ವೈಭವ್​ಗೆ ಎದುರಾಗಲಿದೆಯಂತೆ ಆ ಆಟಗಾರನ ಪರಿಸ್ಥಿತಿ...ಚಕ್ರವ್ಯೂಹ ಭೇದಿಸುತ್ತಾರಾ ಸೂರ್ಯವಂಶಿ..? ಪಠಾಣ್ ನೀಡಿದ್ರು ಭಯಾನಕ ಎಚ್ಚರಿಕೆ | Vaibhav Suryavansh

Vaibhav Suryavanshi |  ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ
Vaibhav Suryavanshi | ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ
Published on
Vaibhav Suryavanshi: ಮಾರ್ಚ್ 28ರಿಂದ ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿ ಆರಂಭವಾಗಲಿದ್ದು, ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಈಗ ಆ 14 ವರ್ಷದ ದೈತ್ಯ ಪ್ರತಿಭೆಯ ಮೇಲಿದೆ. ಆತನೇ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ. ಕಳೆದ ಸೀಸನ್‌ನಲ್ಲಿ ಶತಕ ಬಾರಿಸಿ ಇತಿಹಾಸ ಬರೆದಿದ್ದ ವೈಭವ್​​ಗೆ ಈ ಬಾರಿ ಎದುರಾಳಿ ತಂಡಗಳು ಚಕ್ರವ್ಯೂಹ ಸಿದ್ಧಪಡಿಸಿವೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷದ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪಾದಾರ್ಪಣೆ ಮಾಡಿದ್ದ ವೈಭವ್ ಸೂರ್ಯವಂಶಿ, ಐಪಿಎಲ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಆ ಸ್ಫೋಟಕ ಬ್ಯಾಟಿಂಗ್ ನೋಡಿ ದಿಗ್ಗಜರೇ ದಂಗಾಗಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ ಎಂದು ಇರ್ಫಾನ್ ಪಠಾಣ್ ಎಚ್ಚರಿಸಿದ್ದಾರೆ.

ಅಭಿಷೇಕ್ ಶರ್ಮಾ ಉದಾಹರಣೆ ನೀಡಿದ ಪಠಾಣ್!

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಮೊದಲ ಸೀಸನ್‌ನಲ್ಲಿ ನಿಮ್ಮ ಆಟ ಯಾರಿಗೂ ಗೊತ್ತಿರುವುದಿಲ್ಲ, ಆದರೆ ಈಗ ಎಲ್ಲಾ ತಂಡಗಳು ವೈಭವ್ ವಿರುದ್ಧ ಪ್ಲ್ಯಾನ್ ಮಾಡಿಕೊಂಡು ಬರುತ್ತವೆ, ಎದುರಾಳಿ ತಂಡಗಳು ಅವರ ಬ್ಯಾಟಿಂಗ್ ಶೈಲಿಯನ್ನು ಅಧ್ಯಯನ ಮಾಡಿ ಮೈದಾನಕ್ಕಿಳಿಯುತ್ತವೆ. ಕಳೆದ ಬಾರಿ ಅಭಿಷೇಕ್ ಶರ್ಮಾ ಅವರ ಅಬ್ಬರವನ್ನು ತಂಡಗಳು ಹೇಗೆ ಪ್ಲ್ಯಾನ್ ಮಾಡಿ ಕಟ್ಟಿಹಾಕಿದವೋ, ವೈಭವ್ ವಿಚಾರದಲ್ಲೂ ಅದೇ ಆಗಲಿದೆ. ಶೇ. 100ರಷ್ಟು ಇದು ಸಂಭವಿಸಲಿದೆ ಎಂದು ಪಠಾಣ್​ ಭವಿಷ್ಯ ನುಡಿದಿದ್ದಾರೆ.

ಮಾನಸಿಕ ಶಕ್ತಿಯೇ ಮುಖ್ಯ

ವೈಭವ್ ಅವರಿಗೆ ಮಾನಸಿಕ ಸ್ಥಿರತೆಯ ಬಗ್ಗೆ ಸಲಹೆ ನೀಡಿದ ಪಠಾಣ್, ಒಂದು ಶತಕ ಬಂದ ತಕ್ಷಣ ಕ್ರಿಕೆಟ್ ತುಂಬಾ ಸುಲಭ ಎಂದು ಅವನ ಮನಸ್ಸಿನಲ್ಲಿ ಬರಬಾರದು. 14 ವರ್ಷದ ಹುಡುಗನಿಗೆ ಇಂತಹ ಯಶಸ್ಸು ಸಿಕ್ಕಾಗ ಹಾದಿ ತಪ್ಪುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಸರಿಯಾದ ಮಾರ್ಗದರ್ಶನದ ಅಗತ್ಯವಿದ್ದು, ಕಳೆದ ವರ್ಷ ರಾಹುಲ್ ದ್ರಾವಿಡ್ ತೆಗೆದುಕೊಂಡ ಜವಾಬ್ದಾರಿಯನ್ನು ಈ ಬಾರಿಯೂ ಯಾರಾದರೂ ನಿರ್ವಹಿಸಬೇಕು ಎಂದಿದ್ದಾರೆ.
ವೈಭವ್​ ಕೇವಲ 14 ವರ್ಷದವನು ಎಂದು ಯೋಚಿಸುವುದೇ ಭಯಾನಕ ಸಂಗತಿ. ಸರಿಯಾದ ದಾರಿಯಲ್ಲಿ ಸಾಗಿದರೆ ಮುಂದಿನ 20 ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಇಂದಿನ ಯುಗದಲ್ಲಿ ಸುದೀರ್ಘ ಕಾಲ ಕ್ರಿಕೆಟ್ ಆಡುವುದು ದೊಡ್ಡ ಸವಾಲು. ವೈಭವ್ ಮನಸ್ಥಿತಿಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಬಿಸಿಸಿಐ ಮತ್ತು ರಾಯಲ್ಸ್ ಮ್ಯಾನೇಜ್‌ಮೆಂಟ್ ಹೊಣೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net