ಶೀತಲಸಮರದ ದಿನಗಳಲ್ಲಿ ಸದ್ದಾಂರ ಇರಾಕ್ ಸೋವಿಯೆತ್ ಯೂನಿಯನ್ ಪರವಾಗಿಯೂ, ಅರಸ ಮಹಮದ್ ರೆಜಾ ಷಾ ಪಹ್ಲವಿಯವರ ಇರಾನ್ ಅಮೆರಿಕಾ ಪರವಾಗಿಯೂ ಇದ್ದವು. 1979ರ ಫೆಬ್ರವರಿಯಲ್ಲಿ ಇರಾನ್ನಲ್ಲಿ ಇಸ್ಲಾಮಿಕ್ ಕ್ರಾಂತಿಯಾಗಿ, ಅರಸ ರೆಜಾ ಷಾ ಪದಚ್ಯುತಗೊಂಡು, ಶಿಯಾ ಧಾರ್ವಿುಕ ಮೂಲಭೂತವಾದಿಗಳ ಸರ್ಕಾರ ಸ್ಥಾಪನೆಯಾದಾಗ ಅಮೆರಿಕಾಗೆ ಭಾರಿ ಮುಖಭಂಗ. ತನ್ನ ಪರವಾಗಿನ ಒಂದು ಪ್ರಮುಖ ಸತ್ತೆ ಕುಸಿದು, ತನ್ನನ್ನು ಮಹಾ ಸೈತಾನನೆಂದು ಹೀಗಳೆಯುವ ಮೂಲಭೂತವಾದಿ ಸರ್ಕಾರವನ್ನು ಅಮೆರಿಕಾ ಕೈಕೈ ಹಿಸುಕಿಕೊಂಡು ಸಹಿಸಿಕೊಂಡಿತ್ತು. ಅಯತೊಲ್ಲಾ ಖೊಮೇನಿ ಸರ್ಕಾರ ಸೋವಿಯೆತ್ ಯೂನಿಯನ್ ಅನ್ನು ದ್ವೇಷಿಸಿದ್ದಷ್ಟೇ ಅಮೆರಿಕಾಗೆ ತುಸು ನೆಮ್ಮದಿಕಾರಕ ವಿಷಯ. ಆದಾಗ್ಯೂ 1980ರ ಸೆಪ್ಟೆಂಬರ್ನಲ್ಲಿ ಇರಾಕ್ನ ಸದ್ದಾಂ ಹುಸೇನ್ ಇರಾನ್ ವಿರುದ್ಧ ಯುದ್ಧ ಆರಂಭಿಸಿದಾಗ ಆತನ ಮೂಲಕ ಇರಾನ್ನ ಮೂಲಭೂತವಾದಿ ಸರ್ಕಾರವನ್ನು ಕೊನೆಗಾಣಿಸಬಹುದೆಂದು ರ್ತಸಿದ ಅಮೆರಿಕಾ ಆತನ ಪರವಾಗಿ ನಿಂತಿತು. ಸದ್ದಾಂಗೆ ಏಕಕಾಲದಲ್ಲಿ ಎರಡೂ ಮಹಾಶಕ್ತಿಗಳ ಬೆಂಬಲ! ಆದಾಗ್ಯೂ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸಿದಾಗ ಅಮೆರಿಕಾ ಸದ್ದಾಂಗೆ ರಾಸಾಯನಿಕ ಅಸ್ತ್ರಗಳನ್ನು ರಹಸ್ಯವಾಗಿ ಪೂರೈಸಿತು. ಅವುಗಳನ್ನು ಸದ್ದಾಂ ಇರಾನ್ ವಿರುದ್ಧ ಬಳಸಿದರೂ ರಣರಂಗದಲ್ಲಿ ಆತನ ಶಕ್ತಿಯೇನೂ ಹೆಚ್ಚಾಗಲಿಲ್ಲ. ಆತ ಅಣ್ವಸ್ತ್ರಗಳನ್ನು ಪಡೆಯಲು ಮಾಡಿದ ಪ್ರಯತ್ನವನ್ನು ಇಸ್ರೇಲ್ 1981ರ ಜೂನ್ 7ರಂದು ಒಸಿರಾಕ್ ರಿಯಾಕ್ಟರ್ ಮೇಲೆ ದಾಳಿಯೆಸಗಿ ನಿಷ್ಪಲಗೊಳಿಸಿತ್ತು. ಅಂತಹ ಸನ್ನಿವೇಶದಲ್ಲಿ ಸದ್ದಾಂಗೆ ಅಣು ತಂತ್ರಜ್ಞಾನವನ್ನು ಅಮೆರಿಕಾ ಪೂರೈಸಿಲ್ಲ ಎಂದು, ಕೊನೇಪಕ್ಷ ರಹಸ್ಯ ಸಹಕಾರ ನೀಡಿಲ್ಲವೆಂದು ಖಾತರಿಯಾಗಿ ಹೇಳಲಾಗದು. ಅದೇ ದಿನಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗೆ ಅಮೆರಿಕಾ ತೆರೆಯ ಹಿಂದೆ ಸಹಕಾರ ನೀಡಿದ್ದನ್ನು ನಾವು ಮರೆಯಬಹುದೇ?