ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಫೈಲ್ ರೀ ಓಪನ್...ಬಂಗಾಳದ ಪ್ರತಿ ಬ್ಲಾಕ್‌ನಲ್ಲೂ ಮಹಿಳಾ ಪೊಲೀಸ್ ಠಾಣೆ ತೆರೆಯುತ್ತೇವೆ ಎಂದ ಪ್ರಧಾನಿ ಮೋದಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡೆಸುತ್ತಿರುವ ಲೂಟಿ, ಸುಳ್ಳಿನ ರಾಜಕೀಯ ಮತ್ತು ಭಯದ ಆಳ್ವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದ್ದು, ಬಂಗಾಳದಿಂದ ಈಗ ಭಯ ನಿರ್ಗಮಿಸಿ, ನಂಬಿಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು.
ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಕುಶ್ಮಂಡಿಯಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಳೆದ 15 ವರ್ಷಗಳಲ್ಲಿ ಟಿಎಂಸಿ ಸರ್ಕಾರ ಬಂಗಾಳಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ಈ ಅವಧಿಯಲ್ಲಿ ಆಡಳಿತ ಪಕ್ಷದವರು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಏಕೆಂದರೆ ಅವರ ಸುಳ್ಳುಗಳು ಮತ್ತು ದ್ರೋಹದ ಖಾತೆಗಳು ಬಹಿರಂಗಗೊಳ್ಳುತ್ತವೆ. ಟಿಎಂಸಿ ಅಭಿವೃದ್ಧಿಪಡಿಸಿರುವ ಏಕೈಕ ಮಾದರಿಯೆಂದರೆ ಅದು ಸಿಂಡಿಕೇಟ್ ಸರ್ಕಾರ, ಇಲ್ಲಿ ಸರ್ಕಾರವೇ ಸಿಂಡಿಕೇಟ್ ಮತ್ತು ಸಿಂಡಿಕೇಟ್ ಮೂಲಕವೇ ಸರ್ಕಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಟಿಎಂಸಿಯು ತ್ರಿಪುರ, ಅಸ್ಸಾಂ ಮತ್ತು ಗೋವಾ ರಾಜ್ಯಗಳ ಚುನಾವಣೆಗೆ ಸ್ಪರ್ಧಿಸಲು ಹೋಗಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ, ಅಲ್ಲಿ ಅವರಿಗೆ ಯಾರೂ ಮತ ಹಾಕುತ್ತಿಲ್ಲ ಎಂದರು. ನೆರೆಯ ರಾಜ್ಯಗಳು ಅವರನ್ನು ಸರಿಯಾಗಿ ಗುರುತಿಸಿವೆ. ಅಲ್ಲಿ ಅಪ್ರಾಮಾಣಿಕತೆ ಮತ್ತು ದರೋಡೆಕೋರತನ ನಡೆಯುವುದಿಲ್ಲ. ಟಿಎಂಸಿಗೆ ಯಾವುದೇ ದೃಷ್ಟಿಕೋನ, ನೀತಿ ಅಥವಾ ಸ್ಪಷ್ಟ ಉದ್ದೇಶಗಳಿಲ್ಲದ ಕಾರಣ ಅವರಿಗೆ ಬಂಗಾಳದ ಹೊರಗೆ ಗೆಲ್ಲಲು ಸಾಧ್ಯವಿಲ್ಲ ಎಂದು ಕುಟುಕಿದರು.

ಆರ್‌ಜಿ ಕರ್ ಪ್ರಕರಣದ ಬಗ್ಗೆ ಮೋದಿ ಮಾತು

ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಮೇಲೆ ನಡೆದ ಕ್ರೌರ್ಯದ ಬಗ್ಗೆ ಮಾತನಾಡಿದ ಪ್ರಧಾನಿ, ಈ ಘಟನೆಯ ವಿರುದ್ಧ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ಫುಟ್‌ಬಾಲ್ ಅಭಿಮಾನಿಗಳು ವೈಷಮ್ಯ ಮರೆತು ಬೀದಿಗೆ ಇಳಿದಿದ್ದನ್ನು ಶ್ಲಾಘಿಸಿದರು. ಬಂಗಾಳದ ಹೆಣ್ಣುಮಕ್ಕಳ ರಕ್ಷಣೆಗಾಗಿ ಮೋದಿ ಒಂದು ಗ್ಯಾರಂಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಹೆಣ್ಣುಮಕ್ಕಳ ಮೇಲಿನ ಪ್ರತಿಯೊಂದು ಅನ್ಯಾಯ ಮತ್ತು ಅತ್ಯಾಚಾರ ಪ್ರಕರಣಗಳ ಫೈಲ್‌ಗಳನ್ನು ಪುನಃ ತೆರೆಯಲಾಗುವುದು. ಅಪರಾಧಿಗಳನ್ನು ಅಥವಾ ಅವರನ್ನು ರಕ್ಷಿಸುವವರನ್ನು ಯಾರೂ ಕಾಪಾಡಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದರು.

ಬಿಜೆಪಿ ಪ್ರಣಾಳಿಕೆಯ ಅಂಶಗಳು

1. ವಿಶೇಷ ತನಿಖೆ: ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ಹೈಕೋರ್ಟ್‌ನ ನಿವೃತ್ತ ಮಹಿಳಾ ನ್ಯಾಯಾಧೀಶರಿಗೆ ವಹಿಸಲಾಗುವುದು.
2. ಮಹಿಳಾ ಪೊಲೀಸ್ ಠಾಣೆ: ರಾಜ್ಯದ ಪ್ರತಿ ಬ್ಲಾಕ್ ಮಟ್ಟದಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು.
ಬಂಗಾಳದ ವಿಧಾನಸಭಾ ಚುನಾವಣೆಯು ಏಪ್ರಿಲ್ 23 ಮತ್ತು 29 ರಂದು ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಯುದ್ಧವು ಭಯವನ್ನು ಸೋಲಿಸುವ ಮತ್ತು ನಂಬಿಕೆಯ ಮೇಲೆ ಬಂಗಾಳವನ್ನು ಮುನ್ನಡೆಸುವ ಯುದ್ಧವಾಗಿದೆ ಎಂದು ಮೋದಿ ತಿಳಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net