ಕಾನ್ಪುರದಲ್ಲಿ ತರಬೇತಿ ವಿಮಾನ ಪತನ; ಕರ್ನಾಟಕದ ಪೈಲಟ್ ಸೇರಿ ಇಬ್ಬರು ಬಲಿ | Kanpur plane crash

ಕಾನ್ಪುರದ ಗಂಗಾ ಬ್ಯಾರೇಜ್ ಸಮೀಪ ತರಬೇತಿ ವಿಮಾನ ಪತನ
ಕಾನ್ಪುರದ ಗಂಗಾ ಬ್ಯಾರೇಜ್ ಸಮೀಪ ತರಬೇತಿ ವಿಮಾನ ಪತನ
Published on

ಪ್ರಮುಖ ಮುಖ್ಯಾಂಶಗಳು

  • ಕಾನ್ಪುರದ ಗಂಗಾ ಬ್ಯಾರೇಜ್ ಸಮೀಪ ತರಬೇತಿ ಪ್ಲೇನ್ ಕ್ರ್ಯಾಶ್
  • ದುರಂತದಲ್ಲಿ ಕರ್ನಾಟಕದ ಪೈಲಟ್ ಸೇರಿ ಇಬ್ಬರು ದುರ್ಮರಣ
  • ಅಪಘಾತದ ಕಾರಣ ಪತ್ತೆಹಚ್ಚಲು ಡಿಜಿಸಿಎ ತಾಂತ್ರಿಕ ತನಿಖೆ
ಉತ್ತರ ಪ್ರದೇಶ: ಕಾನ್ಪುರದದಲ್ಲಿ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಕರ್ನಾಟಕದ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಗಂಗಾ ಬ್ಯಾರೇಜ್ ಸಮೀಪದ ನಾಥುಪುರವಾ ಗ್ರಾಮದ ಬಳಿಯ ಹೊಲದಲ್ಲಿ ಟ್ವಿನ್‌-ಎಂಜಿನ್ ತರಬೇತಿ ವಿಮಾನ ಏಕಾಏಕಿ ಪತನಗೊಂಡಿದೆ. ವಿಷಯ ಗೊತ್ತಾಗ್ತಿದ್ದಂತೆ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಇಡೀ ಪ್ರದೇಶವನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರು ಅಪಘಾತದ ಸ್ಥಳಕ್ಕೆ ಹೋಗದಂತೆ ನಿರ್ಬಂಧ ವಿಧಿಸಿ, ಬಳಿಕ ವಿಮಾನದ ಅವಶೇಷಗಳ ನಡುವಿನಿಂದ ಇಬ್ಬರು ಮೃತದೇಹಗಳನ್ನು ಹೊರತೆಗೆದು ಕಳುಹಿಸಿದ್ದಾರೆ.

