_1784398518313.webp?w=480&auto=format%2Ccompress&fit=max)
_1784398518313.webp?w=480&auto=format%2Ccompress&fit=max)
ಭಾರತದಲ್ಲಿ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಇತಿಹಾಸವು ಅತ್ಯಂತ ರೋಚಕವಾಗಿದ್ದು, ಪ್ರಾಚೀನ ಕಾಲದ ಲೋಹದ ನಾಣ್ಯಗಳಿಂದ ಹಿಡಿದು ಇಂದಿನ ಡಿಜಿಟಲ್ ರೂಪಾಯಿ ಹಾಗೂ ಮುಂಬರುವ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳ ಪ್ರಯೋಗದವರೆಗೆ ದೀರ್ಘ ಪ್ರಯಾಣವನ್ನು ಕಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕ್ನೋಟುಗಳ ಆಯಸ್ಸನ್ನು ಹೆಚ್ಚಿಸಲು ಮತ್ತು ನಕಲಿ ನೋಟುಗಳ ತಡೆಗಾಗಿ ಪ್ಲಾಸ್ಟಿಕ್ ನೋಟುಗಳ ಪರಿಚಯಕ್ಕೆ ಮುಂದಾಗುತ್ತಿರುವ ಈ ಸಂದರ್ಭದಲ್ಲಿ, ಭಾರತದ ಕರೆನ್ಸಿ ರೂಪಾಂತರದ ಇತಿಹಾಸ, ಮಹತ್ವ ಮತ್ತು ಪರಿಣಾಮಗಳ ವಿವರ ಇಲ್ಲಿದೆ.
ದೇಶದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಆಯಸ್ಸನ್ನು ಹೆಚ್ಚಿಸಲು ಮತ್ತು ಅವುಗಳ ಗುಣಮಟ್ಟವನ್ನು ಸುಧಾರಿಸಲು ಪಾಲಿಮರ್ ನೋಟುಗಳನ್ನು ತರುವ ಇಚ್ಛೆಯನ್ನು ಆರ್ಬಿಐ ಈ ಹಿಂದೆಯೂ ವ್ಯಕ್ತಪಡಿಸಿತ್ತು. ಈಗ ಶೀಘ್ರದಲ್ಲೇ ಆರಂಭವಾಗಲಿರುವ ಈ ಪ್ರಾಯೋಗಿಕ ಯೋಜನೆ (ಪೈಲಟ್ ಪ್ರಾಜೆಕ್ಟ್) ಮೊದಲ ನೈಜ ಪರೀಕ್ಷೆಯಾಗಲಿದೆ. ಆದರೆ, ಈ ಪ್ರಯೋಗ ಯಶಸ್ವಿಯಾದರೆ ಕರೆನ್ಸಿ ವಿಷಯದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗುತ್ತದೆ. ನಕಲಿ ನೋಟು ಹಾವಳಿ ತಡೆಗೆ ಇದು ಪರಿಣಾಮಕಾರಿ ವಿಧಾನವಾಗಲಿದೆ, ಬಾಳಿಕೆ ದೃಷ್ಟಿಯಲ್ಲೂ ಪ್ಲಾಸ್ಟಿಕ್ ನೋಟು ಹೆಚ್ಚು ಪ್ರಯೋಜನಕಾರಿ ಎಂಬುದು ತಜ್ಞರ ಸ್ಪಷ್ಟ ಅನಿಸಿಕೆ.
ಕ್ರಿ.ಪೂ 6ನೇ ಶತಮಾನದಲ್ಲೇ ಭಾರತದಲ್ಲಿ ‘ಆಹತ’ (ಕ್ಠnಜಞಚ್ಟkಛಿಛ) ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಚಲಾವಣೆಯಲ್ಲಿದ್ದವು. ಮೌರ್ಯರು, ಗುಪ್ತರು ಹಾಗೂ ಮೊಘಲರ ಕಾಲದಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ರಾಜರ ಮುದ್ರೆಗಳೊಂದಿಗೆ ಚಲಾವಣೆಗೆ ಬಂದವು.
