ಮುಂದಿಟ್ಟಿರುವ ಪ್ರಸ್ತಾಪಕ್ಕೆ ಒಪ್ಪಿಕೊಳ್ಳಬೇಕು! ಇಲ್ಲದಿದ್ರೆ... ಯುಕ್ರೇನಿಯನ್​ ಅಧ್ಯಕ್ಷನಿಗೆ ಟ್ರಂಪ್ ಎಚ್ಚರಿಕೆ

ಡೊನಾಲ್ಡ್​ ಟ್ರಂಪ್​
ಡೊನಾಲ್ಡ್​ ಟ್ರಂಪ್​
Published on

ಪ್ರಮುಖ ಮುಖ್ಯಾಂಶಗಳು

  • ಯುಕ್ರೇನ್​-ರಷ್ಯಾ ಯುದ್ಧಕ್ಕೆ ಅಂತ್ಯವಾಡಲು ಟ್ರಂಪ್​ ನಿರ್ಧಾರ
  • 28 ವಿಷಯಗಳನ್ನು ಒಳಗೊಂಡಿರುವ ಪ್ಲ್ಯಾನ್​ಗೆ ಝೆಲೆನ್ಸ್ಕಿ ನಕಾರ
  • ಯುಕ್ರೇನಿಯನ್ ಅಧ್ಯಕ್ಷನಿಗೆ ಟ್ರಂಪ್ ಎಚ್ಚರಿಕೆ ಸಂದೇಶ
ಅಮೆರಿಕ: ದೀರ್ಘಕಾಲದಿಂದ ನಡೆಯುತ್ತಿರುವ ಯುಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಅಂತ್ಯವಾಡಲು ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಮುಂದಾಗಿದ್ದಾರೆ.
ಹೊಸ 28 ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಪ್ಲ್ಯಾನ್​ ಅನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಮುಂದಿಟ್ಟಿರುವ ಟ್ರಂಪ್​, ಮುಂದಿನ ಗುರುವಾರದೊಳಗೆ ಒಪ್ಪಿಗೆ ಸೂಚಿಸಿದರೆ ಒಳಿತು. ಇಲ್ಲವೇ, ಭಾರವಾದ ಹೃದಯದಿಂದ ಯುದ್ಧಭೂಮಿಯಲ್ಲಿ ನೀವು ಹೋರಾಡಬೇಕಿದೆ ಎಂದು ಎಚ್ಚರಿಸಿದ್ದಾರೆ.
ರಷ್ಯಾ ವಿರುದ್ಧದ ಯುದ್ಧದಲ್ಲಿ ಮುಂದುವರಿಯಲು ನಿಮ್ಮ ಬಳಿ ಯಾವುದೇ "ಕಾರ್ಡ್‌ಗಳು ಇಲ್ಲ" ಮತ್ತು ಶೀಘ್ರವೇ ಇತ್ಯರ್ಥಕ್ಕೆ ಮುಂದಾಗಬೇಕು ಎಂಬ ತಮ್ಮ ವಾದವನ್ನು ಪುನರುಚ್ಚರಿಸಿದ್ದಾರೆ. ಈ ಖಡಕ್​ ನುಡಿ ಮೂಲಕ ಪುಟಿನ್​ ರಾಷ್ಟ್ರ ಪರ ಬ್ಯಾಟ್​ ಬೀಸಿರುವ ಟ್ರಂಪ್​, ಉಭಯ ದೇಶಗಳ ನಡುವಿನ ಸಮರಕ್ಕೆ ಪುಲ್​ ಸ್ಟಾಪ್​ ಇಡುವುದರ ಜತೆಗೆ ಝೆಲೆನ್ಸ್ಕಿಗೆ ಎಚ್ಚರಿಕೆಯ ಸಂದೇಶ ನೀಡಿರುವುದು ಕೊಂಚ ಗೊಂದಲಮಯವಾಗಿದೆ.
ಈ ಸಂದರ್ಭದಲ್ಲಿ, ಟ್ರಂಪ್ ಇತ್ತೀಚೆಗೆ ಶ್ವೇತಭವನದಲ್ಲಿ ಸುದ್ದಿಗಾರರಿಗೆ ರಷ್ಯಾ-ಉಕ್ರೇನ್ ಸಮಸ್ಯೆಗೆ ಇದು ಅವರ ಅಂತಿಮ ಪ್ರಸ್ತಾಪವಲ್ಲ ಎಂದು ಹೇಳಿದ್ದರು. ಆದರೀಗ, ನವೆಂಬರ್ 27ರೊಳಗೆ ಯುದ್ಧ ನಿಲ್ಲಿಸುವ ಕುರಿತು ಹೊಸದಾಗಿ ನೀಡಿರುವ ಅಂಶಗಳನ್ನು ಗಮನಿಸಿ, ಅದಕ್ಕೆ ಒಪ್ಪಿಗೆ ಸೂಚಿಸುವುದು ಸೂಕ್ತ ಎಂದು ಯುಕ್ರೇನ್ ಮೇಲೆ ಟ್ರಂಪ್​ ತೀವ್ರ ಒತ್ತಡ ಹೇರಿದ್ದಾರೆ.

ಯುಎಸ್​ ಪ್ರಸ್ತಾಪ ರಷ್ಯಾದಿಂದ ಬಂದಿದೆ!

ಈ ಮಧ್ಯೆ, ರಷ್ಯಾ-ಯುಕ್ರೇನ್ ಯುದ್ಧ ಅಂತ್ಯ ಯೋಜನೆಯ ಬಗ್ಗೆ ಮತ್ತೊಂದು ಗಂಭೀರ ಆರೋಪ ಹೊರಬಿದ್ದಿದೆ. ಈ 28 ಅಂಶಗಳ ದಾಖಲೆ ವಾಸ್ತವವಾಗಿ ರಷ್ಯಾದಿಂದ ಬಂದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸೆನೆಟರ್‌ಗಳಿಗೆ ಹೇಳಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಮೈಕ್ ರೌಂಡ್ಸ್ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ವಿದೇಶಾಂಗ ಇಲಾಖೆ ಈ ವಿಚಾರಕ್ಕೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ. ಇದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net