ಟಿಎಂಸಿ ವಿಭಜನೆ ಬಹುತೇಕ ಫಿಕ್ಸ್​..? 59 ಶಾಸಕರ ಬೆಂಬಲದೊಂದಿಗೆ ವಿಧಾನಸಭೆಗೆ ತೆರಳಿದ ಬಂಡಾಯ ನಾಯಕ ರಿತಬ್ರತಾ ಬ್ಯಾನರ್ಜಿ | TMC Rebellion

TMC Rebellion | ಟಿಎಂಸಿ ವಿಭಜನೆ ಬಹುತೇಕ ಫಿಕ್ಸ್​..?
TMC Rebellion | ಟಿಎಂಸಿ ವಿಭಜನೆ ಬಹುತೇಕ ಫಿಕ್ಸ್​..?
Published on
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್​​ನಿಂದ ಉಚ್ಚಾಟನೆಗೊಂಡಿರುವ ಶಾಸಕ ರಿತಬ್ರತಾ ಬ್ಯಾನರ್ಜಿ ಬುಧವಾರ 59 ಶಾಸಕರ ಸಹಿ ಇರುವ ಪತ್ರದೊಂದಿಗೆ ರಾಜ್ಯ ವಿಧಾನಸಭೆಗೆ ತೆರಳಿರುವುದು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯಿಂದಾಗಿ ಟಿಎಂಸಿ ಒಳಗಿನ ಆಂತರಿಕ ಬೇಗುದಿ (TMC Rebellion) ಬೀದಿಗೆ ಬಂದಂತಾಗಿದ್ದು, ಪಕ್ಷ ಇಬ್ಬಾಗವಾಗುವತ್ತ ಸಾಗುತ್ತಿದೆಯೇ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.
ಈ ಊಹಾಪೋಹಗಳ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನ ಹಲವು ಶಾಸಕರು ಒಬ್ಬರ ಹಿಂದೆ ಒಬ್ಬರಂತೆ ವಿಧಾನಸಭೆಗೆ ಆಗಮಿಸುತ್ತಿರುವುದು ಕಂಡುಬಂದಿದ್ದು, ಈ ಸಭೆಯ ಉದ್ದೇಶದ ಕುರಿತು ಹರಡಿರುವ ವದಂತಿಗಳಿಗೆ ರೆಕ್ಕೆ ಪುಕ್ಕ ಸಿಕ್ಕಂತಾಗಿದೆ. ಸ್ಥಳದಲ್ಲಿದ್ದ ಯಾವೊಬ್ಬ ಶಾಸಕರೂ ಸಹ ತಾವು ಬಂದಿರುವ ಕಾರಣವನ್ನಾಗಲಿ ಅಥವಾ ಪಕ್ಷದೊಳಗಿನ ಆಂತರಿಕ ಅಸಮಾಧಾನದ ವರದಿಗಳನ್ನಾಗಲಿ ಬಹಿರಂಗವಾಗಿ ಒಪ್ಪಿಕೊಂಡಿಲ್ಲ ಮತ್ತು ಆ ವಿಷಯವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ರಿತಬ್ರತಾ ಬ್ಯಾನರ್ಜಿಯನ್ನು ಬೆಂಬಲಿಸಿ ಸಹಿ ಹಾಕಿರುವ 59 ಶಾಸಕರಲ್ಲಿ ತಾವೂ ಒಬ್ಬರು ಎಂದು ತೃಣಮೂಲ ಕಾಂಗ್ರೆಸ್‌ನ ಮತ್ತೊಬ್ಬ ಬಂಡಾಯ ಶಾಸಕ ಸಂದೀಪನ್ ಸಹಾ ತಿಳಿಸಿದ್ದಾರೆ. ಈ ಬೆಳವಣಿಗೆಗಳನ್ನು ರಾಜಕೀಯ ವಿಶ್ಲೇಷಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತೃಣಮೂಲ ಕಾಂಗ್ರೆಸ್‌ನಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಹಾಗೆಯೇ, ಶಾಸಕರು ಮಾಡಿರುವ ಎನ್ನಲಾದ ಸಹಿ ಪತ್ರದ ನಿಖರವಾದ ಉದ್ದೇಶವೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಇಡೀ ಪ್ರಸಂಗವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದರೂ, ಆಡಳಿತ ಪಕ್ಷದಲ್ಲಿ ಒಡಕ್ಕುಂಟಾಗಬಹುದು ಎನ್ನುವುದಕ್ಕೆ ಯಾವುದೇ ಬಲವಾದ ಪುರಾವೆಗಳು ಲಭ್ಯವಾಗಿಲ್ಲ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳನ್ನು ಗೆದ್ದಿದ್ದ ತೃಣಮೂಲ ಕಾಂಗ್ರೆಸ್‌ಗೆ ಈ ಸಂಭಾವ್ಯ ವಿಭಜನೆ ದೊಡ್ಡ ಹಿನ್ನಡೆಯನ್ನು ಉಂಟುಮಾಡಲಿದ್ದು, ಒಂದು ವೇಳೆ ಈ ಊಹಾಪೋಹ ನಿಜವಾದಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಂಖ್ಯಾಬಲವು ವಿಧಾನಸಭೆಯಲ್ಲಿ ಕೇವಲ 20ಕ್ಕೆ ಕುಸಿಯಲಿದೆ.

