ಇದು ಆಟವಲ್ಲ, ಶರಣಾಗತಿ! ಭಾರತದ ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ವಿಶ್ವಕಪ್​ ವಿಜೇತ ನಾಯಕ | Kapil Dev

ಇದು ಆಟವಲ್ಲ, ಶರಣಾಗತಿ! ಭಾರತದ ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ವಿಶ್ವಕಪ್​ ವಿಜೇತ ನಾಯಕ
ಇದು ಆಟವಲ್ಲ, ಶರಣಾಗತಿ! ಭಾರತದ ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ವಿಶ್ವಕಪ್​ ವಿಜೇತ ನಾಯಕ
Published on

ಪ್ರಮುಖ ಮುಖ್ಯಾಂಶಗಳು

  • ಸೋಲನ್ನಲ್ಲ, ಭಾರತೀಯ ಆಟಗಾರರ 'ಶರಣಾಗತಿ'ಯನ್ನು ಪ್ರಶ್ನಿಸಿದ ದಿಗ್ಗಜ.
  • ಅಕ್ಷರ್ ಪಟೇಲ್ ಅಂತಹ ಆಟಗಾರನನ್ನು ಹೊರಗಿಟ್ಟಿದ್ದಕ್ಕೆ ಆಕ್ಷೇಪ.
  • ನಿರ್ಣಾಯಕ ಪಂದ್ಯದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳ ಬಗ್ಗೆ ಅಸಮಾಧಾನ.
ಅಹಮದಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ಅನುಭವಿಸಿದ ಹೀನಾಯ ಸೋಲು ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಮುಖಭಂಗದ ಕುರಿತು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್(Kapil Dev) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಂಡದ ಆಯ್ಕೆ ಮತ್ತು ನಾಯಕತ್ವದ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದ್ದಾರೆ.

ಶರಣಾಗತಿಗೆ ಸಮರ್ಥನೆಯೇ ಇಲ್ಲ

ಈ ಸೋಲಿನ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕಪಿಲ್ ದೇವ್, ತವರಿನಲ್ಲಿ ಇಂತಹ ದೊಡ್ಡ ಸೋಲು ಅನುಭವಿಸುವುದು ನಿಜಕ್ಕೂ ಅತ್ಯಂತ ಮುಜುಗರದ ಸಂಗತಿಯಾಗಿದೆ. ಕ್ರಿಕೆಟ್‌ನಲ್ಲಿ ಗೆಲುವು ಮತ್ತು ಸೋಲು ಸಾಮಾನ್ಯ. ಆದರೆ, ಮೈದಾನದಲ್ಲಿ ಹೋರಾಟವನ್ನೇ ಮಾಡದೆ ಈ ರೀತಿ ಶರಣಾಗುವುದು ಸರಿಯಲ್ಲ. ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಗುಡುಗಿದ್ದಾರೆ. ಭಾರತದ ಬ್ಯಾಟಿಂಗ್ ವೈಫಲ್ಯ ಮತ್ತು ಮೈದಾನದಲ್ಲಿ ಆಟಗಾರರ ತೋರಿದ ನಿರಾಸಕ್ತಿ ಅವರನ್ನು ಕೆರಳಿಸಿದೆ.

ಅಕ್ಷರ್ ಪಟೇಲ್ ಕೈಬಿಟ್ಟಿದ್ದಕ್ಕೆ ಆಕ್ರೋಶ

ತಂಡದ ಆಯ್ಕೆಯ ಬಗ್ಗೆಯೂ ಪ್ರಶ್ನೆ ಎತ್ತಿದ ದಿಗ್ಗಜ ನಾಯಕ, ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದನ್ನು ಕಟುವಾಗಿ ಟೀಕಿಸಿದ್ದಾರೆ. ಇಂತಹ ಪ್ರಮುಖ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರಂತಹ ಫಾರ್ಮ್‌ನಲ್ಲಿರುವ ಆಟಗಾರನನ್ನು ಕೈಬಿಡಲು ಯಾವುದೇ ಸಮರ್ಥನೆಯಿಲ್ಲ. ಈ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾರೆ, ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ತಂಡದ ಸೆಲೆಕ್ಷನ್ ಮತ್ತು ನಾಯಕತ್ವದ ಬಗ್ಗೆ ಮಾತನಾಡಲು ಈಗ ಏನೂ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೇಶಿ ಕ್ರಿಕೆಟ್ ಕಡೆಗಣನೆಯೇ ಮುಳುವಾಯ್ತಾ..?

ಭಾರತೀಯ ಆಟಗಾರರು ಸ್ಪಿನ್ ಎದುರಿಸಲು ಪರದಾಡುತ್ತಿರುವುದನ್ನು ಗಮನಿಸಿದ ಕಪಿಲ್, ಇಂದಿನ ಆಟಗಾರರು ದೇಶಿ ಕ್ರಿಕೆಟ್ ಆಡಲು ಆಸಕ್ತಿ ತೋರುತ್ತಿಲ್ಲ ಎಂದು ಈ ಹಿಂದೆ ಹೇಳಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್‌ಗಳು ತತ್ತರಿಸಿದ ರೀತಿ ದಿಗ್ಗಜನನ್ನು ಆಘಾತಕ್ಕೀಡು ಮಾಡಿದೆ. ಈ ಪಂದ್ಯ ನಮಗೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಕಿಡಿಕಾರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು

ನಿನ್ನೆ (ಫೆ.22) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್​ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್​, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್​ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್​, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್​ ಓವರ್​ಗಳಲ್ಲಿ ಅದ್ಭುತ ಬ್ಯಾಟಿಂಗ್​ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್​, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್​ ಸಿಂಗ್​ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್​, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್​ನಲ್ಲಿ ವಿಫಲರಾದ್ದರಿಂದ ಟೀಮ್​ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net