ಮಾರ್ಚ್​​ 3 ರಂದು ಪೂರ್ಣ ಚಂದ್ರ ಗ್ರಹಣ: ಭಾರತೀಯರಿಗೆ ಕೇವಲ 25 ನಿಮಿಷ ಅವಕಾಶ! ಇಲ್ಲಿದೆ ಕಂಪ್ಲೀಟ್​ ಮಾಹಿತಿ...Total Lunar Eclipse 2026

ಪೂರ್ಣ ಚಂದ್ರ ಗ್ರಹಣ ( Total Lunar Eclipse 2026 )
ಪೂರ್ಣ ಚಂದ್ರ ಗ್ರಹಣ ( Total Lunar Eclipse 2026 )
Published on

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿಷ್ಯ ಶಾಸ್ತ್ರದ ಒಂಬತ್ತು ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಮುಖ್ಯವಾದ ಗ್ರಹವಾಗಿದೆ
  • ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ.
  • ಚಂದ್ರ, ಭೂಮಿಗೆ ಹತ್ತಿರವಾಗಿರುವುದರಿಂದ, ಅದು ನೇರವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ
  • ಈ ವರ್ಷದ ಮೊದಲ ಪೂರ್ಣ ಚಂದ್ರ ಗ್ರಹಣ 2026, ಮಾರ್ಚ್​ 3ರಂದು ಸಂಭವಿಸಲಿದೆ
Total Lunar Eclipse 2026 : ಜ್ಯೋತಿಷ್ಯ ಶಾಸ್ತ್ರದ ಒಂಬತ್ತು ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಅತ್ಯಂತ ಮುಖ್ಯವಾದ ಗ್ರಹವಾಗಿದೆ. ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಚಂದ್ರನಿಗೆ ಪ್ರಮುಖ ಸ್ಥಾನವಿದೆ. ಚಂದ್ರ, ಭೂಮಿಗೆ ಹತ್ತಿರವಾಗಿರುವುದರಿಂದ, ಅದು ನೇರವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಚಂದ್ರನ ಮೇಲೆ ನಡೆಯುವ ಪ್ರತಿಯೊಂದು ಘಟನೆಯೂ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಗ್ರಹಣಗಳು ಸಹ ಪರಿಣಾಮ ಬೀರುತ್ತವೆ.
ಅಂದಹಾಗೆ, ಈ ವರ್ಷದ ಮೊದಲ ಪೂರ್ಣ ಚಂದ್ರ ಗ್ರಹಣ 2026, ಮಾರ್ಚ್​ 3ರಂದು ಸಂಭವಿಸಲಿದೆ. ಇದು ಮಾರ್ಚ್​ ತಿಂಗಳಲ್ಲಿ ಆಗಸದಲ್ಲಿ ನಡೆಯಲಿರುವ ಅಪರೂಪದ ವಿದ್ಯಾಮಾನ ಮತ್ತು ಖಗೋಳದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಒಂದು ರಸದೌತಣದ ಕ್ಷಣ ಅಂತಾನೇ ಹೇಳಬಹುದು. ಅದೇನೇ ಇರಲಿ ಗ್ರಹಣ ಅಂತಾ ಬಂದಾಗ ಮೊದಲು ಎದುರಾಗುವ ಪ್ರಶ್ನೆ ಏನೆಂದರೆ, ಭಾರತದಲ್ಲಿ ಗೋಚರಿಸುತ್ತಾ ಅನ್ನೋದು. ಇದೀಗ ಪೂರ್ಣ ಚಂದ್ರಗ್ರಹಣ ವಿಚಾರದಲ್ಲೂ ಇದೇ ಪ್ರಶ್ನೆ ಎದುರಾಗಿದೆ. ಭಾರತದಲ್ಲಿ ಈ ವರ್ಷದ ಮೊದಲ ಚಂದ್ರ ಗ್ರಹಣ ಗೋಚರಿಸುತ್ತದೆಯೇ? ಈ ಪ್ರಶ್ನೆಗೆ ನಾವೀಗ ಉತ್ತರ ತಿಳಿದುಕೊಳ್ಳೋಣ.
ಚಂದ್ರಗ್ರಹಣವು 2026, ಮಾರ್ಚ್ 3ರ ಮಂಗಳವಾರದಂದು ಸಂಭವಿಸುತ್ತದೆ ಮತ್ತು ಇದು ವರ್ಷದ ಮೊದಲ ಸಂಪೂರ್ಣ ಚಂದ್ರ ಗ್ರಹಣವಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣವು ಮಧ್ಯಾಹ್ನ 3.20ಕ್ಕೆ ಪ್ರಾರಂಭವಾಗಿ ಸಂಜೆ 6.47ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಒಟ್ಟು ಅವಧಿ ಸುಮಾರು 3 ಗಂಟೆ 27 ನಿಮಿಷಗಳು ಆಗಿರುತ್ತದೆ. ಇದರಲ್ಲಿ ಪೂರ್ಣ ಗ್ರಹಣದ ಅವಧಿ ಸುಮಾರು 58 ನಿಮಿಷಗಳು ಇರುತ್ತದೆ.

