ಟಿಎಂಸಿ ಕದನಕ್ಕೆ ಆಯೋಗದ ಮಧ್ಯಂತರ ಆದೇಶ: ಹೊಸ ಹೆಸರು, ಚಿಹ್ನೆಗಳೊಂದಿಗೆ ಉಪಚುನಾವಣೆ ಎದುರಿಸಲಿವೆ ಎರಡು ಬಣಗಳು | TMC Symbol

TMC Symbol | ಹೊಸ ಹೆಸರು, ಚಿಹ್ನೆಗಳೊಂದಿಗೆ ಉಪಚುನಾವಣೆ ಎದುರಿಸಲಿವೆ ಎರಡು ಬಣಗಳು
TMC Symbol | ಹೊಸ ಹೆಸರು, ಚಿಹ್ನೆಗಳೊಂದಿಗೆ ಉಪಚುನಾವಣೆ ಎದುರಿಸಲಿವೆ ಎರಡು ಬಣಗಳು
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ಕ್ಷೇತ್ರಗಳಿಗೆ ಅಕ್ಟೋಬರ್ 6 ರಂದು ಉಪಚುನಾವಣೆ ನಡೆಯಲಿದೆ. ಈ ಉಪಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್‌ನ ಹಾಲಿ ಹೆಸರು ಮತ್ತು ಚಿಹ್ನೆಯನ್ನು (TMC Symbol) ಬಳಸದಂತೆ ಎರಡೂ ಬಣಗಳಿಗೆ ತಡೆ ನೀಡಿದ ಮರುದಿನವೇ, ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಎರಡೂ ಬಣಗಳಿಗೆ ನೂತನ ಹೆಸರು ಹಾಗೂ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.
ವಿಪಕ್ಷ ನಾಯಕ ರಿತಬ್ರತ ಬ್ಯಾನರ್ಜಿ ಬಣಕ್ಕೆ (ಅರೂಪ್ ರಾಯ್ ನೇತೃತ್ವದ) ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ (Democratic Trinamool Congress) ಎಂಬ ಹೆಸರು ಮತ್ತು ಲಕೋಟೆ (Envelope) ಚಿಹ್ನೆಯನ್ನು ಹಂಚಿಕೆ ಮಾಡಿದ್ದರೆ, ಮಾಜಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಎಂಬ ಹೆಸರು ಮತ್ತು ಫುಟ್‌ಬಾಲ್ ಆಟಗಾರ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ. ಈ ಗುಂಪನ್ನು ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ತ್ರಿಪುರಾಗಳಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷವೆಂದು ಪರಿಗಣಿಸಲಾಗುತ್ತದೆ.

ಟಿಎಂಸಿ ಹೆಸರು ಮತ್ತು ಚಿಹ್ನೆಯನ್ನು ಫ್ರೀಜ್ ಮಾಡಿದ್ದೇಕೆ..?

ನಾಯಕತ್ವದ ಬಿಕ್ಕಟ್ಟು ಸಂಪೂರ್ಣವಾಗಿ ಬಗೆಹರಿಯುವವರೆಗೆ ಎರಡೂ ಬಣಗಳು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಎಂಬ ಹೆಸರು ಅಥವಾ ಪಕ್ಷದ ಕಾಯ್ದಿರಿಸಿದ ಹೂವು ಮತ್ತು ಹುಲ್ಲು ಚಿಹ್ನೆಯನ್ನು ಬಳಸಲು ಅವಕಾಶವಿಲ್ಲ ಎಂದು ಗುರುವಾರ ಇಸಿಐ ನೀಡಿದ್ದ ಮಧ್ಯಂತರ ಆದೇಶದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ವಿವಾದವು ಮಮತಾ ಬ್ಯಾನರ್ಜಿ ನೇತೃತ್ವದ ಒಂದು ಗುಂಪು ಮತ್ತು ಅರೂಪ್ ರಾಯ್ ನೇತೃತ್ವದ ಮತ್ತೊಂದು ಗುಂಪನ್ನು ಒಳಗೊಂಡಿದ್ದು, ಎರಡೂ ಗುಂಪುಗಳು ತಾವೇ ಮಾನ್ಯತೆ ಪಡೆದ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವುದಾಗಿ ಪ್ರತಿಪಾದಿಸಿದ್ದವು ಎಂದು ಚುನಾವಣಾ ಸಮಿತಿ ತಿಳಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ 1968 ರ ಚುನಾವಣಾ ಚಿಹ್ನೆಗಳ (ಕಾಯ್ದಿರಿಸುವಿಕೆ ಮತ್ತು ಹಂಚಿಕೆ) ಆದೇಶದ ಪ್ಯಾರಾಗ್ರಾಫ್ 15 ರ ಅಡಿಯಲ್ಲಿ ವಿವರವಾದ ಪರಿಶೀಲನೆ ಮತ್ತು ನಿರ್ಧಾರದ ಅಗತ್ಯವಿದೆ ಎಂದು ಆಯೋಗ ಹೇಳಿದೆ.
ಮುಂಬರುವ ಉಪಚುನಾವಣೆಗೆ ಮಧ್ಯಂತರ ವ್ಯವಸ್ಥೆಯಾಗಿ, ತಲಾ ಮೂರು ಆದ್ಯತೆಯ ಹೆಸರುಗಳು ಮತ್ತು ಮೂರು ಉಚಿತ ಚಿಹ್ನೆಗಳನ್ನು ಸಲ್ಲಿಸುವಂತೆ ಆಯೋಗ ಎರಡೂ ಬಣಗಳಿಗೆ ಸೂಚಿಸಿತ್ತು. ಅದರಂತೆ ಆಯೋಗವು ತರುವಾಯ ಪ್ರತಿ ಗುಂಪಿಗೆ ಒಂದು ಹೆಸರು ಮತ್ತು ಒಂದು ಚಿಹ್ನೆಯನ್ನು ಹಂಚಿಕೆ ಮಾಡಿದೆ.