ರೂಪಾಯಿಯ ಉಗಮ: ದಿಲ್ಲಿಯ ಸುಲ್ತಾನ್ ಶೇರ್ ಶಾ ಸೂರಿ 16ನೇ ಶತಮಾನದಲ್ಲಿ ಮೊದಲ ಬಾರಿಗೆ 178 ಗ್ರೇನ್ ತೂಕದ ಬೆಳ್ಳಿಯ ನಾಣ್ಯವನ್ನು ಪರಿಚಯಿಸಿ, ಅದಕ್ಕೆ ‘ರೂಪಿಯಾ’ ಎಂದು ಹೆಸರಿಟ್ಟನು. ಇದೇ ಇಂದಿನ ರೂಪಾಯಿಯ ಮೂಲ ರೂಪ. ಬ್ರಿಟಿಷರು 1835ರಲ್ಲಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಏಕರೂಪದ ನಾಣ್ಯ ಪದ್ಧತಿಯನ್ನು ತಂದರು.
ನೋಟುಗಳ ಆಗಮನ: 18ನೇ ಶತಮಾನದ ಕೊನೆಯಲ್ಲಿ ಬ್ಯಾಂಕ್ ಆಫ್ ಹಿಂದೂಸ್ತಾನ್, ಜನರಲ್ ಬ್ಯಾಂಕ್ ಆಫ್ ಬೆಂಗಾಲ್ ಮುಂತಾದ ಖಾಸಗಿ ಬ್ಯಾಂಕುಗಳು ಮೊದಲ ಬಾರಿಗೆ ಕಾಗದದ ನೋಟುಗಳನ್ನು ಮುದ್ರಿಸಿದವು.
ಸರ್ಕಾರದ ಏಕಸ್ವಾಮ್ಯ: ಬ್ರಿಟಿಷ್ ಸರ್ಕಾರವು 1861ರಲ್ಲಿ ‘ಪೇಪರ್ ಕರೆನ್ಸಿ ಆಕ್ಟ್’ ತಂದು, ನೋಟು ಮುದ್ರಣದ ಸಂಪೂರ್ಣ ಹಕ್ಕನ್ನು ತನ್ನ ಮುಷ್ಟಿಗೆ ತೆಗೆದುಕೊಂಡಿತು. ಈ ನೋಟುಗಳ ಮೇಲೆ ವಿಕ್ಟೋರಿಯಾ ರಾಣಿಯ ಚಿತ್ರವಿರುತ್ತಿತ್ತು.
ಆರ್ಬಿಐ ಸ್ಥಾಪನೆ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 1935ರಲ್ಲಿ ಸ್ಥಾಪನೆಯಾದ ನಂತರ, ನೋಟು ಬಿಡುಗಡೆ ಮಾಡುವ ಅಧಿಕಾರ ಆರ್ಬಿಐ ಹೆಗಲಿಗೇರಿತು. ಆರ್ಬಿಐ ಮುದ್ರಿಸಿದ ಮೊದಲ ನೋಟು 5 ರೂಪಾಯಿ ಮುಖಬೆಲೆಯದ್ದು. ಇದರ ಮೇಲೆ ಜಾರ್ಜ್ ರಾಜನ ಚಿತ್ರವಿತ್ತು.
ಸ್ವಾತಂತ್ರೊ್ಯೕತ್ತರ: ಸ್ವಾತಂತ್ರ್ಯದ ನಂತರ ಬ್ರಿಟಿಷ್ ರಾಜನ ಚಿತ್ರದ ಬದಲಿಗೆ ಭಾರತದ ರಾಷ್ಟ್ರೀಯ ಲಾಂಛನವಾದ ಅಶೋಕ ಸ್ತಂಭವನ್ನು ನೋಟುಗಳಲ್ಲಿ ಬಳಸಲಾರಂಭಿಸಲಾಯಿತು. ಆರ್ಬಿಐ 1996ರಲ್ಲಿ ಸಂಪೂರ್ಣ ಭದ್ರತಾ ವೈಶಿಷ್ಟ್ಯಗಳನ್ನೊಳಗೊಂಡ ‘ಮಹಾತ್ಮ ಗಾಂಧಿ ಸರಣಿ’ಯ ನೋಟುಗಳನ್ನು ಹೊರತಂದಿತು. ಅಲ್ಲಿಂದ ಇಂದಿನವರೆಗೆ ಗಾಂಧೀಜಿಯವರ ಚಿತ್ರವೇ ನಮ್ಮ ನೋಟುಗಳ ಪ್ರಮುಖ ಗುರುತಾಗಿದೆ.
