ಸಂಪೂರ್ಣ ಗೋಹತ್ಯೆ ನಿಷೇಧ; ಸುಪ್ರೀಂಕೋರ್ಟ್​ನಿಂದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ಪಡೆದುಕೊಂಡ ವಿಜಯ್ ಸರ್ಕಾರ | Supreme Court

ಸಿಎಂ ವಿಜಯ್
ಸಿಎಂ ವಿಜಯ್
Published on
ನವದೆಹಲಿ: ಬಕ್ರೀದ್ ಹಬ್ಬದ ಮುನ್ನಾದಿನ ಅಥವಾ ಇನ್ನಾವುದೇ ದಿನ ರಾಜ್ಯದ ಯಾವುದೇ ಸ್ಥಳದಲ್ಲೂ ಹಸು ಅಥವಾ ಕರುವನ್ನು ವಧಿಸದಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್(Supreme Court)​ ಸೋಮವಾರ(ಜು. 13) ತಡೆ ನೀಡಿದೆ ಎಂದು ವರದಿಯಾಗಿದೆ.
ಆಗಸ್ಟ್ 1976ರ ಸರ್ಕಾರಿ ಆದೇಶವನ್ನು ಜಾರಿಗೆ ತರುವ ಮೂಲಕ ರಾಜ್ಯಾದ್ಯಂತ ಸಂಪೂರ್ಣ ಗೋಹತ್ಯೆ ನಿಷೇಧಿಸುವಂತೆ ಮೇ 27 ರಂದು ಮದ್ರಾಸ್ ಹೈಕೋರ್ಟ್ ನೀಡಿದ ವಿರುದ್ಧ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಈ ವಿಷಯದಲ್ಲಿ ನೋಟಿಸ್ ಜಾರಿ ಮಾಡಿ, ಮಧ್ಯಂತರ ಆದೇಶದ ಮೂಲಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಶಾಸನವು ನಿರ್ದಿಷ್ಟ ವರ್ಗದ ಗೋವುಗಳನ್ನು ಗೊತ್ತುಪಡಿಸಿದ ಸ್ಥಳಗಳಲ್ಲಿ ವಧೆ ಮಾಡಲು ಅನುಮತಿಸಿರುವಾಗ ಶಾಸನಬದ್ಧ ನಿಬಂಧನೆಗೆ ವಿರುದ್ಧವಾದ ನ್ಯಾಯಾಂಗ ನಿರ್ದೇಶನವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರದ ಪರ ವಕೀರು ವಾದಿಸಿದರು.
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ ಮತ್ತು ಕಸಾಯಿಖಾನೆಗಳನ್ನು ನಿಯಂತ್ರಿಸುವ ಇತರ ನಿಯಮಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳು ಪ್ರಾಣಿಗಳನ್ನು ಎಲ್ಲಿ ಮತ್ತು ಯಾವ ಪರಿಸ್ಥಿತಿಗಳಲ್ಲಿ ವಧೆ ಮಾಡಬಹುದು ಎಂಬುದನ್ನು ಈಗಾಗಲೇ ನಿಯಂತ್ರಿಸುತ್ತವೆ ಆದರೆ ಸಂಪೂರ್ಣ ನಿಷೇಧವನ್ನು ವಿಧಿಸುವುದಿಲ್ಲ. ಅದಕ್ಕೆ ತಿದ್ದುಪಡಿ ಅಗತ್ಯವಿದೆ ಎಂದು ತಮಿಳುನಾಡು ಸರ್ಕಾರ ಸಮರ್ಥಿಸಿಕೊಂಡಿತು.

ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?

ಮೇ 27ರಂದು ಮದ್ರಾಸ್ ಹೈಕೋರ್ಟ್​ನ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮಿನಾರಾಯಣನ್ ಅವರ ವಿಭಾಗೀಯ ಪೀಠವು, ಹಾಲು ಉತ್ಪಾದನೆ ಮತ್ತು ಗ್ರಾಮೀಣ ಆರ್ಥಿಕತೆಯ ಸುಧಾರಣೆಯ ಹಿತದೃಷ್ಟಿಯಿಂದ ಗೋಹತ್ಯೆಯನ್ನು ನಿಷೇಧಿಸುವ 1976ರ ಆದೇಶವನ್ನು ಆಧರಿಸಿ ಬಕ್ರೀದ್ ಹಬ್ಬದ ಮುನ್ನಾದಿನ ಅಥವಾ ಇನ್ನಾವುದೇ ದಿನದಂದು ಯಾವುದೇ ಹಸು ಅಥವಾ ಕರುವನ್ನು ವಧಿಸಬಾರದು ಈ ನಿಟ್ಟಿನಲ್ಲಿ ನಿರ್ದೇಶನ ಪಾಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶ ಹೊರಡಿಸಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net