ದಳಪತಿ ವಿಜಯ್ ಕ್ಯಾಬಿನೆಟ್ ಪಟ್ಟಿ ರೆಡಿ! ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ? ಹೀಗಿದೆ ರಾಜಕೀಯ ಲೆಕ್ಕಾಚಾರ

ಟಿವಿಕೆ ನಾಯಕ ವಿಜಯ್​
ಟಿವಿಕೆ ನಾಯಕ ವಿಜಯ್​
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನಲ್ಲಿ ರಾಜಕೀಯ ಗೊಂದಲ ದೂರ
  • ಮ್ಯಾಜಿಕ್​ ನಂಬರ್​ ತೋರಿಸಲು ಪರದಾಡಿದ ವಿಜಯ್​ಗೆ ಸಣ್ಣ ಪಕ್ಷಗಳಿಂದಲೇ ಬೆಂಬಲ
  • ತಮಿಳುನಾಡಿನಲ್ಲಿ ತಮ್ಮ ಸರ್ಕಾರ ರಚಿಸಲು ದಳಪತಿ ರೆಡಿ
  • ವಿಜಯ್ ಸಚಿವ ಸಂಪುಟ ಪಟ್ಟಿ ಸಿದ್ಧ?
TVK Vijay: ಕಳೆದ ಐದು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಗೆ ಕಡೆಗೂ ಪೂರ್ಣವಿರಾಮ ಬಿದ್ದಿದೆ. ಹೊಸ ಸರ್ಕಾರ ರಚನೆಗೆ ರಾಜ್ಯಪಾಲರು ಮತ್ತು ವಿಜಯ್ ನಡುವಿನ ಚರ್ಚೆಗಳು ರಾಜ್ಯದಲ್ಲಿ ಭಾರೀ ಅಸಮಾಧಾನವನ್ನು ಸ್ಫೋಟಿಸಿತ್ತು. ಗವರ್ನರ್​ ಮಾತಿನಿಂದ ಕೆರಳಿದ್ದ ವಿಜಯ್​, ಈಗ ಪೂರ್ಣ ಬಹುಮತ ಸಾಬೀತುಪಡಿಸಲು ಮುಂದಾಗಿರುವುದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಬಹುಮತದೊಂದಿಗೆ ಬಂದರೆ ಮಾತ್ರ ಅವಕಾಶ ನೀಡುವುದಾಗಿ ರಾಜ್ಯಪಾಲರು ಎರಡನೇ ಬಾರಿಗೆ ಹೇಳಿದ ಬೆನ್ನಲ್ಲೇ ತಮಿಳುನಾಡು ರಾಜಕೀಯ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಯಿತು. ಬಹುತೇಕರು, ವಿಜಯ್​ಗೆ ಬಹುಮತ ಸಾಬೀತುಪಡಿಸುವುದು ಕಷ್ಟಸಾಧ್ಯ. ಇದು ಆಗದ ಕೆಲಸ ಎಂದೇ ಅಂದುಕೊಂಡಿದ್ದರು. ಆದರೀಗ, ಎಲ್ಲಾ ಸಣ್ಣ ಪಕ್ಷಗಳು ವಿಜಯ್ ಅವರನ್ನು ಬೆಂಬಲಿಸಲು ಬಂದಿರುವುದರಿಂದ ಟಿವಿಕೆ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿಯಾಗಿದೆ.
ಎಡ ಪಕ್ಷಗಳು ಮತ್ತು ವಿಸಿಕೆ ಪಕ್ಷಗಳು ವಿಜಯ್ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಕಾಂಗ್ರೆಸ್ ಈಗಾಗಲೇ ಘೋಷಿಸಿರುವ ಬೆಂಬಲದೊಂದಿಗೆ, ಬಲ 112ಕ್ಕೆ ತಲುಪಿದೆ. ಈಗ ಸಿಪಿಐ, ಸಿಪಿಎಂ ಮತ್ತು ವಿಸಿಕೆ ಬೆಂಬಲದೊಂದಿಗೆ, ಮ್ಯಾಜಿಕ್ ಫಿಗರ್ 118 ತಲುಪಿದೆ. ವಿಜಯ್ ರಾಜ್ಯಪಾಲ ಅರ್ಲೇಕರ್ ಅವರನ್ನು ಸಂಜೆ 6 ಗಂಟೆಗೆ ಭೇಟಿ ಮಾಡಿ, ಶೀಘ್ರದಲ್ಲೇ ಪಟ್ಟಿಯನ್ನು ಮಂಡಿಸಲಿದ್ದಾರೆ ಎಂದು ವರದಿಯಾಗಿದೆ.