ಕರ್ನಾಟಕದ ಟ್ರೈನಿ ಪೈಲಟ್ ಸೇರಿ ಇಬ್ಬರು ಬಲಿ

ಪೊಲೀಸರ ಮಾಹಿತಿ ಪ್ರಕಾರ, ಅಪಘಾತದಲ್ಲಿ ಮೃತಪಟ್ಟವರನ್ನು ಗುಜರಾತ್ ಮೂಲದ ಇನ್‌ಸ್ಟ್ರಕ್ಟರ್ ಪೈಲಟ್ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ಕಾನ್ಪುರದಲ್ಲಿರುವ ಗಾರ್ಗ್ ಏವಿಯೇಷನ್ ಟ್ರೈನಿಂಗ್ ಸೆಂಟರ್‌ನಿಂದ ಈ ತರಬೇತಿ ವಿಮಾನ ಬೆಳಗ್ಗೆ 11.30ರ ಸುಮಾರಿಗೆ ಟೇಕ್ ಆಫ್ ಆಗಿತ್ತು. ತರಬೇತಿ ಹಾರಾಟ ಮುಗಿಸಿಕೊಂಡು ಸೆಂಟರ್‌ಗೆ ವಾಪಸ್ ಬರುತ್ತಿದ್ದ ವೇಳೆ, ಸುಮಾರು 11.50ರ ಹೊತ್ತಿಗೆ ನಾಥುಪುರವಾ ಗ್ರಾಮದ ಬಳಿಯ ಹೊಲದಲ್ಲಿ ವಿಮಾನ ಪತನಗೊಂಡಿದೆ.
3 ಸಾವಿರ ಗಂಟೆ ಹಾರಾಟದ ಅನುಭವಿದ್ದ ಇನ್‌ಸ್ಟ್ರಕ್ಟರ್
ಅಪಘಾತಕ್ಕೀಡಾದ ವಿಮಾನ ನಾಲ್ಕು ಆಸನಗಳ ಟ್ವಿನ್-ಎಂಜಿನ್ ವಿಮಾನವಾಗಿದ್ದು, ಗಾರ್ಗ್ ಏವಿಯೇಷನ್ ಸಂಸ್ಥೆ ನಿರ್ವಹಿಸುತ್ತಿತ್ತು. ಮೃತ ಇನ್‌ಸ್ಟ್ರಕ್ಟರ್ ಸಚಿನ್ ಭಾಟಿಯಾ ಅವರಿಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವ ಇತ್ತು. ಈ ವಿಮಾನವನ್ನು 2023ರಲ್ಲಿ ತರಬೇತಿ ಕೇಂದ್ರಕ್ಕೆ ತರಲಾಗಿತ್ತು ಎಂದು ತಿಳಿದುಬಂದಿದೆ. ಇದು ಟೆಕ್ನಮ್ P2006T ವಿಮಾನವಾಗಿರಬಹುದು ಎಂದು ವರದಿಯಾಗಿದೆ. ಆದರೆ ವಿಮಾನದ ಮಾದರಿ ಮತ್ತು ನೋಂದಣಿ ಸಂಖ್ಯೆಯನ್ನು ಡಿಜಿಸಿಎ ಅಧಿಕೃತವಾಗಿ ಇನ್ನೂ ಖಚಿತಪಡಿಸಿಲ್ಲ.

ತನಿಖೆ ಆರಂಭಿಸಲಿರುವ ಡಿಜಿಸಿಎ

ಅಪಘಾತದ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ಗೆ ಮಾಹಿತಿ ನೀಡಲಾಗಿದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ನಿಯಂತ್ರಣ ಸಂಸ್ಥೆಯ ತಂಡ ತಾಂತ್ರಿಕ ತನಿಖೆ ನಡೆಸುವ ಸಾಧ್ಯತೆ ಇದೆ. ವಿಮಾನ ನಿರ್ವಹಣಾ ದಾಖಲೆಗಳು, ಹಾರಾಟದ ಕಾರ್ಯಾಚರಣೆ, ಹವಾಮಾನ ಪರಿಸ್ಥಿತಿ, ಪೈಲಟ್‌ಗಳ ಅನುಭವ ಸೇರಿದಂತೆ ಹಲವು ಅಂಶಗಳನ್ನು ತನಿಖೆ ನಡೆಸಲಾಗುತ್ತೆ.

2 ತಿಂಗಳ ಹಿಂದೆಯೂ ಇಂತಹದ್ದೆ ಘಟನೆ

ಇದೇ ಗಾರ್ಗ್ ಏವಿಯೇಷನ್ ಸಂಸ್ಥೆಯ ಕಾನ್ಪುರ ತರಬೇತಿ ಕೇಂದ್ರದಲ್ಲಿ ಎರಡು ತಿಂಗಳ ಹಿಂದೆಯೂ ಇಂತಹ ಘಟನೆ ನಡೆದಿತ್ತು. ಜೂನ್ 26ರಂದು ರಾತ್ರಿ ತರಬೇತಿ ಹಾರಾಟ ಮುಗಿಸಿ ಟೆಕ್ನಮ್ P2006T ವಿಮಾನದಿಂದ ಇಳಿಯುತ್ತಿದ್ದ ವೇಳೆ ನವದೆಹಲಿಯ ಮಹಿಳಾ ಕ್ಯಾಡೆಟ್ ಪೈಲಟ್ ಒಬ್ಬರು ತಿರುಗುತ್ತಿದ್ದ ಪ್ರೊಪೆಲ್ಲರ್‌ಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಅವರಿಗೆ ಬೆನ್ನಿನಲ್ಲಿ ಗಾಯವಾಗಿತ್ತು ಎಂದು ವರದಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net