಪಾಲು ಶೇ.74.45ರಷ್ಟಿದೆ. ಈ ಪೈಕಿ ವಿಎಸ್ ಟ್ರಸ್ಟ್ ಮೂಲಕ ವೇಣು ಶ್ರೀನಿವಾಸನ್ ಅವರು ಶೇ.66.55ರಷ್ಟು ಪಾಲು ಹೊಂದಿದ್ದಾರೆ.
ಮತ್ತೊಂದೆಡೆ, ಟಿವಿಎಸ್ ಹೋಲ್ಡಿಂಗ್ಸ್ ಸಂಸ್ಥೆಯು ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಶೇ.56ರಷ್ಟು ಪಾಲು ಹೊಂದಿದೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಲಕ್ಷ್ಮಿ ವೇಣು, “ಪಿತೃಪ್ರಧಾನ ಮನೋಭಾವಕ್ಕೆ ಕಾನೂನಿನಲ್ಲಿ ಅಥವಾ ಪ್ರಗತಿಪರ ಭಾರತದಲ್ಲಿ ಸ್ಥಾನವಿಲ್ಲ” ಎಂದಿದ್ದಾರೆ,(ಏಜೆನ್ಸೀಸ್).