ನೋಟು ಅಮಾನ್ಯೀಕರಣ: 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು 2016ರಲ್ಲಿ ರದ್ದುಪಡಿಸಿ, ಹೊಸ ವಿನ್ಯಾಸದ 500 ಹಾಗೂ 2000 ರೂ. ನೋಟುಗಳನ್ನು ತರಲಾಯಿತು. ಪಾಲಿಮರ್ ಬಳಕೆಯ ಮಹತ್ವ ಆರ್ಬಿಐ ಕಾಗದದ ನೋಟುಗಳ ಬದಲಿಗೆ ಪ್ಲಾಸ್ಟಿಕ್ ನೋಟುಗಳತ್ತ ಮುಖ ಮಾಡುತ್ತಿರುವುದರ ಹಿಂದೆ ಬಲವಾದ ಕಾರಣಗಳಿವೆ:
ದೀರ್ಘಾವಧಿ ಬಾಳಿಕೆ: ಕಾಗದದ ನೋಟುಗಳು ಬೇಗನೆ ಹರಿದುಹೋಗುತ್ತವೆ, ಕೊಳೆಯಾಗುತ್ತವೆ ಅಥವಾ ನೀರಿನಲ್ಲಿ ನೆನೆದರೆ ಹಾಳಾಗುತ್ತವೆ. ಆದರೆ ಪಾಲಿಮರ್ ನೋಟುಗಳ ಆಯಸ್ಸು ಕಾಗದದ ನೋಟುಗಳಿಗಿಂತ 3ರಿಂದ 4 ಪಟ್ಟು ಹೆಚ್ಚು.
ನಕಲಿ ನೋಟುಗಳಿಗೆ ಬ್ರೇಕ್: ಪ್ಲಾಸ್ಟಿಕ್ ನೋಟುಗಳಲ್ಲಿ ಅತ್ಯಾಧುನಿಕ ಹಾಲೋಗ್ರಾಮ್ಳು ಮತ್ತು ಸಂಕೀರ್ಣ ಭದ್ರತಾ ಎಳೆಗಳನ್ನು ಅಳವಡಿಸಬಹುದು. ಇವುಗಳನ್ನು ನಕಲು ಮಾಡುವುದು ಅಸಾಧ್ಯದ ಮಾತು.
ಸ್ವಚ್ಛತೆ ಮತ್ತು ನೈರ್ಮಲ್ಯ: ಪ್ಲಾಸ್ಟಿಕ್ ನೋಟುಗಳು ನೀರು ಮತ್ತು ಧೂಳು ನಿರೋಧಕವಾಗಿರುತ್ತವೆ. ಇವುಗಳ ಮೇಲೆ ಬ್ಯಾಕ್ಟೀರಿಯಾ ಅಥವಾ ವೈರಸ್ಗಳು ಹೆಚ್ಚು ಕಾಲ ಉಳಿಯುವುದಿಲ್ಲ, ಹೀಗಾಗಿ ಇವು ಹೆಚ್ಚು ಹೈಜಿನಿಕ್.
ಪರಿಸರಸ್ನೇಹಿ: ಇವು ಪ್ಲಾಸ್ಟಿಕ್ ಆಗಿದ್ದರೂ, ಸಂಪೂರ್ಣವಾಗಿ ಹಾಳಾದ ನಂತರ ಇವುಗಳನ್ನು ಕರಗಿಸಿ ಮರುಬಳಕೆ ಮಾಡಬಹುದು. ಕಾಗದದ ನೋಟುಗಳಿಗಾಗಿ ಮರಗಳನ್ನು ಕಡಿಯುವ ಅಗತ್ಯವೂ ಇರುವುದಿಲ್ಲ.
ಇದು ಒಂದು ರೀತಿಯ ಜಾಗತಿಕ ಟೆಂಡರ್ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ರಿಸರ್ವ್ ಬ್ಯಾಂಕ್ ಜಗತ್ತಿನಾದ್ಯಂತ ಇರುವ ಅನುಭವಿ ಹಾಗೂ ಅರ್ಹ ಕಂಪನಿಗಳಿಗೆ ತಮ್ಮ ಸಾಮರ್ಥ್ಯ, ತಂತ್ರಜ್ಞಾನ ಮತ್ತು ದರಪಟ್ಟಿಯೊಂದಿಗೆ ಈ ಯೋಜನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆಹ್ವಾನ ನೀಡುತ್ತದೆ.
ಮುದ್ರಣ ವೆಚ್ಚದಲ್ಲಿ ಕಡಿತ: ಆರಂಭದಲ್ಲಿ ಪ್ಲಾಸ್ಟಿಕ್ ನೋಟುಗಳ ಮುದ್ರಣ ವೆಚ್ಚ ಹೆಚ್ಚಾಗಿದ್ದರೂ, ಅವು ದೀರ್ಘಕಾಲ ಬಾಳಿಕೆ ಬರುವುದರಿಂದ ಆರ್ಬಿಐಗೆ ಪದೇಪದೆ ನೋಟು ಮುದ್ರಿಸುವ ಸಾವಿರಾರು ಕೋಟಿ ರೂಪಾಯಿ ವೆಚ್ಚ ಉಳಿತಾಯವಾಗುತ್ತದೆ.
