ಅಂತಾರಾಷ್ಟ್ರೀಯ ರಾಜಕಾರಣ, ರಾಜತಂತ್ರ, ಜಾಗತಿಕ ಭೂ-ರಾಜಕೀಯ, ಭೂ-ಆರ್ಥಿಕತೆ, ಭೂ-ಸಾಮರಿಕತೆಯಲ್ಲಿ ಭಾರತಕ್ಕೆ ಸಿಗುತ್ತಿರುವ ಈ ಪ್ರಾಮುಖ್ಯತೆ ಏಕಾಏಕಿ ಒದಗಿಬಂದದ್ದಲ್ಲ. ಅದು ಕಳೆದೊಂದು ದಶಕದಲ್ಲಿ ಭಾರತ ಅನುಸರಿಸಿಕೊಂಡು ಬರುತ್ತಿರುವ ವಿದೇಶಾಂಗ ನೀತಿಯ ಪರಿಣಾಮ. ತನ್ನ ಆರ್ಥಿಕ ಹಾಗೂ ರಕ್ಷಣಾ ಸಾಮಗ್ರಿಗಳ ಅಗತ್ಯದ ಪೂರೈಕೆಗಾಗಿ ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸೀಮಿತತೆಯನ್ನು ಕೊಡವಿ, ತನ್ನ ವ್ಯಾಪಾರ, ಇಂಧನ ಪೂರೈಕೆ ಹಾಗೂ ಯುದ್ಧೋಪಕರಣಗಳ ಅಗತ್ಯಗಳ ಖರೀದಿಯಲ್ಲಿ ಭಾರತದ ಆಯ್ಕೆಗಳನ್ನು ವಿಸ್ತಾರಗೊಳಿಸಿದ ಮೋದಿ ಸರ್ಕಾರದ ವಿವೇಕಯುತ ನೀತಿನಿಲುವುಗಳೂ ದೀರ್ಘಕಾಲಿಕ ಫಲ ನೀಡುವ ಸನ್ನಿವೇಶ ಇಂದು ಅನಾವರಣಗೊಳ್ಳತೊಡಗಿದೆ, ಯಾರಿಗೂ ಇರಿಸುಮುರಿಸಾಗದಂತೆ. ಇದು ಗಮನಾರ್ಹ.