ವಿರೋಧ ಪಕ್ಷದ ನಾಯಕನ ಆಯ್ಕೆಯೇ ಈ ಕಿಚ್ಚಿಗೆ ಕಾರಣ!

ಮೂಲಗಳ ಪ್ರಕಾರ, ಹೊಸದಾಗಿ ಆಯ್ಕೆಯಾಗಿರುವ ಬಹುತೇಕ ಟಿಎಂಸಿ ಶಾಸಕರು ಪಕ್ಷದಿಂದ ಉಚ್ಛಾಟಿತಗೊಂಡಿರುವ ರಿತಬ್ರತಾ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ಹೈಕಮಾಂಡ್ ಮಾತ್ರ ಹಿರಿಯ ನಾಯಕ ಶೋಭನ್‌ದೇವ್ ಚಟ್ಟೋಪಾಧ್ಯಾಯ ಅವರ ಹೆಸರನ್ನು ಮುಂಚೂಣಿಗೆ ತಂದಿತ್ತು. ಇದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇತ್ತ, ಬಂಡಾಯದ ನೇತೃತ್ವ ವಹಿಸಿದ್ದಾರೆ ಎನ್ನಲಾದ ಶಾಸಕ ರಿತಬ್ರತಾ ಬ್ಯಾನರ್ಜಿ ಮಾತ್ರ ಪಕ್ಷ ಇಬ್ಬಾಗವಾಗುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಶಾಸಕರು ಪ್ರತ್ಯೇಕ ಪಕ್ಷ ಕಟ್ಟುತ್ತಿದ್ದಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಈ ಹಂತದಲ್ಲಿ ಏನನ್ನೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಿಕ್ಕಟ್ಟು ಇರುವುದು ನಿಜ ಎಂದ ಮಮತಾ ಬ್ಯಾನರ್ಜಿ!

ಪಕ್ಷದೊಳಗೆ ಭಿನ್ನಮತ ಇರುವುದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಆಪ್ತ ಕುನಾಲ್ ಘೋಷ್ ಸೋಮವಾರ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ನಮ್ಮ ಟಿಎಂಸಿ ಶಾಸಕರಿಗೆ ಪೊಲೀಸ್ ಪ್ರಭಾವ ಬಳಸಿ ಬೆದರಿಕೆ ಹಾಕಲಾಗುತ್ತಿದೆ ಮತ್ತು ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಂದೆಡೆ ಕುನಾಲ್ ಘೋಷ್, ಬಂಡಾಯ ಶಾಸಕರು ದಾರಿ ತಪ್ಪಬಾರದು ಎಂದು ಕೈಮುಗಿದು ಮನವಿ ಮಾಡಿದ್ದಾರೆ. ಅಲ್ಲದೆ, ಪಕ್ಷದ ನಾಯಕತ್ವಕ್ಕೆ ತಿಳಿಸದೆ ರಿತಬ್ರತಾ ರಹಸ್ಯ ಸಭೆಗಳನ್ನು ಆಯೋಜಿಸಿ ಪಕ್ಷವನ್ನು ಇಬ್ಬಾಗ ಮಾಡಲು ಯತ್ನಿಸುತ್ತಿದ್ದಾರೆ ಎಂದು ಘೋಷ್ ನೇರ ಆರೋಪ ಮಾಡಿದ್ದಾರೆ.

ಐ-ಪ್ಯಾಕ್​ನಿಂದ ಟಿಎಂಸಿ ಹೈಜಾಕ್​

ಬುಧವಾರ ವಿಧಾನಸಭೆಯ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಉಚ್ಚಾಟಿತ ಶಾಸಕ ರಿತಬ್ರತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಈಗ ಐ-ಪ್ಯಾಕ್ (I-PAC) ಹೈಜಾಕ್ ಮಾಡಿದ್ದು, ಅದು ಇನ್ನು ಮುಂದೆ ಮಮತಾ ಬ್ಯಾನರ್ಜಿ ಪಕ್ಷವಾಗಿ ಉಳಿದಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಇದೇ ವೇಳೆ ಶಾಸಕರ ವಸತಿಗೃಹದಲ್ಲಿ ಕೆಲವು ಶಾಸಕರನ್ನು ಭೇಟಿಯಾಗಿ ಅವರೊಂದಿಗೆ ಮಂಡಕ್ಕಿ (puffed rice) ಸವಿದಿದ್ದನ್ನು ಒಪ್ಪಿಕೊಂಡ ರಿತಬ್ರತಾ, ನಿಮಗೆ 50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆಯೇ ಎಂಬ ವರದಿಗಾರರ ಪ್ರಶ್ನೆಗೆ, ನಾನು ಸದ್ಯದ ಪರಿಸ್ಥಿತಿಯನ್ನಷ್ಟೇ ನಂಬಿ ಬದುಕಲು ಇಷ್ಟಪಡುತ್ತೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಶೋಭನ್‌ದೇವ್ ಚಟ್ಟೋಪಾಧ್ಯಾಯರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಟಿಎಂಸಿ ಹೇಳಿಕೆಯನ್ನು ತಿರಸ್ಕರಿಸಿದ ಅವರು, ತಾವು ಕೇವಲ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ್ದೇ ಅಷ್ಟೇ ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net