ಇದು ಯುಪಿ, ಬಿಹಾರವಲ್ಲ.. ಓವೈಸಿ-ಕಬೀರ್ ಮೈತ್ರಿಗೆ ಬಿಜೆಪಿ ಹಣ ನೀಡುತ್ತಿದೆ ಎಂದ ಮಮತಾ ಬ್ಯಾನರ್ಜಿ ಆಪ್ತ ಸಚಿವ | Firhad Hakim

Firhad Hakim | ಮಮತಾ ಬ್ಯಾನರ್ಜಿ ಆಪ್ತ ಸಚಿವ ಫಿರ್ಹಾದ್ ಹಕೀಮ್
Firhad Hakim | ಮಮತಾ ಬ್ಯಾನರ್ಜಿ ಆಪ್ತ ಸಚಿವ ಫಿರ್ಹಾದ್ ಹಕೀಮ್
Published on
Firhad Hakim: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ದಿನ ಕಳೆದಂತೆ ಏರಿಕೆಯಾಗುತ್ತಿದ್ದು, ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಮತ್ತು ಟಿಎಂಸಿ ಮಾಜಿ ಶಾಸಕ ಹುಮಾಯೂನ್ ಕಬೀರ್ ಜನತಾ ಉನ್ನಯನ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವುದು ಆಡಳಿತರೂಢ ಟಿಎಂಸಿ ತಲೆ ನೋವಿಗೆ ಕಾರಣವಾಗಿದೆ.
ಈ ಎರಡು ಪಕ್ಷಗಳ ಮುಖ್ಯಸ್ಥರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಮೈತ್ರಿಕೂಟವು ಮುಸ್ಲಿಂ ಮತಗಳನ್ನು ವಿಭಜಿಸಬಹುದು ಎನ್ನುವುದು ಅನೇಕರ ಲೆಕ್ಕಚಾರ. ಆದರೆ ಈ ಎಲ್ಲಾ ವಾದಗಳನ್ನು ಸಚಿವ ಫಿರ್ಹಾದ್ ಹಕೀಮ್ ತಳ್ಳಿಹಾಕಿದ್ದು, ಆ ಒಕ್ಕೂಟಕ್ಕೆ ಬಿಜೆಪಿ ಹಣಕಾಸಿನ ನೆರವು ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸಚಿವ ಹಕೀಮ್, ಬಂಗಾಳದ ಮುಸ್ಲಿಮರು ಅತ್ಯಂತ ಜಾಗೃತರಾಗಿದ್ದು, ಕೇವಲ ಧರ್ಮದ ಆಧಾರದ ಮೇಲೆ ಮತ ಚಲಾಯಿಸುವುದಿಲ್ಲ. ಈ ರಾಜ್ಯವು ಜಾತ್ಯತೀತ ರಚನೆಯನ್ನು ಹೊಂದಿದ್ದು, ಇಲ್ಲಿನ ಹಿಂದೂ ಮತ್ತು ಮುಸ್ಲಿಮರು ಕೋಮುವಾದವನ್ನು ಸಹಿಸುವುದಿಲ್ಲ. ಈ ಮೈತ್ರಿಕೂಟದಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಇರುವುದರಿಂದ, ಬಿಜೆಪಿಯೇ ಅವರಿಗೆ ಆರ್ಥಿಕ ಶಕ್ತಿಯನ್ನು ತುಂಬುತ್ತಿದೆ ಎಂದು ದೂರಿದರು.
ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಈ ಹಿಂದಿನ ಚುನಾವಣೆಗಳಲ್ಲೂ ಸ್ಪರ್ಧಿಸಿತ್ತು, ಆದರೆ ಬಂಗಾಳವು ಉತ್ತರ ಪ್ರದೇಶ ಅಥವಾ ಬಿಹಾರದಂತಹ ರಾಜಕೀಯ ಪಥವನ್ನು ಎಂದಿಗೂ ಅನುಸರಿಸುವುದಿಲ್ಲ ಎಂದು ಈ ವೇಳೆ ತಿಳಿಸಿದರು.
ಹುಮಾಯೂನ್ ಕಬೀರ್ ಅವರೊಂದಿಗಿನ ಓವೈಸಿ ಮೈತ್ರಿಯನ್ನು ಹಕೀಮ್ ಕಟುವಾಗಿ ಟೀಕಿಸಿದ್ದು, ಇಂತಹ ಮೈತ್ರಿಕೂಟಗಳು ಕೇವಲ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿವೆಯೇ ಹೊರತು ಜನರ ಹಿತಕ್ಕಲ್ಲ. ಅನೇಕ ವರ್ಷಗಳಿಂದ ಓವೈಸಿ ಅವರನ್ನು ಬಿಜೆಪಿಯ ಬಿ ಟೀಮ್​ ಎಂದು ಕರೆಯಲಾಗುತ್ತಿದ್ದು, ಈ ಬಾರಿಯೂ ಅದೇ ತಂತ್ರಗಾರಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ಬಿಜೆಪಿಯ ಮುಸ್ಲಿಂ ತುಷ್ಟೀಕರಣದ ಆರೋಪಗಳಿಗೆ ತಿರುಗೇಟು ನೀಡಿದ ಹಕೀಮ್, ಮಮತಾ ಬ್ಯಾನರ್ಜಿ ಸರ್ಕಾರವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲಾ ಹಿಂದುಳಿದ ಸಮುದಾಯಗಳನ್ನು ಸಾಮಾಜಿಕವಾಗಿ ಮೇಲಕ್ಕೆತ್ತುವ ಕೆಲಸ ಮಾಡುತ್ತಿದೆ. ಬಿಜೆಪಿ ಜನರ ತಲೆಯಲ್ಲಿ ಹಿಂದೂ ವರ್ಸಸ್ ಮುಸ್ಲಿಂ ಎಂಬ ಭಾವನೆಯನ್ನು ತುಂಬುತ್ತಿದ್ದರೆ. ಇತ್ತ ಟಿಎಂಸಿ ಅಭಿವೃದ್ಧಿಯ ಮಂತ್ರವನ್ನು ನಂಬಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net