ವಿಶ್ವದ ಅತ್ಯಂತ ನಿಖರ ಸಮಯ ಪಾಲನೆಯ ಅಗ್ರ 5 ಗ್ಲೋಬಲ್ ಏರ್‌ ಲೈನ್ಸ್​ ಪಟ್ಟಿ ಪ್ರಕಟ: ಏರ್ ಇಂಡಿಯಾಗೂ ಸ್ಥಾನ

ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಅತ್ಯಂತ ನಿಖರ ಸಮಯ ಪಾಲನೆಯ ಅಗ್ರ 5 ಗ್ಲೋಬಲ್ ಏರ್‌ ಲೈನ್ಸ್​ ಪಟ್ಟಿ ಪ್ರಕಟ
  • ಸಿರಿಯಮ್ ಸಂಸ್ಥೆಯ ಜೂನ್ 2026ರ ಸಮಯ ಪಾಲನೆ ಸಾಧನೆ ವರದಿಯಲ್ಲಿ ಜಾಗತಿಕವಾಗಿ 4ನೇ ಶ್ರೇಯಾಂಕ
ಬೆಂಗಳೂರು: ವಿಮಾನಯಾನ ವಿಶ್ಲೇಷಣಾ ಸಂಸ್ಥೆಯಾದ ಸಿರಿಯಮ್ ಪ್ರಕಟಿಸಿರುವ ಜೂನ್ 2026ರ ವರದಿಯಲ್ಲಿ, ಏರ್ ಇಂಡಿಯಾ ಸಂಸ್ಥೆಯು ಜಾಗತಿಕವಾಗಿ 4ನೇ ಅತ್ಯಂತ ನಿಖರ ಸಮಯ ಪಾಲನೆಯ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದು ಏರ್ ಇಂಡಿಯಾದ ಕಾರ್ಯಾಚರಣೆಯ ವಿಶ್ವಾಸಾರ್ಹತೆ ಮತ್ತು ನಿಗದಿತ ವೇಳಾಪಟ್ಟಿಯ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.
ಸಿರಿಯಮ್ ಸಂಸ್ಥೆಯ ಜೂನ್ 2026ರ ಸಮಯ ಪಾಲನೆ ಸಾಧನೆ ವರದಿಯ ಪ್ರಕಾರ, ಏರ್ ಇಂಡಿಯಾ ಆ ತಿಂಗಳಿನಲ್ಲಿ ಕಾರ್ಯಾಚರಣೆ ನಡೆಸಿದ 15,135 ವಿಮಾನಗಳ ಪೈಕಿ ಶೇ.86.85ರಷ್ಟು ವಿಮಾನಗಳನ್ನು ನಿಖರ ಸಮಯಕ್ಕೆ ತಲುಪಿಸುವ ಮೂಲಕ ಆಗಮನ ದರವನ್ನು ದಾಖಲಿಸಿದೆ. ಇಷ್ಟಲ್ಲದೆ, ಸಂಸ್ಥೆಯು ಶೇ.86.23ರಷ್ಟು ವಿಮಾನಗಳ ನಿಖರ ಸಮಯದ ನಿರ್ಗಮನ ದರ ಹಾಗೂ ಶೇ. 99.7ರಷ್ಟು ಕಾರ್ಯಾಚರಣೆ ಪೂರ್ಣಗೊಳಿಸುವಿಕೆಯ ಪ್ರಮಾಣವನ್ನು ದಾಖಲಿಸಿದೆ. ಅಂದರೆ, ನಿಗದಿಯಾಗಿದ್ದ ಬಹುತೇಕ ಎಲ್ಲಾ ವಿಮಾನಗಳು ಯೋಜನೆಯಂತೆಯೇ ಹಾರಾಟ ನಡೆಸಿವೆ.
ಈ ಶ್ರೇಯಾಂಕವು ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಾದ್ಯಂತ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು, ಸುಧಾರಿತ ಜಾಲದ ಯೋಜನೆ ಹಾಗೂ ಉತ್ತಮ ನಿರ್ವಹಣೆಗಾಗಿ ನಿರಂತರವಾಗಿ ಹೂಡಿಕೆ ಮಾಡುತ್ತಿರುವುದರ ಫಲಿತಾಂಶವಾಗಿದೆ. ಭಾರತದ ಎರಡು ದೊಡ್ಡ ವಿಮಾನ ನಿಲ್ದಾಣಗಳಾದ ದೆಹಲಿ ಮತ್ತು ಮುಂಬೈ ಮೂಲಕ ಹೆಚ್ಚಿನ ಸಂಖ್ಯೆಯ ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಕಲ್ಪಿಸುವ ಹಬ್-ಅಂಡ್-ಸ್ಪೋಕ್ ಜಾಲದ ಕ್ಯಾರಿಯರ್ ಆಗಿರುವುದರಿಂದ, ಏರ್ ಇಂಡಿಯಾ ದೊಡ್ಡ ಮಟ್ಟದ ಕಾರ್ಯಾಚರಣೆಯ ಸಂಕೀರ್ಣತೆಯನ್ನು ನಿರ್ವಹಿಸುತ್ತದೆ.
