Trojan Horse | ಕೇರಳದ ನಾಯಕರ ನಡುವೆ ಟ್ರೋಜನ್ ಹಾರ್ಸ್ ಸಮರ; ಅಷ್ಟಕ್ಕೂ ಏನಿದು ವಿವಾದ..?

Trojan Horse | ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವೇಣುಗೋಪಾಲ್ ಆರೋಪ
Trojan Horse | ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವೇಣುಗೋಪಾಲ್ ಆರೋಪ
Published on
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸರ್ಕಾರದ ಟ್ರೋಜನ್ ಹಾರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.
ಆಲಪ್ಪುಳ ಲೋಕಸಭಾ ಕ್ಷೇತ್ರದ ಸಂಸದರು ಆಗಿರುವ ವೇಣುಗೋಪಾಲ್ ಅವರನ್ನು ಬಿಜೆಪಿಯು ಹಳೆಯ ಪಕ್ಷವನ್ನು ನಾಶಮಾಡಲು ನಿಯೋಜಿಸಿರುವ ಟ್ರೋಜನ್ ಹಾರ್ಸ್ ಎಂದು ಸಚಿವ ವಿ. ಶಿವನ್‌ಕುಟ್ಟಿ ಕರೆದ ಒಂದು ದಿನದ ಬಳಿಕ, ಕಾಂಗ್ರೆಸ್​ ನಾಯಕರಿಂದ ಈ ಹೇಳಿಕೆ ಹೊರಬಿದ್ದಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ವೇಣುಗೋಪಾಲ್, ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ಕೇಂದ್ರ ಬಿಜೆಪಿ ಸರ್ಕಾರದ ಟ್ರೋಜನ್ ಹಾರ್ಸ್, ಇದು ರಾಜ್ಯದ ಪ್ರತಿಯೊಂದು ಮಗುವಿಗು ತಿಳಿದಿದೆ, ಪ್ರಧಾನಿ ನರೇಂದ್ರ ಮೋದಿ ಯೋಚಿಸುತ್ತಿರುವುದನ್ನು ಕಾರ್ಯಗತಗೊಳಿಸಲು ಕೇರಳದ ಆಡಳಿತ ಪಕ್ಷ ಅನೇಕ ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನ ಮಂತ್ರಿ ಶ್ರೀ ಯೋಜನೆ ಮತ್ತು ಹೊಸ ಕಾರ್ಮಿಕ ಸಂಹಿತೆಗಳ ವಿಷಯದಲ್ಲಿ ಇದನ್ನು ನಾವು ಗಮನಿಸಿದ್ದು, ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೊದಲೇ, ಕಾರ್ಮಿಕ ವರ್ಗದ ಪಕ್ಷ ಎಂದು ಹೇಳುವ ಇಲ್ಲಿನ ಸರ್ಕಾರವು ಅದಕ್ಕೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ರೂಪಿಸಿತ್ತು, ಇದರ ಹಿಂದಿನ ನೈಜ ಉದ್ದೇಶವೇನು ಎನ್ನುವುದನ್ನು ಸಿಪಿಐ(ಎಂ) ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.
ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಕರಡು ನಿಯಮಗಳ ವಿಷಯದ ಬಗ್ಗೆ ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ವೇಣುಗೋಪಾಲ್, ಅವರಿಗೆ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲವೇ? ಎಂದರು.

ಸಚಿವ ವಿ. ಶಿವನ್‌ಕುಟ್ಟಿ ಆರೋಪ...

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ, ಚುನಾವಣೆ ನಡೆಯುವ ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ವೇಣುಗೋಪಾಲ್​ ತಪ್ಪು ಸಲಹೆ ನೀಡುವ ಮೂಲಕ ದಾರಿತಪ್ಪಿಸುತ್ತಿದ್ದಾರೆ ಎಂದು ಸಚಿವ ಶಿವನ್‌ಕುಟ್ಟಿ ಆರೋಪಿಸಿದ ಒಂದು ದಿನದ ಬಳಿಕ ಕಾಂಗ್ರೆಸ್​ ಪ್ರದಾನ ಕಾರ್ಯದರ್ಶಿಗಳಿಂದ ಈ ಹೇಳಿಕೆಗಳು ಬಂದಿವೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಂತೆ ಕಾಂಗ್ರೆಸ್ ನಾಯಕ ವೇಣುಗೋಪಾಲ್​ರನ್ನು ಯಾವುದೇ ಕೇಂದ್ರ ತನಿಖಾ ಸಂಸ್ಥೆ ಗುರಿಯಾಗಿಸಿಕೊಂಡು ದಾಳಿ ಮಾಡಿಲ್ಲ, ಆದ್ದರಿಂದ ಬಿಜೆಪಿ ಮತ್ತು ಕೆಸಿವಿ ನಡುವೆ ಸಕ್ರಿಯ ಆಂತರಿಕ ಸಂಬಂಧ ಇದೆ, ಕೇರಳದಲ್ಲಿ ಬಿಜೆಪಿಗೆ ನೆಲೆ ಒದಗಿಸುವುದು ವೇಣುಗೋಪಾಲ್ ಅವರ ಮುಂದಿನ ಗುರಿಯಾಗಿದ್ದು, ಈ ಮೂಲಕ ಅವರು ತಮ್ಮದೇ ಪಕ್ಷಕ್ಕೆ ಗುಂಡಿ ತೋಡುತ್ತಿದ್ದಾರೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ನಾಯಕ ಈ ನಡೆಯನ್ನು ಗಮನಿಸಬೇಕು ಎಂದು ಶಿವನ್‌ಕುಟ್ಟಿ ಆರೋಪಿಸಿದ್ದಾರೆ.

ಏನಿದು ಟ್ರೋಜನ್ ಹಾರ್ಸ್..?

ಟ್ರೋಜನ್ ಹಾರ್ಸ್ ಎಂದರೆ ಕಂಪ್ಯೂಟರ್‌ನಲ್ಲಿ ಮಾಲ್ವೇರ್ ಒಂದು ವಿಧ. ಇದು ಸಾಫ್ಟ್‌ವೇರ್ ಅಥವಾ ಫೈಲ್ ಎಂದು ತೋರಿಸಿಕೊಂಡು ಬಳಕೆದಾರನನ್ನು ಮೋಸಗೊಳಿಸಿ ಡೌನ್‌ಲೋಡ್ ಮಾಡಿಸಿಕೊಳ್ಳುತ್ತದೆ. ಒಮ್ಮೆ ಇದರೊಳಗೆ ಬಂದ ಕೂಡಲೇ ರಹಸ್ಯವಾಗಿ ನಮ್ಮ ಡೇಟಾ ಕದಿಯುತ್ತದೆ, ಸಿಸ್ಟಂ ಹಾನಿಗೊಳಿಸುತ್ತದೆ ಮತ್ತು ಹ್ಯಾಕರ್‌ಗಳಿಗೆ ತಮ್ಮ ಖಾತೆಯ ನಿಯಂತ್ರಣ ನೀಡುತ್ತದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net