ಇದು ಜನಾದೇಶವಲ್ಲ, ‘ಸಿನಿಮಾ ಸುನಾಮಿ’: ತಮಿಳುನಾಡಿನಲ್ಲಿ ನಟ ವಿಜಯ್ ಸರ್ಕಾರದ ಪತನಕ್ಕೆ ಸ್ಟಾಲಿನ್ ರಣಕಹಳೆ! ಕಾಂಗ್ರೆಸ್ ನಮ್ಮ ಬೆನ್ನಿಗಿರಿದಿದೆ ಎಂದ ಡಿಎಂಕೆ! M.K Stalin

ಇದು ಜನಾದೇಶವಲ್ಲ, ‘ಸಿನಿಮಾ ಸುನಾಮಿ’: ತಮಿಳುನಾಡಿನಲ್ಲಿ ನಟ ವಿಜಯ್ ಸರ್ಕಾರದ ಪತನಕ್ಕೆ ಸ್ಟಾಲಿನ್ ರಣಕಹಳೆ! ಕಾಂಗ್ರೆಸ್ ನಮ್ಮ ಬೆನ್ನಿಗಿರಿದಿದೆ ಎಂದ ಡಿಎಂಕೆ!
ಇದು ಜನಾದೇಶವಲ್ಲ, ‘ಸಿನಿಮಾ ಸುನಾಮಿ’: ತಮಿಳುನಾಡಿನಲ್ಲಿ ನಟ ವಿಜಯ್ ಸರ್ಕಾರದ ಪತನಕ್ಕೆ ಸ್ಟಾಲಿನ್ ರಣಕಹಳೆ! ಕಾಂಗ್ರೆಸ್ ನಮ್ಮ ಬೆನ್ನಿಗಿರಿದಿದೆ ಎಂದ ಡಿಎಂಕೆ!
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ ಅಲ್ಲಿನ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಟನಿಂದ ರಾಜಕಾರಣಿಯಾಗಿ ಬದಲಾಗಿರುವ ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ ಮೈತ್ರಿ ಸರ್ಕಾರವನ್ನು ಕೆಳಗಿಳಿಸಲು ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಎಂ.ಕೆ. ಸ್ಟಾಲಿನ್(M.K Stalin) ಭರ್ಜರಿ ರಣಕಹಳೆ ಊದಿದ್ದಾರೆ. ಕೇವಲ ಒಂದು ವಾರದಿಂದ ಸತತವಾಗಿ ವಿಜಯ್ ಸರ್ಕಾರದ ಅಸ್ಥಿರತೆ ಮತ್ತು ಕಾಂಗ್ರೆಸ್ ಪಕ್ಷದ ಬೆನ್ನಿಗಿರಿದ ದ್ರೋಹದ ಕುರಿತು ಮಾತನಾಡುತ್ತಿರುವ ಸ್ಟಾಲಿನ್, ತಮ್ಮ ಪಕ್ಷದ ಕಾರ್ಯಕರ್ತರಿಗೆ ವಿಜಯ್ ಸರ್ಕಾರವನ್ನು ಪತನಗೊಳಿಸಲು ಸಜ್ಜಾಗುವಂತೆ ಕರೆ ನೀಡಿದ್ದಾರೆ.
ಚುನಾವಣೆಯ ಬೆನ್ನಲ್ಲೇ ವಿಜಯ್ ಸರ್ಕಾರಕ್ಕೆ 6 ತಿಂಗಳ ಕಾಲ ತೊಂದರೆ ಕೊಡುವುದಿಲ್ಲ ಎಂದು ನೀಡಿದ್ದ ಮಾತನ್ನು ಸ್ಟಾಲಿನ್ ಈಗ ಮುರಿದಿದ್ದಾರೆ. ತಮಿಳುನಾಡು ರಾಜಕಾರಣದಲ್ಲಿ ಸದ್ಯ ಸೃಷ್ಟಿಯಾಗಿರುವ ಈ ಹೈಡ್ರಾಮಾವನ್ನು ಸ್ಟಾಲಿನ್ ಅವರ 7 ಪ್ರಮುಖ ವಾಗ್ದಾಳಿಗಳ ಮೂಲಕ ವಿಶ್ಲೇಷಿಸಲಾಗಿದೆ.

