ಕಚೇರಿಯಲ್ಲಿ ಶವವಾಗಿ ಪತ್ತೆಯಾದ ತ್ರಿಪುರಾ ಡಿಜೆಪಿ ಅನುರಾಗ್ ಧಂಕರ್: ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಶಂಕೆ | Tripura DGP

ಡಿಜಿಪಿ ಅನುರಾಗ್ ಧಂಕರ್
ಡಿಜಿಪಿ ಅನುರಾಗ್ ಧಂಕರ್
Published on
ಅಗರ್ತಲಾ: ತ್ರಿಪುರಾ ರಾಜ್ಯದ ಪೊಲೀಸ್ ಮಹಾನಿರ್ದೇಶಕ(DGP) ಅನುರಾಗ್ ಧಂಕರ್, ಸೋಮವಾರ(ಜು. 20) ಅಗರ್ತಲಾದ ತಮ್ಮ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಧಂಕರ್ ತಮ್ಮದೇ ಆದ ಸರ್ವಿಸ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣ ಅಲ್ಲಿದ್ದ ಸಿಬ್ಬಂದಿ ಅವರನ್ನು ಅಗರ್ತಲಾದ ಗೋವಿಂದ್ ಬಲ್ಲಭ್ ಪಂತ್(ಜಿಬಿ) ಆಸ್ಪತ್ರೆಗೆ ಕರೆದೊಯ್ಯಿದ್ದಾರೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆಸ್ಪತ್ರೆಯ ವೈದ್ಯ ಪ್ರದೀಪ್ ಭೌಮಿಕ್, ಅವರನ್ನು ಮಧ್ಯಾಹ್ನ 12 ಗಂಟೆಗೆ ಆಸ್ಪತ್ರೆಗೆ ಕರೆತರಲಾಯಿತು. ಆ ಸಮಯದಲ್ಲಿ ಅವರಿಗೆ ನಾಡಿಮಿಡಿತವಿರಲಿಲ್ಲ, ರಕ್ತದೊತ್ತಡವಿರಲಿಲ್ಲ, ಜೀವದ ಲಕ್ಷಣವೂ ಇರಲಿಲ್ಲ. ನಾವು ಸಿಪಿಆರ್ ನೀಡುವ ಮೂಲಕ 40 ನಿಮಿಷಗಳಿಗೂ ಹೆಚ್ಚು ಕಾಲ ಪ್ರಯತ್ನಿಸಿದೆವು ಆದರೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. 12.48ಕ್ಕೆ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಅವರ ಸಾವಿಗೆ ಕಾರಣ ತಿಳಿದುಬರುತ್ತದೆ ಎಂದು ಹೇಳಿದ್ದಾರೆ.
ಇನ್ನೂ 1994ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅನುರಾಗ್ ಧಂಕರ್, ಅಮಿತಾಬ್ ರಂಜನ್ ಅವರ ನಂತರ ಮೇ 2025ರಲ್ಲಿ ತ್ರಿಪುರಾದ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಸಾವಿಗೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ತ್ರಿಪುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net