ಅಣ್ಣ, ಅದನ್ನ ಕಸದ ರಾಶಿಗೆ ಎಸೆದುಬಿಡಿ: Rapido ರೈಡರ್‌ಗೆ ಮಹಿಳೆ ನೀಡಿದ ಪಾರ್ಸೆಲ್‌ನಲ್ಲಿ ಏನಿತ್ತು ಗೊತ್ತಾ?

Rapido
Rapido
Published on
ಗುರುಗಾಂವ್: ನಗರ ಪ್ರದೇಶದ ಜನರ ಬದುಕು ಎಷ್ಟು ಬ್ಯುಸಿಯಾಗಿದೆ ಎಂದರೆ, ದಿನನಿತ್ಯದ ಸಣ್ಣ ಕೆಲಸಗಳಿಗೂ ಈಗ ಆ್ಯಪ್‌ಗಳೇ ಆಧಾರವಾಗಿವೆ. ಆದರೆ, ಮಹಿಳೆಯೊಬ್ಬರು ತಮ್ಮ ಮನೆಯ ಕಸವನ್ನು ಎಸೆಯಲು ರಾಪಿಡೋ (Rapido) ಪೋರ್ಟರ್ ಅನ್ನು ಬಳಸಿಕೊಂಡಿರುವ ವಿಲಕ್ಷಣ ಪ್ರಸಂಗವೊಂದು ಈಗ ಇಂಟರ್ನೆಟ್‌ನಲ್ಲಿ ವೈರಲ್​ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ಒಂದು ದೊಡ್ಡ ಕಾರ್ಡ್‌ಬೋರ್ಡ್ ಬಾಕ್ಸ್ ಅನ್ನು ರೈಡರ್ ಕೈಗೆ ನೀಡುತ್ತಾರೆ. ರೈಡರ್ ಬಹಳ ಜವಾಬ್ದಾರಿಯಿಂದ "ಮೇಡಂ, ಪೇಮೆಂಟ್ ಆನ್‌ಲೈನ್ ಆಗಿದೆಯೇ ಅಥವಾ ನಗದಾಗಿ ನೀಡುತ್ತೀರಾ?" ಎಂದು ಕೇಳುತ್ತಾನೆ. ಅದಕ್ಕೆ ಮಹಿಳೆ "ಆಗಲೇ ಆನ್‌ಲೈನ್ ಪೇಮೆಂಟ್ ಮಾಡಲಾಗಿದೆ" ಎಂದು ಉತ್ತರಿಸಿ ಕಳುಹಿಸಿಕೊಡುತ್ತಾರೆ. ಆ ರೈಡರ್ ಇದು ಯಾವುದೋ ಬೆಲೆಬಾಳುವ ಪಾರ್ಸೆಲ್ ಇರಬಹುದು ಎಂದು ಭಾವಿಸಿ ಡ್ರಾಪ್ ಲೊಕೇಶನ್‌ಗೆ ತೆರಳುತ್ತಾನೆ.

ಡ್ರಾಪ್ ಲೊಕೇಶನ್‌ನಲ್ಲಿ ಕಾದಿತ್ತು ಅಸಲಿ 'ಟ್ವಿಸ್ಟ್'!