1. ನಮ್ಮವರ ಬೆಂಬಲದಿಂದಲೇ ವಿಜಯ್ ಸರ್ಕಾರ ಉಸಿರಾಡುತ್ತಿದೆ!

ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಸ್ವಂತ ಸಿದ್ದಾಂತ ಅಥವಾ ಶಾಸಕರ ಬಲವಿಲ್ಲ ಎಂದು ಸ್ಟಾಲಿನ್ ಲೇವಡಿ ಮಾಡಿದ್ದಾರೆ. ಇವತ್ತು ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ಅಸ್ತಿತ್ವದಲ್ಲಿದೆ ಎಂದರೆ ಅದಕ್ಕೆ ಡಿಎಂಕೆ ಕಾರಣ. ಏಕೆಂದರೆ ನಿನ್ನೆಯವರೆಗೂ ನಮ್ಮ ಮೈತ್ರಿಯಲ್ಲಿದ್ದ ಪಕ್ಷಗಳೇ ಇಂದು ವಿಜಯ್ ಅವರಿಗೆ ಲೈಫ್ ಸಪೋರ್ಟ್ ನೀಡುತ್ತಿವೆ. ನಮ್ಮವರ ಬೆಂಬಲದ ಮೇಲೆಯೇ ಈ ಸರ್ಕಾರ ಉಸಿರಾಡುತ್ತಿದೆ ಎಂದು ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ.

2. ಬಿಜೆಪಿಗೆ ದಾರಿ ಮಾಡಿಕೊಡದಿರಲು ಸುಮ್ಮನಿದ್ದೆವು

ಚುನಾವಣೆಯ ಬೆನ್ನಲ್ಲೇ ನಾವು ಸರ್ಕಾರ ಉರುಳಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಅದಕ್ಕೆ ಪ್ರಮುಖ ಕಾರಣವೊಂದಿದೆ ಎಂದು ಸ್ಟಾಲಿನ್ ಬಹಿರಂಗಪಡಿಸಿದ್ದಾರೆ. ಒಂದು ವೇಳೆ ನಾವು ತಕ್ಷಣವೇ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿತ್ತು. ಇದು ಪರೋಕ್ಷವಾಗಿ ತಮಿಳುನಾಡಿನಲ್ಲಿ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ದಾರಿ ಮಾಡಿಕೊಡುತ್ತಿತ್ತು. ಅದನ್ನು ತಡೆಯಲು ನಾವು ಸುಮ್ಮನಿದ್ದೆವು ಎಂದಿದ್ದಾರೆ.
3. ಕಾಯುವ ಸಮಯ ಮುಗಿಯಿತು, ಇನ್ನು ಆಟ ಶುರು!
ಇಷ್ಟು ದಿನ ತಾಳ್ಮೆಯಿಂದ ನೋಡೋಣ ಏನಾಗುತ್ತದೆ ಎಂದು ಕಾಯುತ್ತಿದ್ದ ಡಿಎಂಕೆಯ ತಂತ್ರ ಈಗ ಸಂಪೂರ್ಣ ಬದಲಾಗಿದೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ನಮ್ಮ ಶಾಂತಿಯುತ ಕಾಯುವಿಕೆಯ ಸಮಯ ಮುಗಿದಿದೆ. ಈಗ ತಮಿಳುನಾಡಿನ ರಾಜಕೀಯ ಸಮೀಕರಣಗಳು ಬದಲಾಗಿವೆ. ಇನ್ನು ಮುಂದೆ ನಾವು ಸುಮ್ಮನೆ ಕೂರುವುದಿಲ್ಲ, ನೇರ ರಾಜಕೀಯ ಹೋರಾಟಕ್ಕೆ ಧುಮುಕಲಿದ್ದೇವೆ ಎಂದು ಅಧಿಕೃತವಾಗಿ ಸಾರಿದ್ದಾರೆ.