ಈ ಬಿಜಿ ವಿಮಾನ ನಿಲ್ದಾಣಗಳಲ್ಲಿ ಉಂಟಾಗುವ ದಟ್ಟಣೆ ಮತ್ತು ವಾಯು ಸಂಚಾರ ನಿಯಂತ್ರಣದ (ಎಟಿಸಿ) ನಿರ್ಬಂಧಗಳು ಏರ್ ಇಂಡಿಯಾದ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಬಹುದು, ಇದು ಇಡೀ ಜಾಲದ ಮೇಲೆ ಸರಣಿ ಪ್ರಭಾವವನ್ನು ಉಂಟುಮಾಡುತ್ತದೆ. ಕಾಲಾನಂತರದಲ್ಲಿ, ಏರ್ ಇಂಡಿಯಾ ತನ್ನ ವೇಳಾಪಟ್ಟಿಯ ವಿಶ್ವಾಸಾರ್ಹತೆಯನ್ನು ಬಲಪಡಿಸಲು ಮತ್ತು ಗ್ರಾಹಕರಿಗೆ ಹೆಚ್ಚು ಸುಗಮ ಪ್ರಯಾಣದ ಅನುಭವವನ್ನು ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಇವುಗಳಲ್ಲಿ ವಿಮಾನಗಳ ನಿರ್ಗಮನದ ಸಮಯದ ನಿಖರತೆಯನ್ನು ಸುಧಾರಿಸುವುದು, ವಿಮಾನಗಳ ಟರ್ನ್‌ಅರೌಂಡ್ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು, ನೈಜ- ಸಮಯದ ನೆಟ್‌ ವರ್ಕ್ ಮೇಲ್ವಿಚಾರಣೆಯನ್ನು ಹೆಚ್ಚಿಸುವುದು ಮತ್ತು ಕಾರ್ಯಾಚರಣೆಯ ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳಲು ಅನುವು ಮಾಡಿಕೊಡುವುದು ಸೇರಿವೆ.
ಹವಾಮಾನ ವೈಪರೀತ್ಯಗಳು, ವೈಮಾನಿಕ ಕ್ಷೇತ್ರದ ನಿರ್ಬಂಧಗಳು, ವಿಮಾನ ನಿಲ್ದಾಣಗಳ ದಟ್ಟಣೆ ಅಥವಾ ತಾಂತ್ರಿಕ ದೋಷಗಳಂತಹ ಅನಿರೀಕ್ಷಿತ ಅಡೆತಡೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಬೇಕಾದ ಕಾರ್ಯಾಚರಣೆಯ ನಮ್ಯತೆಯನ್ನು ಕಾಯ್ದುಕೊಳ್ಳುವುದು, ಸುದೃಢ ಆಕಸ್ಮಿಕ ಯೋಜನೆಗಳನ್ನು ರೂಪಿಸುವುದು ಮತ್ತು ವಿವಿಧ ವಿಭಾಗಗಳ ನಡುವೆ ಉತ್ತಮ ಸಮನ್ವಯದ ಮೂಲಕ ಹೆಚ್ಚಿನ ಕಾರ್ಯಾಚರಣೆಯ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವತ್ತ ಏರ್ ಇಂಡಿಯಾ ಗಮನ ಹರಿಸಿದೆ.
ಈ ಪ್ರಯತ್ನಗಳು ಅಡೆತಡೆಗಳ ಪ್ರಭಾವವನ್ನು ಕನಿಷ್ಠಗೊಳಿಸಲು, ಜಾಲದ ಸ್ಥಿರತೆಯನ್ನು ಕಾಪಾಡಲು ಮತ್ತು ಗ್ರಾಹಕರು ಹೆಚ್ಚು ವಿಶ್ವಾಸಾರ್ಹತೆಯೊಂದಿಗೆ ತಮ್ಮ ತಲುಪಬೇಕಾದ ಸ್ಥಳಗಳನ್ನು ತಲುಪುವುದನ್ನು ಖಚಿತಪಡಿಸಲು ಸಹಾಯ ಮಾಡುತ್ತವೆ. ಏರ್ ಇಂಡಿಯಾದ ಸುಧಾರಿಸುತ್ತಿರುವ ಕಾರ್ಯಾಚರಣೆಯ ಸಾಧನೆಯು ಪ್ರಸ್ತುತ ನಡೆಯುತ್ತಿರುವ ಅದರ ವ್ಯಾಪಕ ರೂಪಾಂತರದ ಪ್ರಯತ್ನಗಳಿಗೆ ಪೂರಕವಾಗಿದೆ.
