ವಿಜಯ್ ಸಂಪುಟ ವಿಸ್ತರಣೆ... 6 ದಶಕಗಳ ಬಳಿಕ ಸರ್ಕಾರ ಸೇರಿದ ಕಾಂಗ್ರೆಸ್; ನೂತನ ಸಚಿವರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ | Vijay Cabinet Expansion

Vijay Cabinet Expansion | ವಿಜಯ್ ಸಂಪುಟ ವಿಸ್ತರಣೆ
Vijay Cabinet Expansion | ವಿಜಯ್ ಸಂಪುಟ ವಿಸ್ತರಣೆ
Published on
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಇಂದು (ಮೇ 21) ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲು ಮುಂದಾಗಿದ್ದು, ಇಬ್ಬರು ಕಾಂಗ್ರೆಸ್ ಶಾಸಕರು ಸೇರಿದಂತೆ ಒಟ್ಟು 23 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಮುಂಜಾನೆ 10 ಗಂಟೆಯಿಂದ ರಾಜಭವನದಲ್ಲಿ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಹೊಸ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸುತ್ತಿದ್ದಾರೆ.
ವಿಜಯ್​ ಸಂಪುಟಕ್ಕೆ ಕಾಂಗ್ರೆಸ್ ಶಾಸಕರುಗಳಾದ ಎಸ್. ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಸೇರ್ಪಡೆಗೊಳ್ಳಲು ಅಣಿಯಾಗಿದ್ದು, ಇವರ ಸೇರ್ಪಡೆಯೊಂದಿಗೆ, 1967ರ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವು ತಮಿಳುನಾಡು ಸರ್ಕಾರದಲ್ಲಿ ಅಧಿಕೃತವಾಗಿ ಭಾಗಿಯಾಗುತ್ತಿದೆ.
ತಮಿಳುನಾಡು ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಎರಡು ಪ್ರಮುಖ ಮಿತ್ರಪಕ್ಷಗಳಾದ ಐಯುಎಂಎಲ್ (IUML) ಮತ್ತು ವಿಸಿಕೆ (VCK) ಸದ್ಯಕ್ಕೆ ಭಾಗವಹಿಸುತ್ತಿಲ್ಲ. ಆಡಳಿತಾರೂಢ ಟಿವಿಕೆ (TVK) ಸರ್ಕಾರದ ಸಂಖ್ಯಾಬಲದ ದೃಷ್ಟಿಯಿಂದ ತಲಾ ಇಬ್ಬರು ಶಾಸಕರನ್ನು ಹೊಂದಿರುವ ಈ ಎರಡೂ ಪಕ್ಷಗಳು ಅತ್ಯಂತ ನಿರ್ಣಾಯಕವಾಗಿವೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಐಯುಎಂಎಲ್ ಮತ್ತು ವಿಸಿಕೆ ಎರಡೂ ಪಕ್ಷಗಳಿಗೂ ತಲಾ ಒಂದು ಸಂಪುಟ ಸ್ಥಾನವನ್ನು ನೀಡಲಾಗಿದೆ. ಆದರೆ, ಈ ಪಕ್ಷಗಳು ತಮ್ಮ ಸಚಿವ ಅಭ್ಯರ್ಥಿಗಳನ್ನು ಇನ್ನೂ ಅಧಿಕೃತವಾಗಿ ಹೆಸರಿಸದ ಕಾರಣ, ಇವರನ್ನು ಮುಂದಿನ ಹಂತದಲ್ಲಿ ಸರ್ಕಾರಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಪಕ್ಷಗಳು ಸಂಪುಟ ಸೇರಬೇಕು ಎಂಬುದು ಟಿವಿಕೆ ನಾಯಕರ ಬಯಕೆಯಾಗಿದ್ದು, ಮುಖ್ಯಮಂತ್ರಿಯವರು ಸಹ ಇದೇ ಇಚ್ಛೆಯನ್ನು ಪುನರುಚ್ಚರಿಸಿದ್ದಾರೆ. ಮುಂಬರುವ ದಿನಗಳಲ್ಲಿ ನಾವು ಈ ಮೈತ್ರಿಕೂಟದಿಂದ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತೇವೆ. ಅದರಲ್ಲೂ ವಿಸಿಕೆ ಮುಖ್ಯಸ್ಥ ಥೋಲ್ ತಿರುಮಾವಲನನ್ ಸಂಪುಟ ಸೇರಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಮಿಳುನಾಡು ಲೋಕೋಪಯೋಗಿ ಮತ್ತು ಕ್ರೀಡಾ ಸಚಿವ ಆಧವ್ ಅರ್ಜುನ ಮಂಗಳವಾರ ತಿಳಿಸಿದ್ದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರ ಸಂಪೂರ್ಣ ಪಟ್ಟಿ

