ಆದರೆ ಮದ್ರಾಸ್/ತಮಿಳುನಾಡಿನಲ್ಲಿ ಆದದ್ದೇ ಬೇರೆ. ತನ್ನ ಆಡಳಿತಶಾಹಿ ಸ್ಥಾನಮಾನ ಹಾಗೂ ಆರ್ಥಿಕ ಶಕ್ತಿಗೆ ಪರಧರ್ವಿುಯರಿಂದ ಅಪಾಯವನ್ನು ಕಾಣದ ತಮಿಳು ಹಿಂದೂ ಉಚ್ಚವರ್ಗ ತನ್ನೆಲ್ಲಾ ಸಾಮಾಜಿಕ, ಆರ್ಥಿಕ ಹಾಗೂ ಆಡಳಿತಶಾಹಿ ಮದವನ್ನು ತೋರಿದ್ದು ಇತರ ಹಿಂದೂ ಜಾತಿಗಳ ಮೇಲೆ. ಇದರಿಂದಾಗಿ ತಮಿಳು ಹಿಂದೂಗಳಲ್ಲಿ ಜಾತಿ ತಾರತಮ್ಯ ಹಾಗೂ ವೈಷಮ್ಯ ದೊಡ್ಡದಾಗಿ ಬೆಳೆದು ಅಂತಿಮವಾಗಿ ಶತಮಾನದ ಹಿಂದೆ ವ್ಯಾಪಕ ಬ್ರಾಹ್ಮಣ-ವಿರೋಧಿ ಆಂದೋಲನಕ್ಕೆ ಕಾರಣವಾಯಿತು. ಆಗ ಹಲವು ತಮಿಳು ಬ್ರಾಹ್ಮಣ ಕುಟುಂಬಗಳು ಮೈಸೂರು ಮತ್ತು ಪಾಲಕ್ಕಾಡಿಗೆ ವಲಸೆಹೋದದ್ದು ಈಗ ಇತಿಹಾಸ. ಇಷ್ಟಾಗಿಯೂ ತಮಿಳು ಭಾಷೆ ಹಾಗೂ ತಮಿಳುನಾಡಿನ ಏಳಿಗೆಯ ವಿಷಯ ಬಂದಾಗ ತಮಿಳರು ರಾಜ್ಯದ ಒಳಗಿರಲಿ ಹೊರಗಿರಲಿ ಜಾತಿ ವೈರವನ್ನು ಮರೆತು ಒಟ್ಟಿಗೆ ಶ್ರಮಿಸುವುದು ಇತರ ಭಾಷಿಕರಿಗೆ ಅನುಕರಣೀಯ. ಇದಕ್ಕೊಂದು ದೊಡ್ಡ ಉದಾಹರಣೆಯಾಗಿ ನೀಲಗಿರಿ ಜಿಲ್ಲೆಯ ಕುರಿತಾಗಿ ಸಿ. ರಾಜಗೋಪಾಲಾಚಾರಿ (ರಾಜಾಜಿ) ಅನುಸರಿಸಿದ ನಡೆಯನ್ನು ನೋಡಬಹುದು. ಭಾಷಾವಾರು ಪ್ರಾಂತ್ಯಗಳ ನಿರ್ಮಾಣ ಅನಿವಾರ್ಯವಾಗುವ ಹೊತ್ತಿಗೆ ಆ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮೂರು ಕನ್ನಡ ನೆಲವಾಗಿದ್ದವು, ನಾಲ್ಕನೆಯ (ಗೂಡಲೂರು) ತಾಲೂಕಿನಲ್ಲಿ ಮಲಯಾಳಿ ಪ್ರಾಬಲ್ಯ. ಹೀಗಾಗಿ ಆ ಜಿಲ್ಲೆಯನ್ನು ಕರ್ನಾಟಕ (ಮೈಸೂರು) ಮತ್ತು ಕೇರಳ ರಾಜ್ಯಗಳ ನಡುವೆ ಹಂಚುವುದು ನ್ಯಾಯಸಮ್ಮತವಾಗಿತ್ತು. ಆದರೆ ಪ್ರಾಕೃತಿಕ ಸೌಂದರ್ಯ ಮತ್ತು ಚಹಾ ತೋಟಗಳಿಗೆ ಹೆಸರಾದ, ಗಿರಿಧಾಮಗಳ ಜತೆ ರಾಷ್ಟ್ರೀಯ ಮಹತ್ವದ ವೆಲ್ಲಿಂಗ್ಟನ್ ಸೇನಾ ತರಬೇತಿ ಕೇಂದ್ರವಿರುವ ಆ ಜಿಲ್ಲೆ ಇಡಿಯಾಗಿ ತಮಿಳುನಾಡು (ಮದ್ರಾಸ್) ರಾಜ್ಯಕ್ಕೆ ಸೇರಿದ್ದು ರಾಷ್ಟ್ರೀಯ ಸ್ತರದ ರಾಜಕಾರಣಿ ರಾಜಗೋಪಾಲಾಚಾರಿಯವರ ಕೈವಾಡದಿಂದ. ಅದನ್ನು ಪರಿಣಾಮಕಾರಿಯಾಗಿ ವಿರೋಧಿಸಿ ತಡೆಯಬಲ್ಲ ನಾಯಕರು ಅಂದು ಕರ್ನಾಟಕ ಮತ್ತು ಕೇರಳಗಳಲ್ಲಿರಲಿಲ್ಲ. ಇಂದು ಆ ಜಿಲ್ಲೆ ಇಡಿಯಾಗಿ ತಮಿಳುಮಯ. ಅದನ್ನು ತಮಿಳುನಾಡಿನ ಸರ್ಕಾರಗಳು ಸಾಧಿಸಿದ್ದು ಶ್ರೀಲಂಕಾದಲ್ಲಿ ಸಿಂಹಳೀಯ ಸರ್ಕಾರಗಳು ತಮಿಳರನ್ನು ಅವರ ನೆಲದಲ್ಲೇ ಮೂಲೆಗುಂಪಾಗಿಸಲು ಬಳಸಿದ ತಂತ್ರಗಳನ್ನೇ ಬಳಸಿ ಎಂದು ಪತ್ರಕರ್ತ ಕ್ಲಾಡ್ ಆಲ್ವಾರಿಸ್ ನಾಲ್ಕು ದಶಕಗಳ ಹಿಂದೆಯೇ, ತಮಿಳುನಾಡಿನ ರಾಜಕಾರಣಿಗಳು ಶ್ರೀಲಂಕಾ ತಮಿಳರ ಸಮಸ್ಯೆಯ ಕುರಿತಾಗಿ ದನಿಯೆತ್ತುತ್ತಿದ್ದ ಸಮಯದಲ್ಲೇ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ವಿವರವಾದ ಲೇಖನವೊಂದರಲ್ಲಿ ದಾಖಲಿಸಿದ್ದರು. ಹಾಗೆಯೇ ತಮಿಳು-ತೆಲುಗು ಗಡಿ ಭಾಗದ, ತೆಲುಗರು ಅಧಿಕವಾಗಿದ್ದ ತಿರುತ್ತಣಿ ಪುಣ್ಯಕ್ಷೇತ್ರ ತಮಿಳುನಾಡಿಗೆ ಸೇರುವುದರಲ್ಲೂ ರಾಜಗೋಪಾಲಾಚಾರಿಯವರ ಪಾತ್ರವಿತ್ತು. ತಿರುಪತಿ ಮತ್ತು ತಿರುತ್ತಣಿ ಪುಣ್ಯಕ್ಷೇತ್ರಗಳೆರಡನ್ನೂ ನಿಮಗೇ ಕೊಡಲಾಗದು, ಒಂದನ್ನು ಆಯ್ದುಕೊಳ್ಳಿ ಎಂದು ರಾಷ್ಟ್ರೀಯ ನಾಯಕ ರಾಜಗೋಪಾಲಾಚಾರಿ ಖಡಾಖಂಡಿತವಾಗಿ ಹೇಳಿದಾಗ ವಾಸ್ತವದ ಅರಿವಿನ ಜತೆ ಭವಿಷ್ಯದ ಮುನ್ನೋಟವೂ ಇದ್ದ ಜಾಣ ತೆಲುಗರು ತಿರುಪತಿಯನ್ನು ಆಯ್ದುಕೊಂಡರು.