ಭಾರತ-ಇಸ್ರೇಲ್ ಮೈತ್ರಿಯಿಂದ ಇಸ್ಲಾಂಗೆ ಅಪಾಯ..? ಪಾಕ್​ ಸೆನೆಟ್‌ನಲ್ಲಿ ಹೈ-ಡ್ರಾಮಾ, ನೆತನ್ಯಾಹು ಹೆಕ್ಸಾಗನ್ ಪ್ಲಾನ್‌ಗೆ ಬೆಚ್ಚಿಬಿದ್ದ ಶತ್ರು ರಾಷ್ಟ್ರ! | Hexagon Of Alliances

Hexagon Of Alliances
Hexagon Of Alliances
Published on
Hexagon of Alliances: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನ ಐತಿಹಾಸಿಕ ಭೇಟಿಯಲ್ಲಿರುವಾಗಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹರಿಬಿಟ್ಟ ಹೆಕ್ಸಾಗನ್ ಮೈತ್ರಿ ಎಂಬ ಹೊಸ ರಾಜತಾಂತ್ರಿಕ ಬಾಂಬ್ ಪಾಕಿಸ್ತಾನವನ್ನು ತಲ್ಲಣಗೊಳಿಸಿದೆ.
ಈ ಹೊಸ ಮೈತ್ರಿಯು ತನ್ನ ಅಸ್ತಿತ್ವಕ್ಕೇ ಧಕ್ಕೆ ತರಲಿದೆ ಎಂಬ ಭಯದಲ್ಲಿರುವ ಪಾಕಿಸ್ತಾನದ ಸೆನೆಟ್, ಇದನ್ನು ಇಡೀ ಮುಸ್ಲಿಂ ಜಗತ್ತಿನ ವಿರುದ್ಧದ ಸಂಚು ಎಂದು ಕರೆದಿದೆ.

ಪಾಕಿಸ್ತಾನದ ಸೆನೆಟ್‌ನಲ್ಲಿ ಆಕ್ರೋಶದ ಅಲೆ

ಇಸ್ರೆಲ್​ ಪ್ರಧಾನಿ ನೆತನ್ಯಾಹು ಕಡೆಯಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಪಾಕಿಸ್ತಾನದ ಸಂಸತ್ತಿನ ಮೇಲ್ಮನೆಯಾದ ಸೆನೆಟ್​​ನಲ್ಲಿ ಮಂಗಳವಾರ ತುರ್ತು ನಿರ್ಣಯ ಮಂಡಿಸಲಾಯಿತು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಾಯಕಿ ಪಲ್ವಾಶಾ ಖಾನ್ ಮಂಡಿಸಿದ ಈ ನಿರ್ಣಯವನ್ನು ಸೆನೆಟ್ ಸರ್ವಾನುಮತದಿಂದ ಅಂಗೀಕರಿಸಿತು.
ಇಸ್ರೇಲ್ ಪ್ರಧಾನಿಯ ಈ ಹೇಳಿಕೆಯು ಮುಸ್ಲಿಂ ಉಮ್ಮಾವನ್ನು (ಸಮುದಾಯವನ್ನು) ವಿಭಜಿಸುವ ಮತ್ತು ದಮನ ಮಾಡುವ ಸಂಚು. ಭಾರತವು ಇಂತಹ ಮೈತ್ರಿಗೆ ಕೈಜೋಡಿಸಿರುವುದು ಪ್ರಾದೇಶಿಕ ಶಾಂತಿಗೆ ಅಪಾಯಕಾರಿ ಎಂದು ಆರೋಪಿಸಲಾಗಿದೆ.

ಶಿಯಾ-ಸುನ್ನಿ ಸಮೀಕರಣ

ಪಾಕಿಸ್ತಾನವು ಸೌದಿ ಅರೇಬಿಯಾದೊಂದಿಗೆ ಸೇರಿ ಇಸ್ಲಾಮಿಕ್ ನ್ಯಾಟೋ ಮಾದರಿಯ ರಕ್ಷಣಾ ಒಪ್ಪಂದಕ್ಕೆ ಮುಂದಾಗಿತ್ತು. ಆದರೆ, ಈಗ ಇಸ್ರೇಲ್ ಮತ್ತು ಭಾರತವು ಅರಬ್ ರಾಷ್ಟ್ರಗಳೊಂದಿಗೆ ಸೇರಿ ಷಡ್ಭುಜಾಕೃತಿ (Hexagon) ನಿರ್ಮಿಸಲು ಹೊರಟಿರುವುದು ಪಾಕಿಸ್ತಾನದ ರಾಜತಾಂತ್ರಿಕತೆಯನ್ನು ಮೂಲೆಗುಂಪು ಮಾಡಿದೆ. ಭಾರತವು ಇಸ್ರೇಲ್‌ನೊಂದಿಗೆ ರಕ್ಷಣಾ ತಂತ್ರಜ್ಞಾನ ಮತ್ತು ಗುಪ್ತಚರ ಮಾಹಿತಿ ಹಂಚಿಕೊಳ್ಳುವುದು ಪಾಕಿಸ್ತಾನಕ್ಕೆ ಆತಂಕ ತಂದಿದೆ.