ಭಾರತದಲ್ಲಿ ಭಾಗಶಃ ಮಾತ್ರ ನೋಡಬಹುದು

ಆಕಾಶ ವೀಕ್ಷಕರು ಮತ್ತು ಖಗೋಳಶಾಸ್ತ್ರಜ್ಞರು ಭಾರತದಲ್ಲೂ ಚಂದ್ರ ಗ್ರಹಣವನ್ನು ವೀಕ್ಷಣೆ ಮಾಡಬಹುದು. ಈ ಬಾರಿ ಈ ಅಪರೂಪದ ಆಕಾಶ ಘಟನೆಯನ್ನು ತಮ್ಮ ಬರಿಗಣ್ಣಿನಿಂದ ವೀಕ್ಷಿಸಲೂ ಸಾಧ್ಯವಾಗುತ್ತದೆ. ತಮ್ಮ DSLR ಕ್ಯಾಮೆರಾಗಳಲ್ಲಿ ಆ ಕ್ಷಣವನ್ನು ಸೆರೆಹಿಡಿಯಬಹುದು. ಆದರೆ, ಇಲ್ಲಿ ಸಮಯ ಮಿತಿಯೇ ಪ್ರಮುಖ ಅಂಶವಾಗಿದೆ. ಏಕೆಂದರೆ, ಚಂದ್ರ ಗ್ರಹಣದ ಅಂತಿಮ ಹಂತವನ್ನು ಮಾತ್ರ ಭಾರತದಿಂದ ನೋಡಬಹುದು. ಅಂದರೆ, ಚಂದ್ರ ಗ್ರಹಣವನ್ನು ವೀಕ್ಷಿಸಲು ನಿಮಗೆ ಕೇವಲ 25 ನಿಮಿಷಗಳು ಮಾತ್ರ ಸಮಯ ಇರುತ್ತದೆ. ಭಾರತದಲ್ಲಿ ಚಂದ್ರೋದಯದ ನಂತರ ಮಾತ್ರ ಗ್ರಹಣ ಗೋಚರಿಸುವುದರಿಂದ, ಸಂಜೆ 6.22 ರಿಂದ 6.47 ರವರೆಗೆ ಭಾಗಶಃ ಗ್ರಹಣವನ್ನು ನೋಡಬಹುದು ಮತ್ತು ಇದು ರಕ್ತಚಂದ್ರ ರೂಪದಲ್ಲಿ ಕಾಣಿಸಬಹುದು.

ಎಲ್ಲೆಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ?

ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್, ಇರಾನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ರಷ್ಯಾ ಮತ್ತು ಇಡೀ ಏಷ್ಯಾದಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ.

ಸೂತಕ ಕಾಲ

ಈ ಗ್ರಹಣವು ಭಾರತದಲ್ಲಿ ಸೂತಕ ಕಾಲವನ್ನು ಸಹ ಹೊಂದಿರುತ್ತದೆ. ಸೂತಕ ಕಾಲ ಬೆಳಗ್ಗೆ 6.20ಕ್ಕೆ ಪ್ರಾರಂಭವಾಗಿ ಗ್ರಹಣ ಮುಗಿಯುವವರೆಗೆ ಮುಂದುವರಿಯುತ್ತದೆ.

ಚಂದ್ರ ಗ್ರಹಣ ವೀಕ್ಷಣೆ ಹೇಗೆ?

ಈ ಚಂದ್ರ ಗ್ರಹಣವನ್ನು ಬರಿ ಕಣ್ಣಿನಿಂದ ವೀಕ್ಷಿಸುವುದು ಸುರಕ್ಷಿತವಾಗಿದೆ. ನೀವು ಸ್ಪಷ್ಟ ಮತ್ತು ಮಾಲಿನ್ಯ ಮುಕ್ತ ಆಕಾಶದಲ್ಲಿದ್ದರೆ ಯಾವುದೇ ಉಪಕರಣಗಳ ಅಗತ್ಯವಿಲ್ಲ. ಹೀಗಾಗಿ, ಪೂರ್ವ ದಿಗಂತದ ಸ್ಪಷ್ಟ ನೋಟವನ್ನು ಹೊಂದಿರುವ ಪ್ರದೇಶವನ್ನು ಆಯ್ಕೆಮಾಡಿ. ತುಂಬಾ ಆಳವಾಗಿ ನೋಡಲು ಬಯಸಿದರೆ, ದೂರದರ್ಶಕ ಅಥವಾ ಬೈನಾಕ್ಯುಲರ್ ಬಳಸಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net