ಇದರಲ್ಲಿ ವಿಮಾನ ಸಮೂಹದ ಆಧುನೀಕರಣ, ಗ್ರಾಹಕರ ಅನುಭವದ ಸುಧಾರಣೆ, ಡಿಜಿಟಲ್ ನಾವೀನ್ಯತೆ ಮತ್ತು ಬೆಳೆಯುತ್ತಿರುವ ಹಬ್-ಅಂಡ್-ಸ್ಪೋಕ್ ಜಾಲದ ಮೂಲಕ ಜಾಗತಿಕ ಸಂಪರ್ಕವನ್ನು ಬಲಪಡಿಸುವುದು ಸೇರಿವೆ. ಪ್ರಸ್ತುತ ನಡೆಯುತ್ತಿರುವ ವಿಮಾನ ಸಮೂಹದ ಆಧುನೀಕರಣ ಪ್ರಕ್ರಿಯೆ ತನ್ನ ರೂಪಾಂತರದ ಭಾಗವಾಗಿ ಏರ್ ಇಂಡಿಯಾ ವಿಶ್ವದ ಅತಿ ದೊಡ್ಡ ವಿಮಾನ ಸಮೂಹ ನವೀಕರಣ ಕಾರ್ಯಕ್ರಮಗಳಲ್ಲಿ ಒಂದನ್ನು ಕೈಗೆತ್ತಿಕೊಂಡಿದೆ. ಸಂಸ್ಥೆಯು ಒಟ್ಟು 600 ಹೊಸ ಏರ್‌ ಬಸ್ ಮತ್ತು ಬೋಯಿಂಗ್ ವಿಮಾನಗಳಿಗಾಗಿ ಆರ್ಡರ್ ಮಾಡಿದ್ದು, ಅದೇ ಸಮಯದಲ್ಲಿ ತನ್ನ ಪ್ರಸ್ತುತ ಇರುವ ವಿಮಾನ ಸಮೂಹವನ್ನು ಆಧುನೀಕರಿಸುತ್ತಿದೆ.
ಕಳೆದ ಆರು ತಿಂಗಳಲ್ಲಿ ಏರ್ ಇಂಡಿಯಾ ಮೂರು ಹೊಸ ಬೋಯಿಂಗ್ 787-9 ವಿಮಾನಗಳನ್ನು ತನ್ನ ಸಮೂಹಕ್ಕೆ ಸೇರಿಸಿಕೊಂಡಿದ್ದು, ಹೆಚ್ಚುವರಿ ಬೋಯಿಂಗ್ 787-9 ಮತ್ತು ಏರ್‌ ಬಸ್ A350-1000 ವಿಮಾನಗಳು 2026ರ ಕೊನೆಯ ವೇಳೆಗೆ ಸಂಸ್ಥೆಯನ್ನು ಸೇರಲು ಸಿದ್ಧವಾಗಿವೆ. ಇದಕ್ಕೆ ಸಮಾನಾಂತರವಾಗಿ, ಏರ್ ಇಂಡಿಯಾ ತನ್ನ ಹಳೆಯ ವೈಡ್‌ ಬಾಡಿ (ದೊಡ್ಡ ಗಾತ್ರದ) ವಿಮಾನ ಸಮೂಹದ ನವೀಕರಣ ಪ್ರಕ್ರಿಯೆಯನ್ನು ನಡೆಸುತ್ತಿದೆ.
ಸಂಪೂರ್ಣವಾಗಿ ಹೊಸ ಒಳಾಂಗಣ ವಿನ್ಯಾಸವನ್ನು ಹೊಂದಿರುವ ಅದರ 26 ಹಳೆಯ ಬೋಯಿಂಗ್ 787-8 ವಿಮಾನಗಳ ಪೈಕಿ ಈಗಾಗಲೇ ಎರಡು ವಿಮಾನಗಳು ಕಾರ್ಯಾಚರಣೆಗೆ ವಾಪಾಸ್​ ಆಗಿವೆ. ಇನ್ನು ಮೂರು ವಿಮಾನಗಳು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ ನಲ್ಲಿ ನವೀಕರಣಗೊಳ್ಳುತ್ತಿವೆ. 2026ರ ಅಂತ್ಯದೊಳಗೆ, ಏರ್ ಇಂಡಿಯಾದ ಶೇ.50ಕ್ಕಿಂತ ಅಧಿಕ ವೈಡ್‌ ಬಾಡಿ ವಿಮಾನಗಳು ಹೊಸ ಅಥವಾ ನವೀಕರಿಸಿದ ಒಳಾಂಗಣವನ್ನು ಹೊಂದುವ ನಿರೀಕ್ಷೆಯಿದೆ. ಇದು ಸಂಸ್ಥೆಯ ದೀರ್ಘಾವಧಿಯ ಅಂತಾರಾಷ್ಟ್ರೀಯ ಜಾಲದಾದ್ಯಂತ ಗ್ರಾಹಕರ ಪ್ರಯಾಣದ ಅನುಭವವನ್ನು ಗಣನೀಯವಾಗಿ ಹೆಚ್ಚಿಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net