ಮಧುರಾಂತಕಂ, ಧಾರಾಪುರಂ ಉಪಚುನಾವಣೆ: ಟಿವಿಕೆಗೆ ಸೆಡ್ಡು ಹೊಡೆದು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ ಸಿಪಿಎಂ-ಸಿಪಿಐ! | Tamil Nadu ByPolls

 Tamil Nadu ByPolls | ಟಿವಿಕೆಗೆ ಸೆಡ್ಡು ಹೊಡೆದು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ ಸಿಪಿಎಂ-ಸಿಪಿಐ!
Tamil Nadu ByPolls | ಟಿವಿಕೆಗೆ ಸೆಡ್ಡು ಹೊಡೆದು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ ಸಿಪಿಎಂ-ಸಿಪಿಐ!
Published on
ಚೆನ್ನೈ: ಅಕ್ಟೋಬರ್ 6 ರಂದು ನಡೆಯಲಿರುವ ತಮಿಳುನಾಡಿನ ವಿಧಾನಸಭಾ ಉಪಚುನಾವಣೆಗೆ (Tamil Nadu ByPolls) ಸಂಬಂಧಿಸಿದಂತೆ ಎಡಪಕ್ಷಗಳು ಪ್ರಮುಖ ಮೈತ್ರಿಕೂಟಗಳಿಂದ ಹೊರಬಂದು, ಮಂಗಳವಾರ ತಮ್ಮ ಅಭ್ಯರ್ಥಿಗಳನ್ನು ಘೋಷಿಸಲು ನಿರ್ಧರಿಸಿವೆ. ಈ ಮೂಲಕ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮೈತ್ರಿಕೂಟಕ್ಕೆ ನೇರ ಸವಾಲೆಸೆಯಲು ಎಡರಂಗ ಸಜ್ಜಾಗಿದೆ.
ಈ ಹಿಂದೆ ಡಿಎಂಕೆ ಮೈತ್ರಿಯಲ್ಲಿದ್ದ ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳು, ಮೇ ತಿಂಗಳಲ್ಲಿ ಸರ್ಕಾರ ರಚನೆ ವೇಳೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿದ್ದವು.
ಚುನಾವಣಾ ಫಲಿತಾಂಶ ಬಂದ ಕೇವಲ ಒಂದು ತಿಂಗಳಲ್ಲೇ ಎಐಎಡಿಎಂಕೆ ತೊರೆದು ಟಿವಿಕೆ ಸೇರಿದ ಇಬ್ಬರು ಮಾಜಿ ಶಾಸಕರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿರುವುದನ್ನು ವಿರೋಧಿಸಿ, ಆಡಳಿತಾರೂಢ ಟಿವಿಕೆಗೆ ಬೆಂಬಲ ನೀಡದಿರಲು ಎಡಪಕ್ಷಗಳು ನಿರ್ಧರಿಸಿವೆ. ಹೀಗಾಗಿ, ಕಣದಲ್ಲಿ ತಮ್ಮ ಸ್ವತಂತ್ರ ಬಲವನ್ನು ಸಾಬೀತುಪಡಿಸಲು ಎಡ ಪಕ್ಷಗಳು ಪ್ರತ್ಯೇಕ ಎಡರಂಗವಾಗಿ ಸ್ಪರ್ಧಿಸುತ್ತಿದ್ದು, ಮಧುರಾಂತಕಂ ಮತ್ತು ಧಾರಾಪುರಂ ಕ್ಷೇತ್ರಗಳಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಸೆಣಸಾಡಲಿವೆ.
ಪರಿಶಿಷ್ಟ ಜಾತಿಗೆ (SC) ಕಾಯ್ದಿರಿಸಲ್ಪಟ್ಟಿರುವ ಈ ಎರಡೂ ಕ್ಷೇತ್ರಗಳ ಪೈಕಿ ಮಧುರಾಂತಕಂನಲ್ಲಿ ಸಿಪಿಐ(ಎಂ) ಹಾಗೂ ಧಾರಾಪುರಂನಲ್ಲಿ ಸಿಪಿಐ ಸ್ಪರ್ಧಿಸಲಿವೆ. ಟಿವಿಕೆ ಪಕ್ಷದಿಂದ ಎಐಎಡಿಎಂಕೆಯಿಂದ ಪಕ್ಷಾಂತರಗೊಂಡ ಮರಗಥಂ ಕುಮಾರವೇಲ್ (ಮಧುರಾಂತಕಂ) ಮತ್ತು ಪಿ. ಸತ್ಯಭಾಮಾ (ಧಾರಾಪುರಂ) ಕಣಕ್ಕಿಳಿದಿದ್ದಾರೆ.
ಎಐಎಡಿಎಂಕೆ ಪರವಾಗಿ ಮಧುರಾಂತಕಂನಿಂದ ಮಾಜಿ ಶಾಸಕಿ ಕಣಿತಾ ಸಂಪತ್ (ಇವರು 2011-2016 ರವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು) ಹಾಗೂ ಧಾರಾಪುರಂನಿಂದ ಕೆ. ಭಾನುಮತಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಡಿಎಂಕೆ ಅಭ್ಯರ್ಥಿಗಳಾಗಿ ಮಧುರಾಂತಕಂಗೆ ಐ. ಪರಂದಾಮನ್ ಮತ್ತು ಧಾರಾಪುರಂಗೆ ಎಸ್. ಸುಗನ್ಯಾ ಆಯ್ಕೆಯಾಗಿದ್ದರೆ, ನಟ ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ ಕ್ರಮವಾಗಿ ಕೆ. ಜಾನಕಿ ರಾಮನ್ ಮತ್ತು ಎಂ. ಕಾರ್ತಿಕಾ ಅವರನ್ನು ತಮ್ಮ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