ಉಪಚುನಾವಣೆಗೂ ಮುನ್ನ ಹೊಸ ಹೆಸರು ಹಾಗೂ ಚಿಹ್ನೆಗಳು

ಎರಡೂ ಬಣಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಅಕ್ಟೋಬರ್ 6 ರ ಉಪಚುನಾವಣೆಗೂ ಮುನ್ನವೇ ಇಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಿಎಂ ಸುವೇಂದು ಅಧಿಕಾರಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಂದಿಗ್ರಾಮ ಕ್ಷೇತ್ರ ತೆರವುಗೊಂಡಿದ್ದರೆ, ಹುಮಾಯೂನ್ ಕಬೀರ್ ರಾಜೀನಾಮೆಯಿಂದ ರೇಜಿನಗರ ಕ್ಷೇತ್ರ ಖಾಲಿಯಾಗಿದೆ.
ಪಕ್ಷದ ಗುರುತು, ಹೆಸರು ಮತ್ತು ಚಿಹ್ನೆ ಕುರಿತಾದ ವಿವಾದದ ಬಗ್ಗೆ ಚುನಾವಣಾ ಆಯೋಗವು ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಈ ಮಧ್ಯಂತರ ವ್ಯವಸ್ಥೆಯು ಜಾರಿಯಲ್ಲಿರುತ್ತದೆ. ಉಪಚುನಾವಣೆಯ ಸಮಯದಲ್ಲಿ ಎದುರಾಳಿ ಗುಂಪುಗಳನ್ನು ಸಮಾನವಾಗಿ ಕಾಣಲು ಹಾಗೂ ಅವರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆಯೋಗ ತನ್ನ ಗುರುವಾರದ ಆದೇಶದಲ್ಲಿ ತಿಳಿಸಲಾಗಿತ್ತು.

ಪ್ರಜಾಪ್ರಭುತ್ವ ಮೌಲ್ಯಗಳನ್ನು ಸ್ಮರಿಸಿದ ರಿತಬ್ರತ ಬ್ಯಾನರ್ಜಿ

ನಿರಂತರ ಬಣ ಬಡಿದಾಟದ ನಡುವೆಯೇ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ಅವರು ಶುಕ್ರವಾರ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬ್ಯಾನರ್ಜಿ, ರಾಜಕೀಯವು ಒಂದು ಶಾಶ್ವತ ಯುದ್ಧ, ಪ್ರತಿ ಗಂಟೆಯ ಯುದ್ಧ, ಪ್ರತಿ ನಿಮಿಷದ ಯುದ್ಧ, ಪ್ರತಿ ಸೆಕೆಂಡಿನ ಯುದ್ಧ . ಹಿತಾಸಕ್ತಿಗಳು, ಅಗತ್ಯಗಳು ಮತ್ತು ಆದ್ಯತೆಗಳನ್ನು ಬದಲಾಯಿಸುವ ಯುದ್ಧ. ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಪ್ರಜಾಪ್ರಭುತ್ವದ ಶಾಶ್ವತ ವಿಚಾರಗಳು ಮತ್ತು ಮೌಲ್ಯಗಳು ಚಿರಾಯುವಾಗಲಿ ಎಂದು ಬರೆದುಕೊಂಡಿದ್ದಾರೆ.
ಆಯೋಗದ ಇತ್ತೀಚಿನ ನಿರ್ಧಾರವು ಮುಂಬರುವ ಉಪಚುನಾವಣೆಗೆ ಎರಡೂ ಬಣಗಳಿಗೆ ಪ್ರತ್ಯೇಕ ಚುನಾವಣಾ ಗುರುತುಗಳನ್ನು ನೀಡಿದೆ. ಆದರೆ ತೃಣಮೂಲ ಕಾಂಗ್ರೆಸ್ ಮೇಲಿನ ನಿಯಂತ್ರಣದ ಕುರಿತಾದ ವಿವಾದವು ಚುನಾವಣಾ ಸಮಿತಿಯ ಮುಂದೆ ಇನ್ನೂ ಬಾಕಿ ಉಳಿದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net