US Midterm Results: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡನ್ನೂ ವಶಪಡಿಸಿಕೊಂಡು ರಿಪಬ್ಲಿಕನ್ ಪಕ್ಷಕ್ಕೆ ಆಘಾತ ನೀಡಿದ ಬೆನ್ನಲ್ಲೇ, ಭಾರತದ ರಾಜಕೀಯ ವಲಯದಲ್ಲೂ ದೊಡ್ಡ ಬಿರುಗಾಳಿ ಎದ್ದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಕ್ಷದ ಈ ಹಿನ್ನಡೆಯನ್ನು ಪ್ರಸ್ತಾಪಿಸಿರುವ ನಮ್ಮ ದೇಶದ ವಿರೋಧ ಪಕ್ಷಗಳು, ಮುಂಬರುವ ದಿನಗಳಲ್ಲಿ ಬಿಜೆಪಿಗೂ ಇದೇ ಗತಿ ಬರಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ ವಿರೋಧ ಪಕ್ಷಗಳ ಈ ಹೇಳಿಕೆಗಳನ್ನು ತಳ್ಳಿಹಾಕಿರುವ ಆಡಳಿತಾರೂಢ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ರಾಜಕೀಯ ಸ್ಥಾನಮಾನ ಅಚಲವಾದದ್ದು ಎಂದು ತಿರುಗೇಟು ನೀಡಿದೆ.
ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಣ) ಹಾಗೂ ಎಐಎಂಐಎಂ ನಾಯಕರು ಅಮೆರಿಕದ ಫಲಿತಾಂಶಗಳನ್ನು ಜಾಗತಿಕ ಮಟ್ಟದಲ್ಲಿ ಬಲಪಂಥೀಯ ಶಕ್ತಿಗಳ ವಿರುದ್ಧ ವ್ಯಕ್ತವಾದ ಜನಾಭಿಪ್ರಾಯ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ವಕ್ತಾರ, ರಾಜ್ಯಸಭಾ ಸದಸ್ಯ ಪವನ್ ಖೇರಾ ಮಾತನಾಡಿ, ಅಮೆರಿಕದಲ್ಲಿ ಟ್ರಂಪ್ ಅಲ್ಲಿನ ಮೋದಿಯಾಗಿದ್ದರು, ನಮ್ಮ ದೇಶದಲ್ಲಿರುವವರು ಇಲ್ಲಿನ ಟ್ರಂಪ್. ಅಲ್ಲಿ ಅವರಿಗೆ ಉಂಟಾದ ಪರಿಸ್ಥಿತಿಯೇ ಇಲ್ಲೂ ಮರುಕಳಿಸಲಿದೆ. ಚುನಾವಣೆಯ ಮೂಲಕವೇ ಅಧಿಕಾರದಿಂದ ನಿರ್ಗಮಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇತ್ತೀಚೆಗಷ್ಟೇ ಆಮ್ ಆದ್ಮಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಪ್ರಿಯಾಂಕಾ ಕಕ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, Today POTUS. Tomorrow LOTUS (ಇಂದು ಅಮೆರಿಕ ಅಧ್ಯಕ್ಷ, ನಾಳೆ ಕಮಲ) ಎಂದು ಬರೆಯುವ ಮೂಲಕ ಬಿಜೆಪಿಯ ಚಿಹ್ನೆಯನ್ನು ಗುರಿಯಾಗಿಸಿಕೊಂಡು ಲೇವಡಿ ಮಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಪ್ರಕ್ರಿಯಿಸಿದರೆ, ಕುಮಾರಿ ಸೆಲ್ಜಾ, ಜಗತ್ತಿನ ಯಾವುದೇ ಸರ್ವಾಧಿಕಾರಿಯಾದರೂ ಅಷ್ಟೆ ಅಂತ್ಯ ನಿಶ್ಚಿತ. ದೇಶದಲ್ಲೂ ಅಂತಹ ಸಮಯ ಬಂದೇ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಈ ಫಲಿತಾಂಶವನ್ನು ಪ್ರಧಾನಿ ಮೋದಿಯವರ ಒಂದು ದೇಶ, ಒಂದು ಚುನಾವಣೆ ನೀತಿಗೆ ಲಿಂಕ್ ಮಾಡಿದ್ದಾರೆ. ಅಮೆರಿಕದಂತೆ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಧ್ಯಂತರ ಸೋಲು ಅನುಭವಿಸುವ ಭಯದಿಂದ ಮೋದಿ ಅವರು ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ ನಡೆಸಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ಟ್ರಂಪ್ರನ್ನು ಕಸದ ಬುಟ್ಟಿಗೆ ಹಾಕುತ್ತಿರುವ ಎಐ ವಿಡಿಯೋ ಒಂದನ್ನು ಹಂಚಿಕೊಂಡು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಮಿಚಿಗನ್ನಿಂದ ಸೆನೆಟರ್ ಆಗಿ ಆಯ್ಕೆಯಾದ ಅಬ್ದುಲ್ ಅಲ್-ಸಯ್ಯದ್ ಉದಾಹರಣೆಯನ್ನು ನೀಡಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಅಮೆರಿಕದಲ್ಲಿ ಮುಸ್ಲಿಂ ನಾಯಕ ಸೆನೆಟರ್ ಆಗಿ ಗೆದ್ದಿದ್ದಾರೆ. ಆದರೆ ಇಲ್ಲಿದ್ದರೆ ಅಬ್ದುಲ್ ಪಂಕ್ಚರ್ ಹಾಕುತ್ತಾನೆ ಎಂದು ಬಿಜೆಪಿ ಹೇಳುತ್ತದೆ, ಅಬ್ದುಲ್ ರತ್ನಗಂಬಳಿ ಹಾಸುತ್ತಾನೆ ಎಂದು ಸಮಾಜವಾದಿ ಪಾರ್ಟಿ ಹೇಳುತ್ತದೆ. ಆದರೆ ಈಗ ಯುಪಿಯಲ್ಲಿ ಅಬ್ದುಲ್ ಯಾರ ಮುಂದೆಯೂ ತಲೆಬಾಗದೆ ಶಾಸಕನಾಗಲಿದ್ದಾನೆ ಎಂದು ಮುಂಬರುವ ಉತ್ತರ ಪ್ರದೇಶ ಚುನಾವಣೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು.
ವಿರೋಧ ಪಕ್ಷಗಳ ಈ ಎಲ್ಲಾ ರೀತಿಯ ಹೇಳಿಕೆಗಳನ್ನು ಖಂಡಿಸಿರುವ ಬಿಜೆಪಿ ನಾಯಕರು, ಅಮೆರಿಕ ಅಧ್ಯಕ್ಷರು ಬರಬಹುದು, ಹೋಗಬಹುದು. ಆದರೆ ಭಾರತದಲ್ಲಿ ಕಮಲ ಶಾಶ್ವತವಾಗಿ ಅರಳಿರಲಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಎಲ್ಲೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅಮೆರಿಕದ ಆಂತರಿಕ ರಾಜಕೀಯ ಪ್ರಕ್ರಿಯೆಯನ್ನು ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಹೋಲಿಸುವುದು ವಿಪಕ್ಷಗಳ ರಾಜಕೀಯ ಹತಾಶೆಯನ್ನು ತೋರಿಸುತ್ತದೆ ಎಂದು ಕಮಲ ನಾಯಕರು ಕಿಡಿಕಾರಿದ್ದಾರೆ(ಏಜೆನ್ಸೀಸ್).