ವಿಶ್ವಸಂಸ್ಥೆಯ ನಿಯಮಾವಳಿ (ಚಾರ್ಟರ್) ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳ ಪ್ರಕಾರ, ಯಾವುದೇ ದೇಶ ತನ್ನ ಆಂತರಿಕ ರಾಜಕೀಯ ಬಿಕ್ಕಟ್ಟುಗಳನ್ನು ಅಥವಾ ಆಡಳಿತಾತ್ಮಕ ಸಮಸ್ಯೆಗಳನ್ನು ಆ ರಾಷ್ಟ್ರದ ಸಂವಿಧಾನ ಮತ್ತು ಪ್ರಜೆಗಳ ಆಶೋತ್ತರಗಳ ಅನ್ವಯವೇ ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ನೆರೆಯ ದೇಶಗಳಿಗೆ ಅಥವಾ ಜಾಗತಿಕ ಸಮುದಾಯಕ್ಕೆ ಅದರಿಂದ ಅಪಾಯವಿದ್ದಲ್ಲಿ, ವಿಶ್ವಸಂಸ್ಥೆಯ ಮೂಲಕ ಬಹುಪಕ್ಷೀಯ ಸಂವಾದಕ್ಕೆ ಮುಂದಾಗಬೇಕೇ ಹೊರತು, ಸೇನಾಬಲ ಪ್ರದರ್ಶನ ಮಾಡುವಂತಿಲ್ಲ. ಅಮೆರಿಕದ ಈ ‘ದೊಡ್ಡಣ್ಣ’ನ ಪ್ರವೃತ್ತಿ ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಭವಿಷ್ಯದಲ್ಲಿ ಇತರ ಬಲಿಷ್ಠ ರಾಷ್ಟ್ರಗಳೂ ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿರುವ ಸಣ್ಣ ರಾಷ್ಟ್ರಗಳ ಮೇಲೆ ಇಂತಹುದೇ ದಾಳಿ ನಡೆಸಲು ಇದರಿಂದ ಪ್ರೇರಣೆಯಾಗಬಹುದು.