  1. ಶ್ರೀನಾಥ್
  2. ಕಮಲಿ ಎಸ್.
  3. ಸಿ. ವಿಜಯಲಕ್ಷ್ಮಿ
  4. ಆರ್.ವಿ. ರಂಜಿತ್‌ಕುಮಾರ್
  5. ವಿನೋದ್
  6. ರಾಜೀವ್
  7. ಬಿ. ರಾಜ್‌ಕುಮಾರ್
  8. ವಿ. ಗಾಂಧಿರಾಜ್
  9. ಮಥನ್ ರಾಜ ಪಿ.
  10. ಜಗದೀಶ್ವರಿ ಕೆ.
  11. ರಾಜೇಶ್ ಕುಮಾರ್ ಎಸ್. (ಕಾಂಗ್ರೆಸ್)
  12. ಎಂ. ವಿಜಯ್ ಬಾಲಾಜಿ
  13. ಲೋಗೇಶ್ ತಮಿಳ್ ಸೆಲ್ವನ್ ಡಿ.
  14. ವಿಜಯ್ ತಮಿಳನ್ ಪಾರ್ಥಿಬನ್ ಎ.
  15. ರಮೇಶ್
  16. ಪಿ. ವಿಶ್ವನಾಥನ್ (ಕಾಂಗ್ರೆಸ್)
  17. ಕುಮಾರ್ ಆರ್.
  18. ತೆನ್ನರಸು ಕೆ.
  19. ವಿ. ಸಂಪತ್ ಕುಮಾರ್
  20. ಮೊಹಮ್ಮದ್ ಫರ್ವಾಸ್ ಜೆ.
  21. ಡಿ. ಶರತ್ ಕುಮಾರ್
  22. ಎನ್. ಮೇರಿ ವಿಲ್ಸನ್
  23. ವಿಘ್ನೇಶ್ ಕೆ.
ಸಿಎಂ ವಿಜಯ್ ನೇತೃತ್ವದ ನೂತನ ಸರ್ಕಾರಕ್ಕೆ ಕಾಂಗ್ರೆಸ್‌ನ ಇಬ್ಬರು ಶಾಸಕರುಗಳಾದ ಎಸ್. ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಅವರು ಸೇರ್ಪಡೆಗೊಳ್ಳುತ್ತಿದ್ದಾರೆ. ಇದರೊಂದಿಗೆ, ಸುಮಾರು ಆರು ದಶಕಗಳ (59 ವರ್ಷಗಳ) ಸುದೀರ್ಘ ಅವಧಿಯ ಬಳಿಕ ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ಮತ್ತೊಮ್ಮೆ ಸರ್ಕಾರದ ಭಾಗವಾಗುತ್ತಿದೆ.

ರಾಜ್ಯದಲ್ಲಿ ಕೊನೆಯ ಬಾರಿಗೆ ಎಂ. ಭಕ್ತವತ್ಸಲಂ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು. ಅವರು ಮಾರ್ಚ್ 1967 ರಲ್ಲಿ ತಮ್ಮ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸಿದ್ದರು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಸಿ.ಎನ್. ಅಣ್ಣಾದೊರೈ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರ ಹಿಡಿಯಿತು. ಅಂದಿನಿಂದ ಇಂದಿನವರೆಗೂ, ಕಾಂಗ್ರೆಸ್ ರಾಜ್ಯದ ಯಾವುದೇ ಸರ್ಕಾರದ ಭಾಗವಾಗಿರಲಿಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net