

ವಾಷಿಂಗ್ಟನ್: ರಷ್ಯಾ ದೇಶದಿಂದ ಕಚ್ಚಾತೈಲ ಮತ್ತು ಗ್ಯಾಸ್ ಖರೀದಿಸುವ ದೇಶಗಳಿಗೆ 100% ಸುಂಕ ವಿಧಿಸುವ ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026 ಮಸೂದೆಯಲ್ಲಿ ಪ್ರಮುಖ ವ್ಯಾಪಾರ, ಸುಂಕ ನಿರ್ಬಂಧ ನಿಬಂಧನೆಗಳನ್ನು ಕೈಬಿಟ್ಟು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ.
ಲಿಂಡ್ಸೆ ಒ. ಗ್ರಹಾಂ ಕಾಯ್ದೆ ಜಾರಿಗೆ ಬರುವ ಕೆಲವೇ ದಿನಗಳ ಮೊದಲು ಕಾನೂನಿನಲ್ಲಿರುವ ನಿಬಂಧನೆಗಳನ್ನು ಮಾರ್ಪಡಿಸಿದ್ದು, ರಷ್ಯಾದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುವ ಭಾರತ ಮತ್ತು ಚೀನಾದಂತಹ ದೇಶಗಳಿಗೆ ಇದು ಆರ್ಥಿಕವಾಗಿ ಲಾಭ ನೀಡಲು ಸಹಕಾರಿಯಾಗಲಿದೆ.
ಟ್ರಂಪ್ ಹೊರಡಿಸಿದ ಆದೇಶದಲ್ಲಿ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ವಿನಾಯಿತಿಯನ್ನು ನೀಡಲಾಗಿದೆ. ಗ್ರಹಾಂ ಕಾಯ್ದೆ ಅಡಿಯಲ್ಲಿ ವಿಧಿಸಲಾದ ಇಂತಹ ನಿರ್ಬಂಧಗಳು, ನಿಯಂತ್ರಣಗಳು ಹಾಗೂ ಸುಂಕಗಳ ಅನ್ವಯವನ್ನು ನಾನು ಇಲ್ಲಿ ರದ್ದುಗೊಳಿಸುತ್ತಿದ್ದೇನೆ. ಈ ಸಮಯದಲ್ಲಿ ಇಂತಹ ವಿನಾಯಿತಿಯನ್ನು ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ ಎಂದು ನಾನು ಕಾಂಗ್ರೆಸ್ಗೆ ಪ್ರಮಾಣಪತ್ರವನ್ನು ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನೂ ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗೂ ಮುನ್ನ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುವ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ವಿನಾಯಿತಿ ನೀಡಲಾಗಿದೆ ಎನ್ನಲಾಗಿದೆ.
ಕಳೆದ ತಿಂಗಳ ಸೆಪ್ಟೆಂಬರ್ ಕಾನೂನಾಗಿ ಜಾರಿಗೆ ತಂದ ಈ ಶಾಸನವನ್ನು, ಉಕ್ರೇನ್ ವಿರುದ್ಧ ಯುದ್ಧ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸುವ ಉದ್ದೇಶದಿಂದ ರೂಪಿಸಲಾಯಿತು. ಈ ಕಾಯ್ದೆಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ರಷ್ಯಾದ ತೈಲ ಮತ್ತು ಗ್ಯಾಸ್ ಖರೀದಿಸುವ ಅಗ್ರ ಐದು ಆಮದುದಾರ ದೇಶಗಳ ಸರಕುಗಳ ಮೇಲೆ 100 ಪ್ರತಿಶತ ಸುಂಕವನ್ನು ವಿಧಿಸಲು ಅವಕಾಶ ನೀಡಿತ್ತು (ಏಜೆನ್ಸೀಸ್).