4. ವಿಜಯ್ ಸರ್ಕಾರ ಉರುಳಿಸಲು ಪ್ರತಿಜ್ಞೆ ಮಾಡಿ

ಡಿಎಂಕೆ ಕಾರ್ಯಕರ್ತರಿಗೆ ನೇರ ನಿರ್ದೇಶನ ನೀಡಿರುವ ಸ್ಟಾಲಿನ್, ಈ ಅಪವಿತ್ರ ಮತ್ತು ಅಸ್ಥಿರ ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಲು ಸಾಧ್ಯವೇ ಇಲ್ಲ. ಇದರ ಒಳಗಿನ ಆಂತರಿಕ ಕಲಹಗಳಿಂದಲೇ ಇದು ಶೀಘ್ರದಲ್ಲೇ ಉರುಳಲಿದೆ. ಈ ಟಿವಿಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಇಂದೇ ಪ್ರತಿಜ್ಞೆ ಮಾಡಿ ಮತ್ತು ಶೀಘ್ರದಲ್ಲೇ ಬರಲಿರುವ ಚುನಾವಣೆಗೆ ಸಿದ್ಧರಾಗಿ ಎಂದು ಕರೆ ನೀಡಿದ್ದಾರೆ.
5. ಇದು ಜನಾದೇಶದ ಸುನಾಮಿ ಅಲ್ಲ, ‘ಸಿನಿಮಾ ಸುನಾಮಿ’!
ವಿಜಯ್ ಅವರ ಆಡಳಿತದ ಬಗ್ಗೆ ಮಾತನಾಡಿದ ಸ್ಟಾಲಿನ್, ಈ ನಟನ ಸಿನಿಮಾ ಜನಪ್ರಿಯತೆ ನೋಡಿ ಜನ ಸದ್ಯಕ್ಕೆ ಮಾರುಹೋಗಿದ್ದಾರೆ ಅಷ್ಟೆ. ಕೆಲವೇ ದಿನಗಳಲ್ಲಿ ಜನರಿಗೆ ಈ ಹೊಸತನದ ಭ್ರಮೆ ಕಳಚಿ ಆಡಳಿತದ ಅಸಲಿ ಮುಖ ತಿಳಿಯಲಿದೆ. ಆಗ ಜನರೇ ಬೇಸತ್ತು ಇವರನ್ನು ಕಿತ್ತೊಗೆಯುತ್ತಾರೆ. ಇತ್ತೀಚಿನ ಚುನಾವಣಾ ಫಲಿತಾಂಶವೇನೂ ರಾಜಕೀಯ ಸುನಾಮಿ ಅಲ್ಲ, ಅದೊಂದು ಕೇವಲ ಸಿನಿಮಾ ಸುನಾಮಿ. ಅದು ಬಂದಷ್ಟೇ ವೇಗವಾಗಿ ಇಳಿದು ಹೋಗುತ್ತದೆ. ಡಿಎಂಕೆ ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

6. ಕಾಂಗ್ರೆಸ್ ಒಂದು ‘ಪರಾವಲಂಬಿ’, ಬೆನ್ನಿಗಿರಿದ ಮಹಾದ್ರೋಹಿ!

