ಆಲಿವ್ ಎಣ್ಣೆ, ಬೆಣ್ಣೆ, ಬ್ರೆಡ್​... ಕಡೆಗೂ ತಿಹಾರ್ ಜೈಲು ಆರೋಪಿಯ ಡಯಟ್​ ಫುಡ್​ ಕೋರಿಕೆಗೆ ಹೈಕೋರ್ಟ್​ ಅಸ್ತು

ತಿಹಾರ್​ ಜೈಲಿನಲ್ಲಿರುವ ಆರೋಪಿ ಮ್ಯಾಥ್ಯೂ ವ್ಯಾನ್​ಡೈಕೆ
ತಿಹಾರ್​ ಜೈಲಿನಲ್ಲಿರುವ ಆರೋಪಿ ಮ್ಯಾಥ್ಯೂ ವ್ಯಾನ್​ಡೈಕೆ
Published on

ಪ್ರಮುಖ ಮುಖ್ಯಾಂಶಗಳು

  • ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಯುಎಸ್​ ಪ್ರಜೆ
  • ತಿಹಾರ್​ ಜೈಲಿನ ಆಹಾರ ಸರಿಯಿಲ್ಲ ಎಂದು ಆರೋಪ
  • ಜೈಲಿನ ಊಟ ಬದಲಿಗೆ ತಾನೇ ಅಡುಗೆ ಮಾಡಿಕೊಳ್ಳುವುದಾಗಿ ಮನವಿ
ನವದೆಹಲಿ: ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ (Tihar Jail Food) ಅಮೆರಿಕ ಮೂಲದ ಆರೋಪಿ ಮ್ಯಾಥ್ಯೂ ವ್ಯಾನ್​ಡೈಕೆ ಸಲ್ಲಿಸಿದ್ದ ಡಯಟ್​ ಆಹಾರವೇ ಬೇಕೆಂಬ ಅರ್ಜಿಯನ್ನು ಕಡೆಗೂ ಹೈಕೋರ್ಟ್​ ಪುರಸ್ಕರಿಸಿದೆ.
ದೆಹಲಿಯ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ ಆರೋಪಿ, ತಿಹಾರ್ ಜೈಲಿನಲ್ಲಿ ಕೊಡುತ್ತಿರುವ ಆಹಾರವನ್ನು ನನ್ನಿಂದ ತಿನ್ನಲು ಸಾಧ್ಯವಿಲ್ಲ. ಅವರು ಉಣಬಡಿಸುವ ಆಹಾರಗಳಲ್ಲಿ ಮೆಣಸಿನಕಾಯಿ, ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳು ಹೆಚ್ಚಿರುತ್ತವೆ. ಇದರಿಂದ ಹೊಟ್ಟೆಗೆ ಊಟ ಸೇರುತ್ತಿಲ್ಲ. ಪ್ರತ್ಯೇಕ ಪಾತ್ರೆಗಳು ಹಾಗೂ ಅಮೆರಿಕದ ಆಹಾರಗಳನ್ನೇ ಕಳುಹಿಸಿಕೊಟ್ಟರೆ, ಅಡುಗೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಕೋರಿದ್ದ. ಈ ಮನವಿಗೆ ಈಗ ದೆಹಲಿ ಹೈಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿರುವುದು ಕೆಲವರಲ್ಲಿ ಅಚ್ಚರಿ ತಂದಿದೆ.