ಏನಿದು ನೆತನ್ಯಾಹು 'ಹೆಕ್ಸಾಗನ್' ಪ್ಲಾನ್​..?

ನೆತನ್ಯಾಹು ಈ ದೂರದೃಷ್ಟಿಯ ಯೋಜನೆಯು ಆರು ಪ್ರಮುಖ ಸ್ತಂಭಗಳ ಮೇಲೆ ನಿಂತಿದೆ. ಇದರಲ್ಲಿ ಭಾರತ, ಇಸ್ರೇಲ್, ಗ್ರೀಸ್, ಸೈಪ್ರಸ್ ಸೇರಿದಂತೆ ಕೆಲವು ಆಯ್ದ ಅರಬ್ ಮತ್ತು ಆಫ್ರಿಕನ್ ರಾಷ್ಟ್ರಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.
ಇದು ಇರಾನ್‌ನ ನೇರ ನೇತೃತ್ವದಲ್ಲಿ ನಡೆಯುತ್ತಿರುವ ಬಣವಾಗಿದ್ದು, ಈ ಅಕ್ಷವು ಇಸ್ರೇಲ್ ಶಾಂತಿಗೆ ದೊಡ್ಡ ತಲೆನೋವಾಗಿದೆ, ಇನ್ನೊಂದೆಡೆ ಐಸಿಸ್ (ISIS) ಅವಶೇಷಗಳೊಂದಿಗೆ ಗುರುತಿಸಿಕೊಂಡಿರುವ ಸುನ್ನಿ ಮೂಲಭೂತವಾದಿ ಗುಂಪುಗಳು ಮತ್ತೆ ತಲೆ ಎತ್ತುತ್ತಿವೆ. ಇವು ಅಫ್ಘಾನಿಸ್ತಾನದಿಂದ ಪಾಕಿಸ್ತಾನದವರೆಗೆ ವ್ಯಾಪಿಸಿದ್ದು, ಜಗತ್ತಿನಾದ್ಯಂತ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಕನಸು ಕಾಣುತ್ತಿವೆ. ಈ ಸುನ್ನಿ ಅಕ್ಷವು ಭಾರತದ ಭದ್ರತೆಗೂ ದೊಡ್ಡ ಸವಾಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ನೇತೃತ್ವದ ಆಮೂಲಾಗ್ರ ಶಿಯಾ ಅಕ್ಷ ಮತ್ತು ಐಸಿಸ್‌ನಂತಹ ಶಕ್ತಿಗಳಿಂದ ಉದಯಿಸುತ್ತಿರುವ ಉಗ್ರಗಾಮಿ ಶಕ್ತಿಗಳ ವಾಸ್ತವ, ಸವಾಲುಗಳು ಮತ್ತು ಗುರಿಗಳನ್ನು ನೇರವಾಗಿ ನೋಡುವ ದೇಶಗಳನ್ನು ಈ ಬಣ ಒಟ್ಟುಗೂಡಿಸುತ್ತದೆ. ಈ ಮೈತ್ರಿಯಲ್ಲಿ ಭಾರತವು ಆರ್ಥಿಕ ಮತ್ತು ಭದ್ರತಾ ಎಂಜಿನ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ.

ಮೋದಿ ಭೇಟಿಯ ಮಹತ್ವ

ಪ್ರಧಾನಿ ಮೋದಿ ಇಸ್ರೇಲ್ ಸಂಸತ್ತಿನಲ್ಲಿ ಭಯೋತ್ಪಾದನೆ ವಿರುದ್ಧ ನೀಡಿದ ಕರೆಯನ್ನು ಈ ಮೈತ್ರಿಗೆ ಪೂರಕವಾಗಿ ನೋಡಲಾಗುತ್ತಿದೆ. ಭಾರತವು ಈಗ ಕೇವಲ ದ್ವಿಪಕ್ಷೀಯ ಸಂಬಂಧಕ್ಕೆ ಸೀಮಿತವಾಗದೆ, ಮಧ್ಯಪ್ರಾಚ್ಯದ ಭದ್ರತಾ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸಜ್ಜಾಗಿದೆ ಎಂಬುದು ಸ್ಪಷ್ಟವಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net