ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಇಂಧನ ಲೂಟಿಗೆ ಪ್ರಧಾನಿ ಮೋದಿಯವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದರೂ, ಮಾಜಿ ಪ್ರಧಾನಿ ಡಾ. ಮನ್‌ಮೋಹನ್ ಸಿಂಗ್ ಅವರು ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಬೀಳದಂತೆ ಸಬ್ಸಿಡಿ ನೀಡಿ ದೇಶದ ನಾಗರಿಕರನ್ನು ರಕ್ಷಿಸಿದ್ದರು. ಆದರೆ ಪ್ರಸ್ತುತ ಎನ್‌ಡಿಎ ಸರ್ಕಾರವು ಸಾರ್ವಜನಿಕರನ್ನು ಕೇವಲ ಸುಲಿಗೆ ಮಾಡಲು ಮಾತ್ರ ಸೀಮಿತವಾಗಿದೆ ಎಂದು ದೂರಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವುದರಿಂದ ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.