ಸುಮಾರು 14 ಕೆಜಿ ತೂಕ ಇಳಿದಿದೆ

ಅರ್ಜಿಯಲ್ಲಿ ವ್ಯಾನ್ ಡೈಕ್ ನೀಡಿರುವ ವಿವರಗಳ ಪ್ರಕಾರ, ಪ್ರಸ್ತುತ ಜೈಲಿನಲ್ಲಿ ಎಲ್ಲ ಖೈದಿಗಳಿಗೆ ನೀಡುತ್ತಿರುವ ಆಹಾರವನ್ನು ನನ್ನಿಂದ ತಿನ್ನಲು ಆಗುತ್ತಿಲ್ಲ. 50 ದಿನಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇನೆ. ಈ ಸಮಯದಲ್ಲಿ ಸೋಯಾ ಮಿಲ್ಕ್‌ ಸೇರಿ ಹಾಲನ್ನೇ ದ್ರವರೂಪದ ಆಹಾರವನ್ನಾಗಿ ಸೇವಿಸುತ್ತಿರುವೆ. ಇದರಿಂದಾಗಿ ಕಳೆದ ಮೂರು ತಿಂಗಳಲ್ಲಿ ಸುಮಾರು 14 ಕೆಜಿ ತೂಕ ಕಳೆದುಕೊಂಡಿದ್ದೇನೆ. ಇದರ ಮೇಲಾಗಿ ಅಪೌಷ್ಟಿಕತೆಯಿಂದ ಆರೋಗ್ಯ ಹದಗೆಟ್ಟಿದ್ದು, ರೋಗನಿರೋಧಕ ಶಕ್ತಿಯೂ ಕಡಿಮೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದ.

ಆಲಿವ್ ಎಣ್ಣೆ, ಬ್ರೆಡ್, ಬೆಣ್ಣೆ, ಚಿಕನ್...

ಇದರ ಜೊತೆ ಮತ್ತೊಂದು ವಿಷಯವನ್ನು ಉಲ್ಲೇಖಿಸಿದ್ದ ವ್ಯಾನ್‌ಡೈಕ್, ತನ್ನ ಕುಟುಂಬ ಸದಸ್ಯರಿಗೆ ಇಂಡಕ್ಷನ್ ಸ್ಟೌವ್ ಮತ್ತು ಅಡುಗೆ ಪಾತ್ರೆಗಳನ್ನು ಜೈಲಿಗೆ ತರಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿದ್ದ. ಜತೆಗೆ ಪಾಸ್ತಾ, ಆಲಿವ್ ಎಣ್ಣೆ, ಅಕ್ಕಿ, ಮಸೂರ, ಬ್ರೆಡ್, ಬೆಣ್ಣೆ, ಚಿಕನ್, ಮೀನು ಮತ್ತು ಸೋಯಾ ಹಾಲು ಮುಂತಾದ ಆಹಾರ ಪದಾರ್ಥಗಳ ಪೂರೈಕೆಗೆ ಕೋರ್ಟ್​ ಅವಕಾಶ ನೀಡುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಎಂದು ವರದಿಯಾಗಿದೆ.

ನಾನ್​ ವೆಜ್​ ಬಿಟ್ಟು!

ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಕೋರ್ಟ್​, ಆರೋಪಿಯ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ, ಅರ್ಜಿಯಲ್ಲಿ ಕೇಳಿಕೊಂಡಿರುವ ಮಾಂಸಾಹಾರ ಹೊರತುಪಡಿಸಿ ಉಳಿದೆಲ್ಲ ಆಹಾರ ಪದಾರ್ಥಗಳನ್ನು ಕಳುಹಿಸಿಕೊಡಲು ಅನುಮತಿಸಿದೆ ಎಂದಿತು. ಇದರೊಟ್ಟಿಗೆ, ವ್ಯಾನ್‌ಡೈಕ್‌ನ ಆದ್ಯತೆಗಳ ಪ್ರಕಾರ ಊಟವನ್ನು ತಯಾರಿಸುವ ಅಡುಗೆಯನ್ನು ಸೂಕ್ತ ರೀತಿಯಲ್ಲಿ ಒದಗಿಸುವಂತೆ ನ್ಯಾಯಾಲಯವು ಜೈಲಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಯಾರೀ ಮ್ಯಾಥ್ಯೂ?

ಮ್ಯಾಥ್ಯೂ ವ್ಯಾನ್ ಡೈಕ್​ನನ್ನು ಈ ವರ್ಷದ ಮಾರ್ಚ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಭಾರತ ಮತ್ತು ಮ್ಯಾನ್ಮಾರ್‌ನಲ್ಲಿ ಸಶಸ್ತ್ರ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿದ ಆರೋಪದ ಮೇರೆಗೆ ಮತ್ತು ಇತರರ ವಿರುದ್ಧ ಡ್ರೋನ್ ತರಬೇತಿ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಸ್ತುತ, ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net