ಕೊಹ್ಲಿ-ಧೋನಿ ಅಲ್ಲವೇ ಅಲ್ಲ!...1,189 ಕೋಟಿ ರೂ ಬ್ರ್ಯಾಂಡ್ ಮೌಲ್ಯ ಹೊಂದಿರುವ ಆ ನಿವೃತ್ತ ಭಾರತೀಯ ಕ್ರಿಕೆಟರ್ ಯಾರು..?

ಕೊಹ್ಲಿ-ಧೋನಿ ಅಲ್ಲವೇ ಅಲ್ಲ!...1,189 ಕೋಟಿ ರೂ ಬ್ರ್ಯಾಂಡ್ ಮೌಲ್ಯ ಹೊಂದಿರುವ ಆ ನಿವೃತ್ತ ಭಾರತೀಯ ಕ್ರಿಕೆಟರ್ ಯಾರು..?
ಕೊಹ್ಲಿ-ಧೋನಿ ಅಲ್ಲವೇ ಅಲ್ಲ!...1,189 ಕೋಟಿ ರೂ ಬ್ರ್ಯಾಂಡ್ ಮೌಲ್ಯ ಹೊಂದಿರುವ ಆ ನಿವೃತ್ತ ಭಾರತೀಯ ಕ್ರಿಕೆಟರ್ ಯಾರು..?
Published on

ಕ್ರೀಡಾಲೋಕದಿಂದ ನಿವೃತ್ತಿಯಾಗಿ ದಶಕವೇ ಕಳೆಯುತ್ತಾ ಬಂದರೂ, ಅವರ ಅಬ್ಬರ ಮಾತ್ರ ಮೈದಾನದಿಂದ ಆಚೆಗೂ ಒಂದಿಷ್ಟೂ ತಗ್ಗಿಲ್ಲ. ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಕೋಟ್ಯಂತರ ಜನರ ಎದೆಮಿಡಿತ ಹೆಚ್ಚಿಸುತ್ತಿದ್ದ ಆ ಆಟಗಾರ, ಇಂದಿಗೂ ಇಡೀ ದೇಶದ ಬ್ರ್ಯಾಂಡ್ ಜಗತ್ತನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದ್ದಾರೆ.

ಕ್ರೋಲ್ ಇಂಡಿಯಾ ಸೆಲೆಬ್ರಿಟಿ ಬ್ರ್ಯಾಂಡ್ ವ್ಯಾಲ್ಯುಯೇಷನ್ 2025ರ ವರದಿಯ ಪ್ರಕಾರ, ಸಚಿನ್ ತೆಂಡೂಲ್ಕರ್ ಭಾರತದ ಟಾಪ್ 5 ಬ್ರ್ಯಾಂಡ್ ಸೆಲೆಬ್ರಿಟಿಗಳ ಸಾಲಿನಲ್ಲಿ ಭದ್ರವಾಗಿ ನೆಲೆಸಿದ್ದಾರೆ. ಅವರ ಪ್ರಸ್ತುತ ಬ್ರ್ಯಾಂಡ್ ಮೌಲ್ಯ $125.9 ಮಿಲಿಯನ್ ಅಂದರೆ ಸುಮಾರು 1,189 ಕೋಟಿ ರೂ. ನಿವೃತ್ತಿಯ ನಂತರವೂ ಭಾರತದ ಟಾಪ್ 10 ಬ್ರ್ಯಾಂಡ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಿರಂತರವಾಗಿ ಜಾಗ ಪಡೆಯುತ್ತಿರುವ ಏಕೈಕ ಕ್ರೀಡಾಪಟು ಸಚಿನ್. ಅವರ ಮೇಲಿರುವ ಅಚಲ ನಂಬಿಕೆ, ಪ್ರಾಮಾಣಿಕತೆ ಮತ್ತು ಜನಪ್ರಿಯತೆ ಇಂದಿಗೂ ದೈತ್ಯ ಕಂಪನಿಗಳನ್ನು ಅವರತ್ತ ಆಕರ್ಷಿಸುತ್ತಿದೆ.
ತಮ್ಮ ಪೀಳಿಗೆಯ ಅತ್ಯಂತ ಪರಿಪೂರ್ಣ ಬ್ಯಾಟರ್ ಎನಿಸಿಕೊಂಡಿದ್ದ ಸಚಿನ್, ಕ್ರಿಕೆಟ್ ಚರಿತ್ರೆಯಲ್ಲೇ ಗರಿಷ್ಠ ರನ್ ಕಲೆಹಾಕಿದ ಮಹಾನ್ ಆಟಗಾರ. ಟೆಸ್ಟ್ ಮತ್ತು ಏಕದಿನ ಎರಡೂ ಮಾದರಿಗಳಲ್ಲಿ ಗರಿಷ್ಠ ಶತಕ ಸಿಡಿಸಿದ ಹೆಗ್ಗಳಿಕೆ ಇವರದ್ದಾಗಿದೆ. ವಿಶೇಷವೆಂದರೆ, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಲು ಅವರು 79 ಪಂದ್ಯಗಳವರೆಗೆ ಕಾಯಬೇಕಾಯಿತು.

