ಬಂಗಾಳದ ಬಿಜೆಪಿ ದಿಗ್ವಿಜಯ ಐತಿಹಾಸಿಕ....ಮೋದಿಗೆ ಟ್ರಂಪ್ ಸಲಾಂ!; ಅಮೆರಿಕಾ ಅಧ್ಯಕ್ಷ​ರು ಹೇಳಿದ ಆ 'ಲಕ್ಕಿ' ಮ್ಯಾಟರ್ ಇಲ್ಲಿದೆ! | West Bengal Elections

West Bengal Elections | ಬಂಗಾಳ ಗೆದ್ದ ಪ್ರಧಾನಿಗೆ ಡೊನಾಲ್ಡ್ ಟ್ರಂಪ್ ಸಲಾಂ
West Bengal Elections | ಬಂಗಾಳ ಗೆದ್ದ ಪ್ರಧಾನಿಗೆ ಡೊನಾಲ್ಡ್ ಟ್ರಂಪ್ ಸಲಾಂ
Published on
West Bengal Elections: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷವು ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಗೆಲುವನ್ನು ಐತಿಹಾಸಿಕ ಮತ್ತು ನಿರ್ಣಾಯಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿರುವುದಾಗಿ ವರದಿಯಾಗಿದೆ.
ಶ್ವೇತಭವನದ ವಕ್ತಾರರು ಈ ಸಂದೇಶವನ್ನು ಹಂಚಿಕೊಂಡಿದ್ದು, ಬಂಗಾಳದ ಚುನಾವಣಾ ಫಲಿತಾಂಶವು ಪ್ರಜಾಪ್ರಭುತ್ವದ ವಿಜಯವಾಗಿದೆ ಎಂದು ಬಣ್ಣಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಇಂತಹ ಮೆಚ್ಚುಗೆ ವ್ಯಕ್ತವಾಗಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಸೋಮವಾರ (ಮೇ.4) ಹೊರಬಿದ್ದ ಫಲಿತಾಂಶದಲ್ಲಿ ಬಿಜೆಪಿ 207 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮಮತಾ ಬ್ಯಾನರ್ಜಿಯ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿದೆ. ಕಳೆದ ದಶಕಗಳಿಂದ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ ಕೇವಲ 80 ಸ್ಥಾನಗಳಿಗೆ ಕುಸಿದು ಮುಖಭಂಗ ಅನುಭವಿಸಿದೆ. ಈ ಚುನಾವಣೆಯ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಬಿಜೆಪಿಯ ಸುವೇಂದು ಅಧಿಕಾರಿ ಪಡೆದ ಅಮೋಘ ಜಯ. ರಾಜ್ಯದ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳಾದ ಭವಾನಿಪುರ ಮತ್ತು ನಂದಿಗ್ರಾಮ್ ಎರಡರಲ್ಲೂ ಗೆಲುವು ಸಾಧಿಸುವ ಮೂಲಕ ದೊಡ್ಡ ನಾಯಕನಾಗಿ ಹೊರಹೊಮ್ಮಿರುವ ಅಧಿಕಾರಿ, ಭವಾನಿಪುರದಲ್ಲಿ ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೇ 15,105 ಮತಗಳ ಅಂತರದಿಂದ ಸೋಲಿಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬಂಗಾಳದ ಕನಸ್ಸನ್ನು ನನಸು ಮಾಡುತ್ತೇವೆ ಎಂದ ಮೋದಿ..

ಬಂಗಾಳದಲ್ಲಿ ಕಮಲ ಅರಳಿರುವುದನ್ನು ಸಂಭ್ರಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಜನರ ಶಕ್ತಿ ಮೇಲುಗೈ ಸಾಧಿಸಿದೆ ಮತ್ತು ಅಭಿವೃದ್ಧಿ ರಾಜಕಾರಣಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, 2026ರ ಈ ಚುನಾವಣೆಯು ಭಾರತದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ಮತ್ತು ಘನತೆಯನ್ನು ಒದಗಿಸುವ ಉತ್ತಮ ಆಡಳಿತದ ಭರವಸೆಯನ್ನು ನೀಡಿದ ಮೋದಿ, ಈ ಗೆಲುವು ತಲೆಮಾರುಗಳಿಂದ ಶ್ರಮಿಸಿದ ಪಕ್ಷದ ಕಾರ್ಯಕರ್ತರ ತ್ಯಾಗದ ಫಲವಾಗಿದೆ ಎಂದು ಬಣ್ಣಿಸಿದ್ದಾರೆ. ಬಂಗಾಳದ ಜನರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ರಾಜೀನಾಮೆ ನೀಡಲ್ಲ ಎಂದ ದೀದಿ..

ಈ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ನಿಕಟಪೂರ್ವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಚುನಾವಣಾ ಆಯೋಗದ ಮೂಲಕ ಬಿಜೆಪಿ ನಮ್ಮನ್ನು ಅಧಿಕೃತವಾಗಿ ಸೋಲಿಸಿರಬಹುದು, ಆದರೆ ನೈತಿಕವಾಗಿ ನಾವೇ ಗೆದ್ದಿದ್ದೇವೆ ಎಂದು ವಾದಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೀದಿ, ತಾವು ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ತಮಗೆ ಯಾವುದೇ ಅಧಿಕಾರದ ಕುರ್ಚಿ ಇಲ್ಲದಿದ್ದರೂ ಸಾಮಾನ್ಯ ವ್ಯಕ್ತಿಯಾಗಿ ಹೋರಾಟ ಮುಂದುವರಿಸುವುದಾಗಿ ಮತ್ತು ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದಾಗಿ ತಿಳಿಸಿದ್ದಾರೆ. ದೀದಿಯ ಈ ನಿಲುವು ರಾಜ್ಯದಲ್ಲಿ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net