ನಾಳೆಗೆ ಅಹಮದಾಬಾದ್​ ವಿಮಾನ ದುರಂತಕ್ಕೆ 1 ವರ್ಷ! ಇನ್ನೂ ತಲುಪದ ಅಂತಿಮ ವರದಿ; ಪೈಲಟ್‌ ಸಂಘದಿಂದ ಹೊಸ ಬೇಡಿಕೆ

ಅಹಮದಾಬಾದ್​ ವಿಮಾನ ದುರಂತ
ಅಹಮದಾಬಾದ್​ ವಿಮಾನ ದುರಂತ
Published on

ಪ್ರಮುಖ ಮುಖ್ಯಾಂಶಗಳು

  • ಅಹಮದಾಬಾದ್ ಅಪಘಾತಕ್ಕೆ ನಾಳೆಗೆ ಒಂದು ವರ್ಷ
  • ವರ್ಷವೇ ಕಳೆದರೂ ಇನ್ನೂ ಬಂದಿಲ್ಲ ಅಂತಿಮ ವರದಿ
  • ಅಹಮದಾಬಾದ್ ಅಪಘಾತದ ಬಗ್ಗೆ ಪೈಲಟ್‌ ಸಂಘದಿಂದ ಹೊಸ ಬೇಡಿಕೆ
ನವದೆಹಲಿ: ಭಾರತದ ವಾಯುಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ( Ahmedabad Plane Crash ) ಕಳೆದ ವರ್ಷ ಜೂನ್​ 12ರಂದು ಸಂಭವಿಸಿತು. ಈ ಘಟನೆ ನಡೆದು ನಾಳೆಗೆ ಒಂದು ವರ್ಷ ಆಗಲಿದ್ದು, ಇದರ ಬೆನ್ನಲ್ಲೇ ಪೈಲಟ್​ ಸಂಘಗಳಿಂದ ಹೊಸ ಬೇಡಿಕೆಯೊಂದು ಕೇಳಿಬಂದಿದೆ. 
242 ಪ್ರಯಾಣಿಕರು ಹಾಗೂ 24 ವೈದ್ಯಕೀಯ ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಲ್ಲಿ ಓರ್ವ ಪೈಲಟ್​, ಉದ್ದೇಶಪೂರ್ವಕವಾಗಿಯೇ ಅಂದರೆ, ಬೇಕಂತಲೇ ವಿಮಾನದ ಇಂಧನ ಸ್ವಿಚ್‌ಗಳನ್ನು ಆಫ್ ಮಾಡಿದರು ಎಂಬ ಆಘಾತಕಾರಿ ವಿಚಾರವನ್ನು ಇಟಾಲಿಯನ್ ಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ವರದಿ ಮಾಡಿತು. ವಿಮಾನದ ಕಾಕ್‌ಪಿಟ್‌ನಿಂದ ಬಂದ ಧ್ವನಿ ರೆಕಾರ್ಡಿಂಗ್‌ಗಳ ವಿಶ್ಲೇಷಣೆಯಿಂದ ಈ ಸಂಗತಿ ಬಯಲಾಗಿದ್ದಾಗಿ ಪತ್ರಿಕೆ ಉಲ್ಲೇಖಿಸಿದೆ. ದುರಂತ ನಡೆದು ಒಂದು ವರ್ಷವೇ ಕಳೆದರೂ ಇನ್ನೂ ಅಂತಿಮ ವರದಿ ಹೊರಬರದೆ ಇರುವುದು ಸದ್ಯ ಹಲವರ ಗೊಂದಲಕ್ಕೆ ಕಾರಣವಾಗಿದೆ. 

ಪೈಲಟ್​ ಅನ್ನೇ ದೂಷಿಸುವುದು ಸರಿಯಲ್ಲ! 

ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿ ಇಂದಿಗೆ ಒಂದು ವರ್ಷವಾದರೂ ಆ ಘಟನೆಯ ತೀವ್ರತೆ ಇನ್ನೂ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ. 260ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು. ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಈ ಅಪಘಾತಕ್ಕೆ ಪೈಲಟ್​ ನೇರ ಹೊಣೆ ಎಂಬ ವರದಿಗಳನ್ನು ಇಂದಿಗೂ ಪೈಲಟ್ ಸಂಘಗಳು ಬಲವಾಗಿ ನಿರಾಕರಿಸುತ್ತಿವೆ. 
ಇತ್ತೀಚೆಗೆ, ಪೈಲಟ್‌ಗಳ ಸಂಘಗಳು ಹೊಸ ಬೇಡಿಕೆಯನ್ನು ಮುನ್ನೆಲೆಗೆ ತಂದಿದ್ದು, ಅಹಮದಾಬಾದ್ ವಿಮಾನ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿವೆ. ವಿಮಾನ ಅಪಘಾತಕ್ಕೆ ಪೈಲಟ್ ಅನ್ನೇ ನೇರ ಹೊಣೆ ಮಾಡುವುದು ಸರಿಯಲ್ಲ. ಅನಾಹುತಕ್ಕೆ ಪೈಲಟ್‌ಗಳನ್ನು ಬಲಿಪಶುಗಳನ್ನಾಗಿ ಮಾಡಬಾರದು ಎಂದು ಭಾರತೀಯ ಪೈಲಟ್‌ಗಳ ಒಕ್ಕೂಟ (ಎಫ್‌ಐಪಿ) ಅಧ್ಯಕ್ಷ ಕ್ಯಾಪ್ಟನ್ ಸಿಎಸ್ ರಾಂಧವ ಒತ್ತಿ ಹೇಳಿದ್ದಾರೆ.ಕಾಕ್‌ಪಿಟ್‌ನಲ್ಲಿ ರೆಕಾರ್ಡ್ ಆಗಿರುವ ಕೆಲವು ಸೆಕೆಂಡುಗಳ ಆಡಿಯೊವನ್ನು ಆಧರಿಸಿ ಪೈಲಟ್‌ಗಳನ್ನು ಹೇಗೆ ದೂಷಿಸುತ್ತೀರಿ? ಪೈಲಟ್‌ ಉದ್ದೇಶಪೂರ್ವಕವಾಗಿ ಇಂಜಿನ್‌ಗಳನ್ನು ಆಫ್​ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮದ ಒಂದು ವಿಭಾಗವು ಆತುರದಿಂದ ಲೇಖನಗಳನ್ನು ಬರೆದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. 

ಇಂಧನ ಸ್ವಿಚ್‌ಗೆ ಮಾತ್ರ..

ತನಿಖೆಯನ್ನು ಕೇವಲ ಇಂಧನ ಸ್ವಿಚ್‌ಗೆ ಮಾತ್ರ ಸೀಮಿತಗೊಳಿಸಬಾರದು. ವಿಮಾನದ ವಿದ್ಯುತ್, ಎಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ವ್ಯವಸ್ಥೆಗಳನ್ನು ಸಹ ಸಂಪೂರ್ಣವಾಗಿ ಪರಿಶೀಲಿಸಬೇಕು. ಬೋಯಿಂಗ್ 787 ವಿಮಾನಗಳಲ್ಲಿ ವಿದ್ಯುತ್ ವ್ಯವಸ್ಥೆ, ಲಿಥಿಯಂ ಬ್ಯಾಟರಿಗಳು, ವಿದ್ಯುತ್ ಬೆಂಕಿ, ನೀರಿನ ಸಂಗ್ರಹಣೆ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಹಿಂದೆ ಸಮಸ್ಯೆಗಳು ಉದ್ಭವಿಸಿವೆ. ಅಪಘಾತದ ದಿನದಂದು, ಮತ್ತೊಂದು ವಿಯೆನ್ನಾ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿತ್ತು ಎಂಬುದನ್ನು ಇಲ್ಲಿ ನೆನಪಿಸಿದರು.
ತನಿಖೆಯಲ್ಲಿ ಹೆಚ್ಚಿನ ಪೈಲಟ್‌ಗಳು, ಇಂಜಿನಿಯರ್‌ಗಳು ಮತ್ತು ವಾಯುಯಾನ ಸುರಕ್ಷತಾ ತಜ್ಞರನ್ನು ಸೇರಿಸಬೇಕೆಂದು ಎಫ್‌ಐಪಿ ಒತ್ತಾಯಿಸಿದೆ. ಕಳೆದ ವರ್ಷ ಈ ನಿಟ್ಟಿನಲ್ಲಿ ಸರ್ಕಾರ ಮತ್ತು ತನಿಖಾ ಸಂಸ್ಥೆಗಳಿಗೆ 20ಕ್ಕೂ ಅಧಿಕ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಅಪಘಾತದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ರಾಂಧವಾ ಗಟ್ಟಿಯಾಗಿ ಹೇಳಿದರು. 

ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿತು. 2025, ಜೂನ್​ 12ರಂದು ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ದುರಂತವಾಗಿ ಸಾವಿಗೀಡಾದರು.
* ಎಲ್ಲಿ ದುರಂತ?: ಅಹಮದಾಬಾದ್​ನ ಮೇಘಾನಿ ನಗರ 
* ಎಷ್ಟೊತ್ತಿಗೆ?: ಗುರುವಾರ ಮಧ್ಯಾಹ್ನ 1.38 
* ಯಾವ ವಿಮಾನ?: ಏರ್ ಇಂಡಿಯಾ ಎ1-171 
* ಎಲ್ಲಿಗೆ ಹೊರಟಿತ್ತು?: ಲಂಡನ್​ನ ಗ್ಯಾಟ್ವಿಕ್ ವಿಮಾನ ನಿಲ್ದಾಣ 
 * 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್​ನಲ್ಲಿ ಪತನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net