ಡಿಎಂಕೆ ಮಂಡಿಸಿರುವ ರಾಜಕೀಯ ನಿರ್ಣಯದಲ್ಲಿ ಕಾಂಗ್ರೆಸ್ ವಿರುದ್ಧ ಅತ್ಯಂತ ಕಠಿಣ ಪದಗಳನ್ನು ಬಳಸಲಾಗಿದೆ. ಚುನಾವಣೆಯಲ್ಲಿ ಡಿಎಂಕೆ ಕಾರ್ಯಕರ್ತರ ರಕ್ತ-ಬೆವರಿನ ಶ್ರಮದಿಂದಾಗಿ ಕಾಂಗ್ರೆಸ್ 28 ಶಾಸಕ ಸ್ಥಾನ ಹಾಗೂ ಒಂದು ರಾಜ್ಯಸಭಾ ಸ್ಥಾನವನ್ನು ಗೆದ್ದುಕೊಂಡಿತು. ಆದರೆ ಗೆದ್ದ ಮೂರೇ ದಿನಗಳಲ್ಲಿ 50 ವರ್ಷಗಳ ದ್ರಾವಿಡ ಸ್ನೇಹವನ್ನು ಮರೆತು ವಿಜಯ್ ಬಣ ಸೇರಿಕೊಂಡಿತು.
ಕಾಂಗ್ರೆಸ್ ಕೃತಜ್ಞತೆ ಇಲ್ಲದ ಪರಾವಲಂಬಿ ಜೀವಿ. ಗೆಲುವಿಗೆ ಕೃತಜ್ಞತೆ ಹೇಳಲು ನಮ್ಮ ನಾಯಕರನ್ನು ಖುದ್ದಾಗಿ ಬಂದು ಭೇಟಿಯಾಗುವ ಕನಿಷ್ಠ ಸೌಜನ್ಯವೂ ಅದಕ್ಕಿರಲಿಲ್ಲ. ಪುದುಚೇರಿಯಲ್ಲೂ ನಮ್ಮ ವಿರುದ್ಧವೇ ಅಭ್ಯರ್ಥಿಗಳನ್ನು ನಿಲ್ಲಿಸಿ ದ್ರೋಹ ಮಾಡಿತು. ಬೇರೆ ರಾಜ್ಯಗಳಲ್ಲಿ ಬಿಜೆಪಿ ಹೇಗೆ ಅಧಿಕಾರದ ಆಸೆಗೆ ತತ್ವ ಸಿದ್ಧಾಂತ ಗಾಳಿಗೆ ತೂರುತ್ತದೆಯೋ, ಕಾಂಗ್ರೆಸ್ ಕೂಡ ತಮಿಳುನಾಡಿನಲ್ಲಿ ಅದನ್ನೇ ಮಾಡಿದೆ ಎಂದು ಡಿಎಂಕೆ ಆಕ್ರೋಶ ಹೊರಹಾಕಿದೆ.

7. ಕುದುರೆ ವ್ಯಾಪಾರದಲ್ಲಿ ಮುಳುಗಿದ ಸ್ವಚ್ಛ ಹಸ್ತ!

ತಮ್ಮನ್ನು ತಾವು ಅತ್ಯಂತ ಸ್ವಚ್ಛ ರಾಜಕಾರಣಿಗಳು ಎಂದು ಕರೆದುಕೊಳ್ಳುವ ಟಿವಿಕೆ ನಾಯಕರು, ವಿಶ್ವಾಸಮತ ಯಾಚನೆಗಾಗಿ ಎಐಎಡಿಎಂಕೆಯ ಮೂವರು ಶಾಸಕರನ್ನು ರಾಜೀನಾಮೆ ಕೊಡಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಮೊದಲ ದೃಶ್ಯದಲ್ಲಿ ಇವರು ನಮ್ಮ ಹಳೇ ಮಿತ್ರರ ಬೆಂಬಲ ಬೇಡಿದರು, ಎರಡನೇ ದೃಶ್ಯದಲ್ಲಿ ಎಐಎಡಿಎಂಕೆ ಶಾಸಕರ ಜೊತೆ ಸಚಿವಾಲಯದಲ್ಲೇ ಕುದುರೆ ವ್ಯಾಪಾರ ಮಾಡಿದರು. ಇಂತಹ ಕೊಳಕು ರಾಜಕಾರಣ ನೋಡಲು ಜನ ನಿಮಗೆ ವೋಟ್ ಹಾಕಿದ್ದರೇ ಎಂದಿದ್ದಾರೆ. ಇದರೊಂದಿಗೆ ವಿಜಯ್ ಅವರ ಭ್ರಷ್ಟ ಮುಖ ಹಾಗೂ ಕಾಂಗ್ರೆಸ್‌ನ ನಕಲಿ ಬಿಜೆಪಿ ವಿರೋಧಿ ನಿಲುವು ಜಗತ್ತಿಗೆ ಸಾಬೀತಾಗಿದೆ ಎಂದು ಸ್ಟಾಲಿನ್ ಎಕ್ಸ್​ ಪೋಸ್ಟ್​ನಲ್ಲಿ ಆಕ್ರೋಶ ಮಾಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net