ಕನ್ನಡ ನಾಡು-ನುಡಿಯ ಅಭಿಮಾನಿ, ಲೇಖಕ, ವೀರಶೈವ ಮಹಾಸಭೆ ಮತ್ತು ಶಿವಯೋಗಮಂದಿರ ಸ್ಥಾಪನೆಯಲ್ಲಿ ಸಕ್ರಿಯರಾಗಿದ್ದ ಧಾರವಾಡದ ಗುರುಬಸಪ್ಪ ಹಳಕಟ್ಟಿಯವರ ಪುತ್ರನಾಗಿ 1880ರ ಜುಲೈ 2ರಂದು ಜನಿಸಿದ ಫಕೀರಪ್ಪ ತಂದೆಯ ಸುಸಂಸ್ಕೃತ ಸಮಾಜಸೇವಾ ಶಕ್ತ ಶರಣ ಗುಣಗಳನ್ನು ಬಳುವಳಿಯಾಗಿ ಪಡೆದು, ಪ್ರತಿಭಾನ್ವಿತರಾಗಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ, ಎಲ್.ಎಲ್.ಬಿ ಪಡೆದು, ವಕೀಲಿ ವೃತ್ತಿ ಕೈಗೊಳ್ಳುವಾಗ ಅವರ ಮಾವನವರಾಗಿದ್ದ, ಕೆ.ಎಲ್.ಇ ಸ್ಥಾಪಕರಲ್ಲೊಬ್ಬರಾದ ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿಯವರ ಸಲಹೆಯಂತೆ ವಿಜಯಪುರದಲ್ಲಿ 1904ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಅದೇ ವರ್ಷ ಧಾರವಾಡದಲ್ಲಿ ಸಮಾವೇಶಗೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭೆ ಪ್ರಥಮ ಅಧಿವೇಶನದಲ್ಲಿ, ‘ಕರ್ನಾಟಕದಲ್ಲಿ ಲಿಂಗಾಯತರ ಸ್ಥಿತಿಗತಿ ತೀವ್ರ ದುಸ್ತರವಾಗಿದೆ. ಸಮಾಜ ಮೇಲೆತ್ತಲು ಜಿಲ್ಲೆಗೊಂದರಂತೆ ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಸಿರಸಂಗಿ ಲಿಂಗರಾಜರು ಒತ್ತಿ ಹೇಳಿದ್ದರು.