ಟಿಎಂಸಿಗೆ ಬಿಗ್ ಶಾಕ್; ಪಕ್ಷ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಮೀಸಲು ಎಂದು ಆರೋಪಿಸಿ ರಾಜೀನಾಮೆ ನೀಡಿದ ರಾಜ್ಯಾಧ್ಯಕ್ಷ ಮಜುಂದಾರ್! | Abhijit Majumdar

Abhijit Majumdar |  ಅಸ್ಸಾಂ ಟಿಎಂಸಿ ರಾಜ್ಯ ಘಟಕದ ಅಧ್ಯಕ್ಷ ಅಭಿಜಿತ್ ಮಜುಂದಾರ್ ರಾಜೀನಾಮೆ
Abhijit Majumdar | ಅಸ್ಸಾಂ ಟಿಎಂಸಿ ರಾಜ್ಯ ಘಟಕದ ಅಧ್ಯಕ್ಷ ಅಭಿಜಿತ್ ಮಜುಂದಾರ್ ರಾಜೀನಾಮೆ
Published on
ದಿಸ್ಪೂರ್​/ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷವು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಕೇವಲ ಮುಸ್ಲಿಂ ಸಮುದಾಯಕ್ಕಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿ, ಪಕ್ಷದ ಅಸ್ಸಾಂ ರಾಜ್ಯ ಘಟಕದ ಅಧ್ಯಕ್ಷ ಅಭಿಜಿತ್ ಮಜುಂದಾರ್ (Abhijit Majumdar) ಶುಕ್ರವಾರ (ಮೇ 29) ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೀನಾಯವಾಗಿ ಸೋತ ಬೆನ್ನಲ್ಲೇ, ಪಕ್ಷದಲ್ಲಿ ಸಾಲು ಸಾಲು ನಾಯಕರ ರಾಜೀನಾಮೆ ಪರ್ವ ಮುಂದುವರಿದಿದ್ದು, ಈಗ ಮಜುಂದಾರ್ ರಾಜೀನಾಮೆ ಪಕ್ಷಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.
ಮಮತಾ ಬ್ಯಾನರ್ಜಿ ಅವರಿಗೆ ಇಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿರುವ ಅಭಿಜಿತ್ ಮಜುಂದಾರ್, ಅಸ್ಸಾಂನಲ್ಲಿ ಪಕ್ಷದ ವರ್ಚಸ್ಸು ಕೇವಲ ಮುಸ್ಲಿಮರಿಗಾಗಿ ಮಾತ್ರ ಕೆಲಸ ಮಾಡುವ ಸಂಘಟನೆ ಎಂಬಂತೆ ಬದಲಾಗುತ್ತಿದೆ, ಇದೇ ರೀತಿಯ ಧೋರಣೆ ಪಶ್ಚಿಮ ಬಂಗಾಳದಲ್ಲೂ ಎದ್ದು ಕಾಣುತ್ತಿದ್ದು, ಪಕ್ಷದ ಕಾರ್ಯವೈಖರಿ ಮತ್ತು ರಾಜಕೀಯ ದಿಕ್ಕು ಬದಲಾಗಿರುವುದರಿಂದ ಟಿಎಂಸಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ.

ಟಿಎಂಸಿಯಲ್ಲಿ ಪಕ್ಷಾಂತರ ಪರ್ವ

ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್‌ನಲ್ಲಿ ಆಂತರಿಕ ಅಸಮಾಧಾನ ಮತ್ತು ಭಿನ್ನಮತಗಳು ತೀವ್ರಗೊಂಡಿದ್ದು, ಪ್ರಮುಖ ನಾಯಕರೆನಿಸಿಕೊಂಡವರೇ ಒಬ್ಬೊಬ್ಬರಾಗಿ ಪಕ್ಷದಿಂದ ಹೊರನಡೆಯುತ್ತಿದ್ದಾರೆ. ನಿನ್ನೆಯಷ್ಟೆ ಹಿರಿಯ ನಾಯಕ ಶಾಂತನು ಸೇನ್ ಭ್ರಷ್ಟಾಚಾರದ ಆರೋಪ ಹಾಗೂ ಆರ್‌ ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಷಯದಲ್ಲಿ ಟಿಎಂಸಿ ಸರ್ಕಾರ ನಡೆದುಕೊಂಡ ರೀತಿಯನ್ನು ಖಂಡಿಸಿ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜನಸಾಮಾನ್ಯರು ಚುನಾವಣೆಯಲ್ಲಿ ನೀಡಿದ ತೀರ್ಪನ್ನು ಗೌರವಿಸಿ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿರುವ ಸೇನ್​, ಕಷ್ಟದ ಸಮಯದಲ್ಲಿ ಟಿಎಂಸಿ ಪರವಾಗಿ ಮಾಧ್ಯಮಗಳಲ್ಲಿ ಹೋರಾಡಿದ್ದೇನೆ, ಪಕ್ಷದ ನಡವಳಿಕೆ ಹಾಗೂ ಭ್ರಷ್ಟಾಚಾರದ ಕಾರಣಕ್ಕೆ ಬಂಗಾಳದ ಜನರೇ ತಿರಸ್ಕರಿಸಿರುವಾಗ, ಇನ್ನು ಮುಂದೆ ವಕ್ತಾರನಾಗಿ ಪಕ್ಷವನ್ನು ಬೆಂಬಲಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಸೇನ್ ತಮ್ಮ ಪತ್ರದ ಮೂಲಕ ತಿಳಿಸಿದ್ದರು.
ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಕೂಡ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ಹಾಗೂ ಇತರ ಸಾಂಸ್ಥಿಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಸಂಸದರೊಬ್ಬರಿಂದ (ಹಿರಿಯ ನಾಯಕ ಕಲ್ಯಾಣ್ ಬ್ಯಾನರ್ಜಿ ಎನ್ನಲಾದ) ತಮಗೆ ಆದ ನಿಂದನೆ ಮತ್ತು ದುರ್ನಡತೆಯಿಂದ ಪಕ್ಷವು ತಮಗೆ ರಕ್ಷಣೆ ನೀಡಲು ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಸರಣಿ ರಾಜೀನಾಮೆಗಳು ಟಿಎಂಸಿ ಪಕ್ಷದೊಳಗಿನ ದೊಡ್ಡ ಮಟ್ಟದ ಬಿರುಕನ್ನು ಜಗಜ್ಜಾಹೀರುಗೊಳಿಸಿದ್ದು, ಇದೇ ತಿಂಗಳ 4 ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಒಟ್ಟು 293 ಸ್ಥಾನಗಳ ಪೈಕಿ ಬಿಜೆಪಿ ಬರೋಬ್ಬರಿ 207 ಸ್ಥಾನಗಳನ್ನು ಗೆದ್ದು ದಾಖಲೆಯ ಬಹುಮತದೊಂದಿಗೆ ಟಿಎಂಸಿಯ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿತ್ತು. ಅದಾದ ಬಳಿಕ ಮೇ 21 ರಂದು ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮರುಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ರಾಜ್ಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net