ಸಿಎಂ ವಿಜಯ್ ಸರ್ಕಾರದ ಭವಿಷ್ಯ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿ!... ಟಿವಿಕೆ ಶಾಸಕನ ಅರ್ಜಿ ವಿಚಾರಣೆ ಮೇಲೆ ಎಲ್ಲರ ಕಣ್ಣು | Srinivasa Sethupathi

Srinivasa Sethupathi | ತಿರುಪ್ಪತ್ತೂರು ಕ್ಷೇತ್ರದ ಟಿವಿಕೆ ಶಾಸಕ ಸೀನಿವಾಸ ಸೇತುಪತಿ
Srinivasa Sethupathi | ತಿರುಪ್ಪತ್ತೂರು ಕ್ಷೇತ್ರದ ಟಿವಿಕೆ ಶಾಸಕ ಸೀನಿವಾಸ ಸೇತುಪತಿ
Published on
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ನೇತೃತ್ವದ ನೂತನ ಸರ್ಕಾರವು ಬಹುಮತವನ್ನು ಸಾಬೀತುಪಡಿಸಲು ಒಂದು ದಿನ ಬಾಕಿ ಇರುವಾಗಲೇ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿದ್ದು, ತಿರುಪ್ಪತ್ತೂರು ಕ್ಷೇತ್ರದ ಟಿವಿಕೆ ಶಾಸಕ ಸೀನಿವಾಸ ಸೇತುಪತಿ (Srinivasa Sethupathi) ವಿಧಾನಸಭೆ ಮತದಾನದಲ್ಲಿ ಭಾಗವಹಿಸದಂತೆ ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ನಿರ್ಬಂಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಶಿವಗಂಗಾ ಜಿಲ್ಲೆಯ ತಿರುಪತ್ತೂರು ಕ್ಷೇತ್ರದಲ್ಲಿ ಶ್ರೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಸೋತಿದ್ದ ಡಿಎಂಕೆ ಮಾಜಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕ್ಷೇತ್ರದ ಒಂದು ಅಂಚೆ ಮತಪತ್ರವನ್ನು ಅಧಿಕಾರಿಗಳು ತಪ್ಪಾಗಿ ಬೇರೆ ಕ್ಷೇತ್ರಕ್ಕೆ ವರ್ಗಾಯಿಸಿ, ಅದಾದ ಬಳಿಕ ಅದನ್ನು ತಿರಸ್ಕರಿಸಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದೆ. ಈ ಗೊಂದಲ ಬಗೆಹರಿಯುವವರೆಗೆ ಸೇತುಪತಿ ಶಾಸಕರಾಗಿ ಕಾರ್ಯನಿರ್ವಹಿಸದಂತೆ ತಡೆಯಬೇಕು ಎಂದು ಪೆರಿಯಕರುಪ್ಪನ್ ನ್ಯಾಯಾಲಯವನ್ನು ಕೋರಿದ್ದರು.

ಸುಪ್ರೀಂನಲ್ಲಿ ವಿಚಾರಣೆ

ವಿಜಯ್ ಸರ್ಕಾರಕ್ಕೆ ಈ ವಿಶ್ವಾಸ ಮತಯಾಚನೆಯು ಅತ್ಯಂತ ನಿರ್ಣಾಯಕವಾಗಿದ್ದು, ಇಂತಹ ಸಂದರ್ಭದಲ್ಲಿ ಶಾಸಕರೊಬ್ಬರು ಮತದಾನದಿಂದ ಹೊರಗುಳಿಯುವುದು ಸರ್ಕಾರದ ಲೆಕ್ಕಾಚಾರಗಳ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ, ಹೈಕೋರ್ಟ್ ಆದೇಶಕ್ಕೆ ತಡೆ ಕೋರಿ ಸೇತುಪತಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬುಧವಾರ ನಡೆಯಲಿರುವ ಈ ವಿಚಾರಣೆಯು ವಿಜಯ್ ಸರ್ಕಾರದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿಯಾಗಿದೆ.
ಚುನಾವಣಾ ಆಯೋಗವು ಮತ ಎಣಿಕೆ ಮುಗಿದ ಮೇಲೆ ಇಂತಹ ದೂರುಗಳಿಗೆ ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ವಾದಿಸಿದರೂ, ಅರ್ಜಿದಾರರು ಸಲ್ಲಿಸಿದ ಪುರಾವೆಗಳನ್ನು ಗಮನಿಸಿದ ಹೈಕೋರ್ಟ್ ಮಧ್ಯಂತರ ನಿಷೇಧಾಜ್ಞೆ ವಿಧಿಸಿದೆ. ಅಲ್ಲದೆ, ಎಲ್ಲಾ ಅಂಚೆ ಮತಗಳನ್ನು ಮತ್ತು ಚುನಾವಣೆಯ ವಿಡಿಯೋ ತುಣುಕುಗಳನ್ನು ಸುರಕ್ಷಿತವಾಗಿಡಲು ಆದೇಶಿಸಿದೆ.

ವಿಧಾನಸಭಾ ಸ್ಪೀಕರ್ ಆಗಿ ಟಿವಿಕೆ ಶಾಸಕ ಜೆಸಿಡಿ ಪ್ರಭಾಕರ್​​ ಆಯ್ಕೆ

ಮತ್ತೊಂದೆಡೆ, ಸದನದಲ್ಲಿ ಟಿವಿಕೆ ಶಾಸಕ ಜೆಸಿಡಿ ಪ್ರಭಾಕರ್​​ರನ್ನು ವಿಧಾನಸಭಾ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸೋಮವಾರವಷ್ಟೇ ಮುಖ್ಯಮಂತ್ರಿ ವಿಜಯ್ ಸಮ್ಮುಖದಲ್ಲಿ ಪ್ರಭಾಕರ್ ನಾಮಪತ್ರ ಸಲ್ಲಿಸಿದ್ದರು. 2026ರ ಚುನಾವಣೆಯಲ್ಲಿ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಡಿಎಂಕೆ ಅಭ್ಯರ್ಥಿ ಎಜ್ಲಿಯನ್ ನಾಗನಾಥನ್ ವಿರುದ್ಧ ಗೆಲುವು ಸಾಧಿಸಿದ್ದರು. ಟಿವಿಕೆ ನೇತೃತ್ವದ ನೂತನ ಸರ್ಕಾರದ ಭಾಗವಾಗಿ ಈಗಾಗಲೇ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು, ಇದೀಗ ಶ್ರೀನಿವಾಸ ಸೇತುಪತಿ ಅವರಿಗೆ ಹೇರಲಾಗಿರುವ ನಿಷೇಧವು ವಿಶ್ವಾಸಮತ ಯಾಚನೆಯ ವೇಳೆ ಯಾವ ರೀತಿಯ ತಿರುವು ಪಡೆಯಲಿದೆ ಕಾದು ನೋಡಬೇಕು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net