ರಾಜಕೀಯದ A, B, C ಗೊತ್ತಿಲ್ಲದವರು; ಯುವ ಶಾಸಕಿ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ | Tejashwi Yadav

ರಾಜಕೀಯದ A, B, C ಗೊತ್ತಿಲ್ಲದವರು; ಯುವ ಶಾಸಕಿ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ | Tejashwi Yadav
ರಾಜಕೀಯದ A, B, C ಗೊತ್ತಿಲ್ಲದವರು; ಯುವ ಶಾಸಕಿ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ | Tejashwi Yadav
Published on
ಪಾಟ್ನಾ: ಬಿಹಾರ ವಿಧಾನಸಭಾ ಕಲಾಪದಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದು ಈಗ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಖ್ಯಾತ ಗಾಯಕಿ ಮತ್ತು ಪ್ರಸ್ತುತ ಬಿಜೆಪಿಯ ಶಾಸಕಿಯಾಗಿರುವ ಮೈಥಿಲಿ ಠಾಕೂರ್​ ಆರ್‌ಜೆಡಿ ಆಡಳಿತದ ಬಗ್ಗೆ ನೀಡಿದ ಧೃತರಾಷ್ಟ್ರ ಮತ್ತು ದುರ್ಯೋಧನ ಹೋಲಿಕೆಯ ಹೇಳಿಕೆಗೆ ಆರ್‌ಜೆಡಿ ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್(TejashwiYadav) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿವಾದದ ಹಿನ್ನೆಲೆ ಏನು..?

ಗುರುವಾರ ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ಮೈಥಿಲಿ ಠಾಕೂರ್, 2005ಕ್ಕೂ ಮುನ್ನ ಬಿಹಾರದಲ್ಲಿದ್ದ ಆರ್‌ಜೆಡಿ ಆಡಳಿತವನ್ನು ಹಸ್ತಿನಾಪುರದ ಅಂಧ ರಾಜ ಧೃತರಾಷ್ಟ್ರನ ಆಡಳಿತಕ್ಕೆ ಹೋಲಿಸಿದ್ದರು. ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಪುತ್ರ ತೇಜಸ್ವಿ ಯಾದವ್ ಮೇಲಿರುವ ಅತೀವ ಮೋಹದಿಂದಾಗಿ ರಾಜ್ಯದ ಜನರ ಸಮಸ್ಯೆಗಳಿಗೆ ಕುರುಡಾಗಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದ್ದರು. ಧೃತರಾಷ್ಟ್ರನಿಗೆ ತನ್ನ ರಾಜ್ಯಕ್ಕಿಂತ ತನ್ನ ಮಗ ದುರ್ಯೋಧನನೇ ಮುಖ್ಯವಾಗಿದ್ದಂತೆ, ಇಲ್ಲಿಯೂ ಅದೇ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದ್ದರು.

ತೇಜಸ್ವಿ ತಿರುಗೇಟು

ಈ ಟೀಕೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, ಮೈಥಿಲಿ ಠಾಕೂರ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಅವರ ಫೋಟೋವನ್ನು ಲಗತ್ತಿಸಿ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯ ಜ್ಞಾನದ ಕೊರತೆ: ಕೆಲವರು ಶಾಸಕರಾದ ತಕ್ಷಣ ತಮಗೆ ರಾಜಕೀಯದ ಸಕಲ ಜ್ಞಾನ ಬಂದಿದೆ ಎಂದು ಭಾವಿಸುತ್ತಾರೆ. ಸಂಸದೀಯ ವ್ಯವಸ್ಥೆಯ A, B, C ಕೂಡ ತಿಳಿಯದ ಇವರು ಜನನಾಯಕನ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಮೌನಕ್ಕೆ ಪ್ರಶ್ನೆ: ಮೈಥಿಲಿ ಠಾಕೂರ್ ಅವರ ಕ್ಷೇತ್ರವಾದ ದರ್ಬಂಗಾದಲ್ಲಿ ಇತ್ತೀಚೆಗೆ ನಡೆದ ದಲಿತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಅವರು ಯಾಕೆ ಮೌನವಾಗಿದ್ದಾರೆ ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.
ಜಂಗಲ್ ರಾಜ್ ಟೀಕೆಗೆ ಉತ್ತರ: ಮೈಥಿಲಿ ಅವರು ಆರ್‌ಜೆಡಿ ಆಡಳಿತವನ್ನು ಜಂಗಲ್ ರಾಜ್ ಎಂದು ಕರೆದದ್ದಕ್ಕೆ ಪ್ರತಿಯಾಗಿ, ಸದ್ಯ ಎನ್‌ಡಿಎ ಆಡಳಿತ ಇರುವಾಗಲೇ ಮೈಥಿಲಿ ಅವರ ತಾಯಿಯ ಒಡವೆಗಳು ಕಳವಾಗಿವೆ. ಈಗಿನ ಸುರಕ್ಷತೆಯ ಬಗ್ಗೆ ಅವರು ಯಾಕೆ ಮಾತನಾಡುವುದಿಲ್ಲ ಎಂದು ತೇಜಸ್ವಿ ವ್ಯಂಗ್ಯವಾಡಿದ್ದಾರೆ.
ಮೈಥಿಲಿ ಠಾಕೂರ್ ಅವರ ಪೌರಾಣಿಕ ಹೋಲಿಕೆ ಮತ್ತು ಅದಕ್ಕೆ ತೇಜಸ್ವಿ ಯಾದವ್ ಅವರ ತರ್ಕಬದ್ಧ ತಿರುಗೇಟು ಬಿಹಾರದ ರಾಜಕೀಯ ಅಖಾಡದಲ್ಲಿ ಮಾತಿನ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿದೆ. ಗಾಯಕಿಯಾಗಿ ಜನಪ್ರಿಯತೆ ಗಳಿಸಿದ್ದ ಮೈಥಿಲಿ, ಈಗ ಶಾಸಕಿಯಾಗಿ ನೀಡುತ್ತಿರುವ ಇಂತಹ ಪ್ರಖರ ಹೇಳಿಕೆಗಳು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತವೆ ಎಂಬುದು ಕುತೂಹಲಕಾರಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net