ಸಂಪುಟ ಸ್ಥಾನಗಳನ್ನು ಅಂತಿಮ!
ಈಗ, ವಿಜಯ್ ಅವರ ಸಂಪುಟದಲ್ಲಿ ವಿಸಿಕೆಗೆ ಒಂದು ಸಚಿವ ಸ್ಥಾನ ಸಿಕ್ಕಿದೆ. ಎಡ ಪಕ್ಷಗಳಿಗೆ ಎರಡು ಸ್ಥಾನಗಳು ಅಂತಿಮಗೊಂಡಂತೆ ತೋರುತ್ತಿದೆ. ಅಲ್ಲದೆ, ಕಾಂಗ್ರೆಸ್ ಕೂಡ ಪ್ರಮುಖ ಹುದ್ದೆಗಳನ್ನು ಪಡೆಯಬಹುದು ಎಂಬ ವರದಿಗಳಿವೆ. ಸಂಪುಟ ರಚನೆಯ ಕುರಿತು ಚರ್ಚೆಗಳು ಬಹುತೇಕ ಮುಕ್ತಾಯಗೊಂಡಿವೆ ಎಂದು ಹೇಳಲಾಗಿದೆ. ಅಲ್ಲಿಗೆ, ಸೋಮವಾರ (ಮೇ.11) ವಿಜಯ್​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ವರದಿಗಳು ತಿಳಿಸಿವೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಟಿವಿಕೆ ಸರ್ಕಾರದಲ್ಲಿ ವಿಸಿಕೆಗೆ ಸಚಿವ ಸ್ಥಾನ ನೀಡಲಾಗುವುದು. ಎಡಪಂಥೀಯ ಪಕ್ಷಗಳಾದ ಸಿಪಿಐ ಮತ್ತು ಸಿಪಿಎಂಗೆ ತಲಾ ಒಂದು ಸಚಿವ ಸ್ಥಾನ ನೀಡುವ ಸಾಧ್ಯತೆಯೂ ಇದೆ. ಈ ಮಟ್ಟಿಗೆ ಮಿತ್ರಪಕ್ಷಗಳ ನಡುವೆ ತಿಳುವಳಿಕೆ ಮೂಡಿದೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಮೂರು ಪಕ್ಷಗಳು ವಿಧಾನಸಭೆಯಲ್ಲಿ ತಲಾ ಇಬ್ಬರು ಶಾಸಕರನ್ನು ಹೊಂದಿವೆ. ಡಿಎಂಕೆ ಮೈತ್ರಿಕೂಟದಲ್ಲಿರುವ ಈ ಪಕ್ಷಗಳು ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟಿವಿಕೆಯನ್ನು ಬೆಂಬಲಿಸಲು ನಿರ್ಧರಿಸಿವೆ.
ಇದಕ್ಕೆ ಸ್ಟಾಲಿನ್ ಸಹ ಮಿತ್ರಪಕ್ಷಗಳಿಗೆ ತಮ್ಮ ರಾಜಕೀಯ ಹಿತಾಸಕ್ತಿಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡಿದ್ದಾರೆ ಎಂದು ವರದಿಯಾಗಿದೆ. ಉನ್ನತ ಮಟ್ಟದ ಚರ್ಚೆಗಳ ನಂತರವೇ ಈ ಪಕ್ಷಗಳು ವಿಜಯ್‌ಗೆ ತಮ್ಮ ಬೆಂಬಲವನ್ನು ಘೋಷಿಸಿವೆ ಎಂದು ತೋರಿದೆ. ವಿಸಿಕೆ ಮುಖ್ಯಸ್ಥ ತಿರುಮಾವಲವನ್ ಸ್ವತಃ ಸಂಪುಟ ಸೇರುವ ಸಾಧ್ಯತೆಯಿದೆ ಎಂಬ ವರದಿಗಳಿವೆ.
ಮತ್ತೊಂದೆಡೆ, ಟಿವಿಕೆ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವು ಎರಡು ಸಚಿವ ಸ್ಥಾನಗಳನ್ನು ನಿರೀಕ್ಷಿಸುತ್ತಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಸರ್ಕಾರ ರಚನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಸಂಜೆ 6 ಗಂಟೆಯ ಬಳಿಕ ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾದ ಬಳಿಕ ಏನೆಲ್ಲ ನಡೆಯಲಿದೆ? ಪಟ್ಟಿಯಲ್ಲಿ ಯಾರಿಗೆ ಸ್ಥಾನ? ಸಿಎಂ ಪ್ರಮಾಣವಚನ ಯಾವಾಗ? ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net