ಎಐಎಡಿಎಂಕೆ ಶಾಸಕರನ್ನೇ ಕಣಕ್ಕಿಳಿಸಿದ ಸಿಎಂ ವಿಜಯ್!

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಟಿವಿಕೆ ಪಕ್ಷವು, ಮಧುರಾಂತಕಂ ಮತ್ತು ದಾರಾಪುರಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎಐಎಡಿಎಂಕೆ ಮಾಜಿ ನಾಯಕಿಯರಾದ ಮರಗತಂ ಕುಮಾರವೇಲ್ ಮತ್ತು ಪಿ. ಸತ್ಯಭಾಮಾ ಅವರನ್ನೇ ಕಳೆದ ಗುರುವಾರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದೆ.

ಮೈತ್ರಿಕೂಟಕ್ಕೆ ಹೊಸ ಹೆಸರು!

ಕಳೆದ ಏಪ್ರಿಲ್​​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ, ಸ್ಪಷ್ಟ ಬಹುಮತಕ್ಕೆ ಕೊರತೆ ಉಂಟಾಗಿತ್ತು. ಹೀಗಾಗಿ ವಿಜಯ್ ಕಾಂಗ್ರೆಸ್, ವಿಸಿಕೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಎಡಪಕ್ಷಗಳ ಬೆಂಬಲವನ್ನು ನೆಚ್ಚಿಕೊಳ್ಳಬೇಕಾಯಿತು. ಬುಧವಾರವಷ್ಟೇ ವಿಜಯ್ ನೇತೃತ್ವದ ಮೈತ್ರಿಕೂಟವು ತನ್ನ ಒಕ್ಕೂಟಕ್ಕೆ ಸೆಕ್ಯುಲರ್ ಸೋಷಿಯಲ್ ಜಸ್ಟಿಸ್ ವಿಕ್ಟರಿ ಎಂದು ಹೆಸರಿಟ್ಟು, ವಿಜಯ್ ಅವರನ್ನು ತನ್ನ ನಾಯಕ ಎಂದು ಘೋಷಿಸಿತ್ತು.
ಈ ಮೈತ್ರಿಕೂಟವು ಎಲ್ಲಾ ಹಂತಗಳಲ್ಲೂ ಕೋಮುವಾದಿ ಶಕ್ತಿಗಳನ್ನು ವಿರೋಧಿಸುವುದಾಗಿ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದೆ. ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವೇ ತನ್ನ ಮೂಲ ತತ್ವಗಳಾಗಿರಲಿವೆ ಎಂದು ಹೇಳಿದೆ. ಎಲ್ಲೆಲ್ಲಿ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯ ಇರುತ್ತದೆಯೋ, ಅಲ್ಲೆಲ್ಲಾ ಜಯ ಸದಾ ಸಾರ್ವಜನಿಕರಿಗೆ ಸಿಗುತ್ತದೆ ಎಂದು ಸಚಿವ ಆದವ್ ಅರ್ಜುನಾ ಹೇಳಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net