ಕಪ್ಪುಹಣಕ್ಕೆ ತಡೆ: ಅತ್ಯಾಧುನಿಕ ಭದ್ರತೆಯಿಂದಾಗಿ ಮಾರುಕಟ್ಟೆಗೆ ನಕಲಿ ನೋಟುಗಳು ಬರುವುದು ನಿಲ್ಲುತ್ತದೆ, ಇದು ದೇಶದ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ.
ಎಟಿಎಂ ನಿರ್ವಹಣೆ ಸುಲಭ: ಪ್ಲಾಸ್ಟಿಕ್ ನೋಟುಗಳು ಎಟಿಎಂ ಯಂತ್ರಗಳಲ್ಲಿ ಸುಲಭವಾಗಿ ಚಲಿಸುವುದರಿಂದ ಯಂತ್ರಗಳು ಜಾಮ್ ಆಗುವ ಸಮಸ್ಯೆ ಕಡಿಮೆಯಾಗುತ್ತದೆ.
ಈ ನೋಟುಗಳನ್ನು ಕಾಗದದ ಬದಲಿಗೆ ಒಂದು ವಿಶಿಷ್ಟ ಮಾದರಿಯ ಪ್ಲಾಸ್ಟಿಕ್ ಮೆಟೀರಿಯಲ್, ಅಂದರೆ ‘ಪಾಲಿಮರ್ ಸಬ್ಸ್ಟ್ರೇಟ್’ ಬಳಸಿ ಮುದ್ರಿಸಲಾಗುತ್ತದೆ. ಇವುಗಳನ್ನು ಮುಟ್ಟಿದಾಗ ಸಾಮಾನ್ಯ ನೋಟುಗಳಷ್ಟೇ ಹಗುರವಾಗಿ ಅನಿಸುತ್ತವೆಯಾದರೂ, ನೀರಿನಲ್ಲಿ ನೆನೆದರೂ ಕರಗುವುದಿಲ್ಲ ಮತ್ತು ಸುದೀರ್ಘ ಕಾಲ ಬಾಳಿಕೆ ಬರುತ್ತವೆ.
ಆಸ್ಟ್ರೇಲಿಯಾ ಜಗತ್ತಿನಲ್ಲೇ ಮೊದಲ ಬಾರಿಗೆ (1988ರಲ್ಲಿ) ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶವಾಗಿದೆ. ಸದ್ಯ ಯುಕೆ, ಕೆನಡಾ, ವಿಯೆಟ್ನಾಂ, ರೊಮಾನಿಯಾ ಸೇರಿದಂತೆ 50 ದೇಶಗಳು ಇದನ್ನು ಬಳಸುತ್ತಿವೆ. ಭಾರತ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವುದು ಆರ್ಥಿಕತೆಯ ಆಧುನೀಕರಣಕ್ಕೆ ಸಾಕ್ಷಿಯಾಗಿದೆ.
ನವದೆಹಲಿ: ದೇಶದಲ್ಲಿ ಮುಂದಿನ ವರ್ಷದಿಂದ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪರಿಚಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಕಲ ಸಿದ್ಧತೆ ಮಾಡಿಕೊಂಡಿದ್ದು ಅವುಗಳ ಸರಬರಾಜಿಗಾಗಿ ಜಾಗತಿಕ ಬಿಡ್ಗಳನ್ನು ಕರೆದಿದೆ. ಪೈಲಟ್ ಯೋಜನೆಯನ್ವಯ ಆರಂಭದಲ್ಲಿ ಪ್ರಾಯೋಗಿಕವಾಗಿ 10 ಮತ್ತು 20 ರೂಪಾಯಿ ಮೌಲ್ಯದ ನೋಟುಗಳನ್ನು ಬಿಡುಗಡೆ ಮಾಡಿ ಕ್ರಮೇಣ ಅಧಿಕ ಮುಖಬೆಲೆಯ ಕರೆನ್ಸಿಗಳನ್ನು ಜಾರಿಗೆ ತರುವುದು ಆರ್ಬಿಐ ಯೋಜನೆಯಾಗಿದೆ.