ರೈಡರ್ ನಿಗದಿತ ಸ್ಥಳಕ್ಕೆ ತಲುಪಿದಾಗ ಅಲ್ಲಿ ಯಾವುದೇ ವ್ಯಕ್ತಿ ಅಥವಾ ಕಚೇರಿ ಇರಲಿಲ್ಲ. ಬದಲಾಗಿ ಅಲ್ಲಿ ದೊಡ್ಡದೊಂದು ಕಸದ ರಾಶಿಯಿತ್ತು. ಗೊಂದಲಕ್ಕೊಳಗಾದ ರೈಡರ್ ಕೂಡಲೇ ಮಹಿಳೆಗೆ ಫೋನ್ ಮಾಡಿ, "ಮೇಡಂ, ಇಲ್ಲಿ ಪಾರ್ಸೆಲ್ ರಿಸೀವ್ ಮಾಡಿಕೊಳ್ಳಲು ಯಾರೂ ಇಲ್ಲ, ಯಾರಿಗೆ ಕೊಡಲಿ?" ಎಂದು ಕೇಳಿದ್ದಾನೆ. ಅದಕ್ಕೆ ಆ ಮಹಿಳೆ ಅತಿ ಸರಳವಾಗಿ, "ಅಣ್ಣ, ಅದನ್ನ ಅಲ್ಲೇ ಎಸೆದುಬಿಡಿ, ಅದೆಲ್ಲಾ ಬರೀ ಕಸ!" ಎಂದು ಹೇಳಿದ್ದಾರೆ.
ನಗಬೇಕೋ ಅಥವಾ ಅಳಬೇಕೋ?
ಮಹಿಳೆಯ ಮಾತು ಕೇಳಿ ರೈಡರ್‌ಗೆ ಒಂದು ಕ್ಷಣ ಏನು ಮಾಡಬೇಕೆಂದು ತಿಳಿಯಲಿಲ್ಲ. "ನೋಡಿ, ನಾವು ಎಲ್ಲಿಗೆ ಬಂದು ತಲುಪಿದ್ದೇವೆ... ಈಗ ನಾವು ಜನರ ಕಸವನ್ನು ಡೆಲಿವರಿ ಮಾಡುವ ಸ್ಥಿತಿಗೆ ತಲುಪಿದ್ದೇವೆ!" ಎಂದು ಕ್ಯಾಮೆರಾ ಮುಂದೆ ಹೇಳುತ್ತಾ ತನ್ನ ನಗು ತಡೆಯಲು ಪ್ರಯತ್ನಿಸಿದ್ದಾನೆ. "ಡೆಲಿವರಿ ಮಾಡೋಕೆ ಬಂದವನಿಗೆ ಕಸದ ರಾಶಿ ತೋರಿಸಿದರೆ ಹೇಗಾಗಬೇಡ?" ಎಂಬುದು ಆತನ ಅಳಲಾಗಿತ್ತು.

ನೆಟ್ಟಿಗರ ಕಮೆಂಟ್ಸ್

ಈ ವಿಡಿಯೋ ಎಕ್ಸ್ (X) ನಲ್ಲಿ ಹರಿದಾಡುತ್ತಿದ್ದಂತೆ ಜನ ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ಸೋಮಾರಿತನದ ಪರಮಾವಧಿ, ಬಡ ರೈಡರ್‌ಗಳನ್ನು ಈ ರೀತಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇದು ಕ್ರಿಯೇಟಿವ್ ಥಿಂಕಿಂಗ್! ಕಸದ ಗಾಡಿ ಬಾರದಿದ್ದರೆ ಇದಕ್ಕಿಂತ ಬೆಸ್ಟ್ ಐಡಿಯಾ ಇನ್ನೊಂದಿಲ್ಲ" ಎಂದು ಇನ್ನು ಕೆಲವರು ತಮಾಷೆ ಮಾಡಿದ್ದಾರೆ. "ಈ ಮಹಿಳೆಗೆ 'ಔಟ್ ಆಫ್ ದಿ ಬಾಕ್ಸ್ ಐಡಿಯಾ' ಪ್ರಶಸ್ತಿ ನೀಡಬೇಕು" ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಇದೇ ಮೊದಲಲ್ಲ ಇಂತಹ ವಿಚಿತ್ರ ಬಳಕೆ!

ಕಳೆದ ವರ್ಷ ಗುರುಗಾಂವ್‌ನಲ್ಲಿ ಭಾರಿ ಮಳೆಯಾದಾಗ ರಸ್ತೆಗಳು ಜಲಾವೃತವಾಗಿದ್ದವು. ಆಗ ಕಾರ್ಪೊರೇಟ್ ಉದ್ಯೋಗಿಗಳು ರಸ್ತೆ ದಾಟಲು ಪೋರ್ಟರ್ ಮಿನಿ ಟ್ರಕ್ ಬುಕ್ ಮಾಡಿ ಸುದ್ದಿಯಾಗಿದ್ದರು. ಈಗ ಕಸದ ವಿಲೇವಾರಿಗೆ ರಾಪಿಡೋ ಬಳಕೆ ಮಾಡಿರುವುದು ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net