ಧೋನಿ-ರೋಹಿತ್ ಸಮ್ಮುಖದಲ್ಲಿ ಟ್ರೋಫಿ ಅನಾವರಣ; ಕೊನೆಗೂ ಮೌನ ಮುರಿದ ಅಭಿ ಬ್ಯಾಟ್​ನಿಂದ ಬಂತು ನೂತನ ದಾಖಲೆ!​ | T20 WorldCup Final

T20 WorldCup Final | ಧೋನಿ-ರೋಹಿತ್ ಸಮ್ಮುಖದಲ್ಲಿ ಟ್ರೋಫಿ ಅನಾವರಣ
T20 WorldCup Final | ಧೋನಿ-ರೋಹಿತ್ ಸಮ್ಮುಖದಲ್ಲಿ ಟ್ರೋಫಿ ಅನಾವರಣ
Published on
ಅಹಮದಾಬಾದ್: ಟಿ20 ವಿಶ್ವಕಪ್ ಫೈನಲ್ (T20 WorldCup Final) ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯ ಆರಂಭಕ್ಕೂ ಮುನ್ನ ಭಾರತದ ಯಶಸ್ವಿ ನಾಯಕರುಗಳಾದ ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ, ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ಹೊತ್ತು ತರುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು.

ಧೋನಿ-ರೋಹಿತ್ ಸಮ್ಮುಖದಲ್ಲಿ ಟ್ರೋಫಿ ಮೆರವಣಿಗೆ

2007ರ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಎಂ.ಎಸ್. ಧೋನಿ ಮತ್ತು 2024ರ ಚಾಂಪಿಯನ್​ ನಾಯಕ ರೋಹಿತ್ ಶರ್ಮಾ ಐಸಿಸಿ ಅಧ್ಯಕ್ಷ ಜಯ್ ಷಾ ಅವರೊಂದಿಗೆ ಟ್ರೋಫಿಯನ್ನು ಕ್ರೀಡಾಂಗಣಕ್ಕೆ ತಂದರು. ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಈ ಇಬ್ಬರು ದಂತಕಥೆಗಳ ಉಪಸ್ಥಿತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು, ಧೋನಿ 2007ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ಇತಿಹಾಸ ಬರೆದಿದ್ದರೆ, ರೋಹಿತ್ ಶರ್ಮಾ ಕಳೆದ ಬಾರಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಟೀಮ್​ ಇಂಡಿಯಾಗೆ ಟ್ರೋಪಿ ತಂದು ಕೊಟ್ಟಿದ್ದರು.

ಟಾಸ್ ಗೆದ್ದ ಕಿವೀಸ್ ಫೀಲ್ಡಿಂಗ್ ಆಯ್ಕೆ

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಸ್ಯಾಂಟ್ನರ್​ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ನಿರ್ಧಾರದ ಬಗ್ಗೆ ಮಾತನಾಡಿದ ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಮೊದಲು ಬ್ಯಾಟಿಂಗ್ ಮಾಡಲು ನಾವು ಸಂತೋಷಪಡುತ್ತೇವೆ ಎಂದರು.
ಇದು ಕೆಂಪು ಮಣ್ಣಿನ ಪಿಚ್ ಆಗಿರುವುದರಿಂದ ದೊಡ್ಡ ಮೊತ್ತವನ್ನು ಕಲೆಹಾಕುವ ಗುರಿ ಇಟ್ಟುಕೊಂಡಿದ್ದೇವೆ, ವಿಶ್ವಕಪ್ ಫೈನಲ್‌ನಂತಹ ದೊಡ್ಡ ಪಂದ್ಯಗಳಲ್ಲಿ ಮೊದಲು ರನ್ ಗಳಿಸಿ ಅದನ್ನು ರಕ್ಷಿಸಿಕೊಳ್ಳುವುದು ಯಾವಾಗಲೂ ಉತ್ತಮ ತಂತ್ರ ಎಂದು ಸೂರ್ಯಕುಮಾರ್ ಆತ್ಮವಿಶ್ವಾಸದ ನುಡಿಗಳನ್ನಾಡಿದರು.

ಭಾರತದ ಭರ್ಜರಿ ಆರಂಭ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ, ಕಿವೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದು, 10 ಓವರ್​ಗಳಲ್ಲಿ ಒಂದು ವಿಕೆಟ್​ ಕಳೆದುಕೊಂಡು 127 ರನ್​ ಗಳಿಸಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗುವ ಮೂಲಕ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ನೂತನ ದಾಖಲೆ ಬರೆದಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net