ಆರಂಭಿಕ ನೋಟುಗಳಿಗೆ ವ್ಯಕ್ತವಾಗುವ ಪ್ರತಿಕ್ರಿಯೆಯನ್ನು ಆಧರಿಸಿ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಪರಿಚಯಿಸುವುದು ಹಾಗೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವ ಬಗ್ಗೆ ತೀರ್ವನಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಪ್ರಕ್ರಿಯೆಯ ಅಂಗವಾಗಿ ಆರ್ಬಿಐನ ಕರೆನ್ಸಿ ಮುದ್ರಣ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ (ಬಿಆರ್ಬಿಎನ್ಎಂಪಿಎಲ್) ಒಪಾಸಿಫೈಡ್ ಸಬ್ಸ್ಟ್ರೇಟ್ ಶೀಟ್ಗಳ ಸರಬರಾಜಿಗಾಗಿ ವಿಶ್ವವ್ಯಾಪಿ ಉತ್ಪಾದಕರಿಂದ ಜಾಗತಿಕ ಆಸಕ್ತಿ ಪತ್ರವನ್ನು (ಗ್ಲೋಬಲ್ ಎಕ್ಸ್ಪ್ರೆಶನ್ ಆಫ್ ಇಂಟೆಂಟ್-ಇಒಐ) ಆಹ್ವಾನಿಸಿದೆ.
ಮುದ್ರಣ ಕುತೂಹಲ: ಭಾರತದಲ್ಲಿ ಪ್ರಸ್ತುತ ನೋಟುಗಳನ್ನು ಒಟ್ಟು ನಾಲ್ಕು ಬ್ಯಾಂಕ್ನೋಟ್ ಪ್ರೆಸ್ಗಳಲ್ಲಿ ಮುದ್ರಿಸಲಾಗುತ್ತದೆ. ಇವುಗಳಲ್ಲಿ ಎರಡು ಪ್ರೆಸ್ಗಳು ಭಾರತ ಸರ್ಕಾರದ ಸ್ವಾಮ್ಯದಲ್ಲಿದ್ದರೆ, ಉಳಿದೆರಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಅಂಗಸಂಸ್ಥೆಯಾದ ‘ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೖೆವೇಟ್ ಲಿಮಿಟೆಡ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದ ಮೈಸೂರು ಬ್ಯಾಂಕ್ನೋಟ್ ಪ್ರೆಸ್ ಮತು ಪಶ್ಚಿಮ ಬಂಗಾಳದ ಸಾಲ್ಬೋನಿ ಪ್ರೆಸ್ ಆರ್ಬಿಐನ ಬಿಆರ್ಬಿಎನ್ಎಂಪಿಎಲ್ ಒಡೆತನದಲ್ಲಿದೆ.
ಮಹಾರಾಷ್ಟ್ರದ ನಾಸಿಕ್ ಮತ್ತು ಮಧ್ಯಪ್ರದೇಶದ ದೇವಾಸ್ ನೋಟು ಮುದ್ರಣಾಲಯವು, ಭಾರತ ಸರ್ಕಾರದ ಸೆಕ್ಯೂರಿಟಿ ಪ್ರಿಂಟಿಂಗ್ ಆಂಡ್ ಮಿಂಟಿಂಗ್ ಕಾರ್ಪೆರೇಷನ್ ಆಫ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿವೆ. ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಪ್ರತ್ಯೇಕ ಪ್ರೆಸ್ಗಳಲ್ಲಿ ಮುದ್ರಿಸುವುದಿಲ್ಲ; ಬದಲಿಗೆ ಪ್ರಸ್ತುತ ಇರುವ ಬಿಆರ್ಬಿಎನ್ಎಂಪಿಎಲ್ ಮತ್ತು ಎಸ್ಪಿಎಂಸಿಐಎಲ್ನ ನೋಟು ಮುದ್ರಣ ಪ್ರೆಸ್ಗಳಲ್ಲೇ (ಮೈಸೂರು, ಸಾಲ್ಬೋನಿ, ನಾಸಿಕ್ ಮತ್ತು ದೇವಾಸ್) ಇವುಗಳನ್ನು ಮುದ್ರಿಸಲಾಗುತ್ತದೆ. ಆದರೆ, ಇದಕ್ಕಾಗಿ ಬೇಕಾಗುವ ವಿಶೇಷ ಪ್ಲಾಸ್ಟಿಕ್ ಹಾಳೆಗಳನ್ನು (ಪಾಲಿಮರ್ ಸಬ್ಸ್ಟ್ರೇಟ್) ತಯಾರಿಸಲು ಆರ್ಬಿಐ ಸಿದ್ಧತೆ ನಡೆಸುತ್ತಿದೆ.