ಇಂದಿನಿಂದ ಮೂರು ದಿನ ವಿಶೇಷ ಸಂಸತ್ ಅಧಿವೇಶನ, ಮಹಿಳಾ ಮೀಸಲಾತಿ ಮತ್ತು ಗಡಿ ನಿರ್ಣಯ ಮಸೂದೆಗೆ ಸಾಂವಿಧಾನಿಕ ತಿದ್ದುಪಡಿ; ಚರ್ಚೆ | Parliament session

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಇಂದಿನಿಂದ(ಏ. 16) ಮೂರು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ(Parliament session) ಶುರುವಾಗಲಿದ್ದು, ಲೋಕಸಭೆ & ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ತರುವ ಮಸೂದೆ, ಕ್ಷೇತ್ರ ಪುರ್ನವಿಂಗಡೆ ಪ್ರಕ್ರಿಯೆ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಲಿದೆ.
2029 ರ ಲೋಕಸಭಾ ಚುನಾವಣೆಗೆ ಮುನ್ನವೇ ನಾರಿ ಶಕ್ತಿ ವಂದನ ಅಧಿನಿಯಂ ಕಾಯ್ದೆ ಮೂಲಕ ಮಹಿಳಾ ಮೀಸಲಾತಿ ಜಾರಿಗೆ ತರಲು ಮುಂದಾಗಿದ್ದು, 2011ರ ಜನಗಣತಿಯ ದತ್ತಾಂಶದೊಂದಿಗೆ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಶಾಸಕರಿಗೆ ಮೂರನೇ ಒಂದು ಭಾಗದ ಮೀಸಲಾತಿಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಮೂಲಕ ಲೋಕಸಭಾ ಸ್ಥಾನಗಳನ್ನು 543ರಿಂದ 850ಕ್ಕೆ ಏರಿಸಲು ಕೇಂದ್ರ ಪ್ರಸ್ತಾಪಿಸಿದೆ. ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶದಿಂದ 35 ಸ್ಥಾನಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಕ್ಷೇತ್ರಗಳ ಪುನರ್ ವಿಂಗಡಣೆಗಾಗಿ ಆಯೋಗವನ್ನು ಸ್ಥಾಪಿಸುವ ಡಿಲಿಮಿಟೇಶನ್ ಮಸೂದೆಯನ್ನು ಹೊರತುಪಡಿಸಿ, ಉಳಿದ ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳಾಗಿದ್ದು, ಅಂಗೀಕಾರ ಪಡೆಯಲು ಹಾಜರಿರುವ ಮತ್ತು ಮತ ಚಲಾಯಿಸುವವರಲ್ಲಿ ಮೂರನೇ ಎರಡರಷ್ಟು ವಿಶೇಷ ಬಹುಮತದ ಅಗತ್ಯವಿದೆ.
ಲೋಕಸಭೆಯಲ್ಲಿ 537 ಸದಸ್ಯರ ಪೈಕಿ ಮೂರನೇ ಎರಡರಷ್ಟು ಅಂದ್ರೆ 360 ಸದಸ್ಯರು ಮಸೂದೆಗಳಿಗೆ ಬೆಂಬಲ ನೀಡಬೇಕು. ಆದರೆ ಆಡಳಿತರೂಢ ಎನ್​ಡಿಎ 293 ಸದಸ್ಯರನ್ನು ಹೊಂದಿದ್ದು, 67 ಸದಸ್ಯರ ಕೊರತೆಯಿದೆ. ಅದೇ ರೀತಿ ರಾಜ್ಯಸಭೆಯಲ್ಲೂ ಮ್ಯಾಜಿಕ್ ಸಂಖ್ಯೆ 163 ಆಗಿದ್ದು ಎನ್‌ಡಿಎಯ 142ಕ್ಕೂ ಹೆಚ್ಚು ಸದಸ್ಯರ ಹೊಂದಿದ್ದು, ಬಹುಮತಕ್ಕೆ 21 ಸ್ಥಾನಗಳ ಕೊರತೆಯಿದೆ.

ಡಿಲಿಮಿಟೇಷನ್​ಗೆ ವಿಪಕ್ಷಗಳ ವಿರೋಧ

ಲೋಕಸಭೆ & ವಿಧಾನಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಮಸೂದೆಗೆ ಎಲ್ಲಾ ವಿರೋಧ ಪಕ್ಷಗಳು ಅನುಮೋದಿಸಿದ್ದರೂ, 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಅದನ್ನು ಜಾರಿಗೆ ತರವುದನ್ನೂ ವಿರೋಧಿಸಿವೆ. 2011ರ ಜನಗಣತಿಯನ್ನು ಆಧರಿಸಿ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮುಂದಿನ ವರ್ಷ ಪೂರ್ಣಗೊಳ್ಳುವ 2026 ಜನಗಣಿತಿ ಪ್ರಕಾರ ಮಾಡಲು ವಿಪಕ್ಷಗಳು ಒತ್ತಾಯಿಸಿವೆ.
ಈ ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಸ್ತಾವಿತ ಮಸೂದೆಗಳು ಡಿಲಿಮಿಟೇಶನ್ ಮೇಲಿನ ಎಲ್ಲಾ ಸಾಂವಿಧಾನಿಕ ರಕ್ಷಣೆಗಳನ್ನು ತೆಗೆದುಹಾಕುತ್ತವೆ. ಸರ್ಕಾರವೇ ನೇಮಕ ಮಾಡುವ ಮತ್ತು ನಿರ್ದೇಶಿಸುವ ಡಿಲಿಮಿಟೇಶನ್ ಆಯೋಗಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತದೆ. ಇದು 2029ರ ಚುನಾವಣೆಗೆ ಎಲ್ಲಾ ಲೋಕಸಭಾ ಸ್ಥಾನಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ವಶಪಡಿಸಿಕೊಳ್ಳುವುದು ಬಿಜೆಪಿಯ ಅಪಾಯಕಾರಿ ಯೋಜನೆಗಳಲ್ಲಿ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net