ದಾಖಲೆಗಳ ಮಾಸ್ಟರ್ ಬ್ಲಾಸ್ಟರ್

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 34,357 ರನ್ ಗಳಿಸಿರುವ ಸಚಿನ್, ಸಾರ್ವಕಾಲಿಕ ಶ್ರೇಷ್ಠ ರನ್ ಸರದಾರರಾಗಿ ಮೆರೆಯುತ್ತಿದ್ದಾರೆ. ಅತಿ ಹೆಚ್ಚು ಅಂದರೆ 200 ಟೆಸ್ಟ್ ಪಂದ್ಯಗಳನ್ನು ಆಡಿದ ಏಕೈಕ ಆಟಗಾರರಾಗಿರುವ ಇವರು, ಈ ಮಾದರಿಯಲ್ಲಿ 15,921 ರನ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. 51 ಶತಕ ಹಾಗೂ 2058 ಬೌಂಡರಿಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಕೇವಲ 200 ಇನ್ನಿಂಗ್ಸ್‌ಗಳಲ್ಲಿ 15,000 ಟೆಸ್ಟ್ ರನ್ ಪೂರೈಸುವ ಮೂಲಕ ಈ ಮೈಲಿಗಲ್ಲು ತಲುಪಿದ ವಿಶ್ವದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡಿದ್ದಾರೆ.
22 ವರ್ಷ 91 ದಿನಗಳ ಕಾಲ ಏಕದಿನ ಕ್ರಿಕೆಟ್ ಆಡಿದ ಸುದೀರ್ಘ ವೃತ್ತಿಜೀವನದ ದಾಖಲೆಯೂ ಸಚಿನ್ ಹೆಸರಲ್ಲಿದೆ. 1998ರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅವರು ಬಾರಿಸಿದ 1894 ರನ್ ಮತ್ತು 9 ಶತಕಗಳ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಏಕದಿನ ಮಾದರಿಯಲ್ಲಿ ಗರಿಷ್ಠ 145 ಅರ್ಧಶತಕ ಹಾಗೂ 2016 ಬೌಂಡರಿಗಳನ್ನು ಸಿಡಿಸಿರುವ ಇವರು, ಕೇವಲ 440 ಇನ್ನಿಂಗ್ಸ್‌ಗಳಲ್ಲಿ 18000 ರನ್ ಪೂರೈಸಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಬರೆದಿದ್ದಾರೆ.
ಭಾರತದ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್, ಮೈದಾನದ ಒಳಗೂ ಮತ್ತು ಹೊರಗೂ ಭಾರತೀಯ ಕ್ರೀಡಾರಂಗದ ಸಾರ್ವಕಾಲಿಕ ರಾಜನಾಗಿ ಮೆರೆಯುತ್ತಿದ್ದಾರೆ ಎಂದರೆ ತಪ್ಪಾಗದು.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net